'ದೇವೇಗೌಡರು ಅಶ್ವಮೇಧದ 'ಕುದುರೆ' ಇದ್ದಂತೆ'
ಬೇಲೂರು, ಮಾ.12: ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಅಶ್ವಮೇಧ ಯಾಗದ ಕುದುರೆ ಇದ್ದಂತೆ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಹಾಡಿ ಹೊಗಳಿದ್ದಾರೆ.
ಬೇಲೂರಿನಲ್ಲಿ ಬುಧವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆ, ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ದೇವೇಗೌಡರ ಪುತ್ರ ರೇವಣ್ಣ ಅವರು, ರಾಜಕೀಯದಲ್ಲಿ ದೇವೇಗೌಡ ಅವರು ಅಶ್ವಮೇಧ ಯಾಗದ ಕುದುರೆ ಇದ್ದಂತೆ ಅವರನ್ನು ಯಾರೂ ಕಟ್ಟಿ ಹಾಕಲು ಸಾಧ್ಯವಿಲ್ಲ. ತನ್ನ ಗುರಿ ಮುಟ್ಟುವ ತನಕ ನಿಲ್ಲುವುದಿಲ್ಲ. 'ಕೈಲಿ ಆಗದವರು ಮೈ ಪರೆಚಿಕೊಂಡರಂತೆ' ಎಂಬಂತೆ ಅವರ ವಿರುದ್ಧ ಅಪಪ್ರಚಾರ ಮಾಡುವುದೇ ಕೆಲವರಿಗೆ ಕಾಯಕವಾಗಿದೆ ಎಂದರು
ಯಗಚಿ ಅಣೆಕಟ್ಟು, ಜಿಲ್ಲೆಯಲ್ಲಿ ಅನೇಕ ಶಾಲಾ ಕಟ್ಟಡಗಳು, ಸಮುದಾಯ ಭವನಗಳು ದೇವೇಗೌಡರ ಕಾಲದಲ್ಲಿ ಆಗಿದ್ದು ಎಂಬುದನ್ನು ವಿಪಕ್ಷದವರು ಮರೆತ್ತಿದ್ದಾರೆ. 250 ಕೋಟಿ ರು.ಗೂ ಅಧಿಕ ವೆಚ್ಚದ ಕಾಮಗಾರಿ ನಡೆದಿದೆ.

ಕ್ಲೀನ್ ರಾಜಕಾರಣಿ: ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರಲ್ಲಿ ಅನೇಕರು ಭ್ರಷ್ಟಾಚಾರದಲ್ಲಿ ನಂ.1 ಆಗಲು ಪೈಪೋಟಿ ನಡೆಸಿದ್ದಾರೆ. ದೇವೇಗೌಡರ ರಾಜಕೀಯ ಬದುಕಿನಲ್ಲಿ ಒಂದೇ ಒಂದು ಭ್ರಷ್ಟಾಚಾರದ ಕಪ್ಪುಚುಕ್ಕೆ ಇಲ್ಲ.ರಾಜ್ಯಕ್ಕೆ ದೇವೇಗೌಡರು 16 ರೈಲು ಯೋಜನೆ ಮಂಜೂರಾತಿ ಮಾಡಿಸಿ ಬಂದವರು. ರೈತರಿಗಾಗಿ ಇಂದಿಗೂ ಶ್ರಮಿಸುತ್ತಿದ್ದಾರೆ ಎಂದರು.
ಶಾದಿಭಾಗ್ಯ, ಅನ್ನಭಾಗ್ಯ, ಕ್ಷೀರಭಾಗ್ಯದಲ್ಲಿ ಮುಳುಗಿರುವ ಕಾಂಗ್ರೆಸ್ಸಿಗರು ರೈತರನ್ನು ಮರೆತ್ತಿದ್ದಾರೆ. ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ರೈತ ಪರ ಯೋಜನೆ ರೂಪಿಸುತ್ತಿಲ್ಲ. ಮಠ ಮಾನ್ಯಗಳಿಗೆ ಹಣ ಮಂಜೂರು ಮಾಡುವ ಬದಲು ರೈತರ ಬಗ್ಗೆ ಕಾಳಜಿ ಇದ್ದರೆ ಗೊಬ್ಬರಕ್ಕೆ ಸಬ್ಸಿಡಿ ಕೊಡಬೇಕಿತ್ತು. ತೆಂಗು, ಅಡಿಕೆ, ಕಾಫಿ ಬೆಳೆಗಾರರ ಗೋಳು ಕೇಳಲು ರಾಜ್ಯ, ಕೇಂದ್ರ ಸರ್ಕಾರ ವಿಫಲವಾಗಿದೆ.
ಜೆಡಿಎಸ್ ನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ. ದೇವೇಗೌಡರನ್ನು ಗೆಲ್ಲಿಸುವ ಭರವಸೆ ಕಾರ್ಯಕರ್ತರಿಂದ ಸಿಕ್ಕಿದೆ. ವಿಧಾನಸಭೆ ಚುನಾವಣೆಯಲ್ಲಿ ಕಾಣದ ಕೈಗಳ ಕೈವಾಡದಿಂದ ನಾವು ಸೋಲಬೇಕಾಯಿತು. ಆದರೆ, ಲೋಕಸಭೆ ಫಲಿತಾಂಶ ವಿರೋಧಗಳ ಕಣ್ಣು ಕುಕ್ಕಲಿದೆ ಎಂದರು.












Click it and Unblock the Notifications