ರಾಜಕಾರಣಿಗಳಿಗೆ ನಾಲಿಗೆ ಮೇಲೆ ಹಿಡಿತವಿರಬೇಕು: ಹೈಕೋರ್ಟ್
ಬೆಂಗಳೂರು, ಜೂನ್ 22: ಚುನಾವಣೆ ಸಂದರ್ಭದಲ್ಲಿ ಮನುಷ್ಯನ ನಾಲಿಗೆ ಮೇಲೆ ಹಿಡಿತವಿರಬೇಕು. ದೇಶದ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಸಚಿವರ ವಿರುದ್ಧ ದುರ್ಭಾಷೆ ಬಳಸಬಾರದು ಎಂದು ಕರ್ನಾಟಕ ಹೈಕೋರ್ಟ್ ಜನಪ್ರತಿನಿಧಿಗಳಿಗೆ ಕಿವಿಮಾತು ಹೇಳಿದೆ.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಂಚಿಕೊಂಡ ಪ್ರಕರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಮತ್ತು ಸಾಮಾಜಿಕ ಜಾಲತಾಣದ ಉಸ್ತುವಾರಿ ಪ್ರಶಾಂತ್ ಮಾಕನೂರು ಸೇರಿ ಇಡೀ ರಾಜಕಾರಣಿಗಳಿಗೆ ಸೂಚ್ಯವಾಗಿ ಹೇಳಿತು.

ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಮತ್ತು ಪ್ರಶಾಂತ್ ಮಾಕನೂರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ಆಲಿಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು, ಅರ್ಜಿದಾರರ ವಿರುದ್ಧ ಬೆಂಗಳೂರು ನಗರದ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎರಡು ಪ್ರತ್ಯೇಕ ಎಫ್‌ಐಆರ್‌ಗಳಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ನ್ಯಾಯಮೂರ್ತಿಗಳು, ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಸಚಿವರ ವಿರುದ್ಧ ದುರ್ಭಾಷೆ ಬಳಸಬಾರದು. ಗೌರವದ ಹಾಗೂ ಸುಂದರ ಭಾಷೆ ಬಳಸಬೇಕು. ಮಾತಿನಲ್ಲಿ ಪ್ರೀತಿ, ಜವಾಬ್ದಾರಿ, ಸೌಜನ್ಯ ಹಾಗೂ ಸಂಯಮ ಇರಬೇಕು. ಚುನಾವಣೆ ವೇಳೆ ಜನರಿಗೆ ಜ್ವರ ಬಂದಿರುತ್ತದೆ. ಅಂತಹ ಸಂದರ್ಭದಲ್ಲಿ ಏನೋನೋ ಮಾತನಾಡಿ ಜನರನ್ನು ಉದ್ವೇಗಕ್ಕೆ ಗುರಿಪಡಿಸಬಾರದು. ಎಚ್ಚರಿಕೆಯಿಂದ ಮಾತನಾಡಬೇಕು. ನಾಲಿಗೆ ಮತ್ತು ಮೆದುಳಿನ ನಡುವಿನ ಸೇತುವೆ ಕುಸಿಯಬಾರದು ಎಂದು ಸಲಹೆ ನೀಡಿದರು.
'ಇಂದಿರಾ ಜವಾಬ್ದೋ' ಎಂಬ ಪುಸ್ತಕವನ್ನು ಬರೆಯಲಾಗಿತ್ತು. ಅದಕ್ಕೆ ಮುನ್ನಡಿ ಬರೆಯಲು ಮಾಜಿ ಪ್ರಧಾನಿ ವಾಜಪೇಯಿ ಅವರಿಗೆ ಕೋರಲಾಗಿತ್ತು. ಅದಕ್ಕೆ ಒಪ್ಪಿದ್ದ ಅವರು, ಇಂದಿರಾ ಅಲ್ಲ, 'ಇಂದಿರಾ ಜೀ ಜವಾಬ್ದೋ' ಎಂಬುದಾಗಿ ಬದಲಿಸಬೇಕು ಎಂದು ಷರತ್ತು ವಿಧಿಸಿದ್ದರು ಎಂದು ಸ್ಮರಿಸಿದರು.
ಅಲ್ಲದೆ, ವಿರೋಧ ಪಕ್ಷದವರು ಎಂದರೆ ಶತ್ರುಗಳಲ್ಲ. ಈಗ ಅವರ ಪಕ್ಷ ಅಧಿಕಾರದಲ್ಲಿ ಇರಬಹುದು. ಮುಂದಿನ ಬಾರಿ ಮತ್ತೊಂದು ಪಕ್ಷದವರು ಅಧಿಕಾರಕ್ಕೆ ಬರಬಹುದು. ಆದರೆ, ಸಾಂವಿಧಾನಿಕ ಹುದ್ದೆಯಲ್ಲಿರುವ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು. ವಿಶೇಷವಾಗಿ ಟ್ವೀಟ್‌ಗಳು ಸ್ವೀಟ್ ಆಗಿರಬೇಕು ಹೊರತು ಅಸಿಡಿಟಿಯಿಂದ ಕೂಡಿರಬಾರದು. ದುರ್ಭಾಷೆ ಬಳಸಿದರೆ ನಾಗರಿಕತೆಯ ಮೌಲ್ಯಗಳು ಏನಾಗಬೇಕು?. ಶತೃಗಳನ್ನೂ ಗೌರವದಿಂದ ಕಾಣುವ ದೇಶ ನಮ್ಮದು ಎನ್ನುವುದನ್ನು ಯಾರೂ ಮರೆಯಬಾರದು ಎಂದು ನ್ಯಾಯಮೂರ್ತಿ ಬುದ್ಧಿಮಾತು ಹೇಳಿದರು.
ಎಲ್ಲರನ್ನೂ ಜೈಲಿಗೆ ಹಾಕ್ತಿರಾ?: ರಾಜ್ಯ ಸರ್ಕಾರಿ ಅಭಿಯೋಜಕ ಬಿ. ಎನ್. ಜಗದೀಶ್, ಚುನಾವಣೆ ವೇಳೆ ಕೆಲವೊಂದು ಅಹಿತಕರ ಘಟನೆ ನಡೆದಿರುವುದು ನಿಜ. ಅವುಗಳನ್ನು ಸರ್ಕಾರ ಸಹ ಖಂಡಿಸುತ್ತದೆ. ಆದರೆ, ಸಾರ್ವಜನಿಕವಾಗಿ ಸಿಎಂ ಹಾಗೂ ಡಿಸಿಎಂ ಅವರನ್ನು ನಿಂದಿಸುವುದು ಸರಿಯಲ್ಲ. ಹಾಗಾಗಿ, ವಿಚಾರಣೆಗೆ ಹಾಜರಾಗಲು ಅರ್ಜಿದಾರರಿಗೆ ಸೂಚಿಸುವುದಿಲ್ಲ. ಆದರೆ, ತನಿಖೆ ಮುಂದುವರಿಯಲು ಅನುಮತಿ ನೀಡಬೇಕು ಎಂದು ಕೋರಿದರು.
ಅದಕ್ಕೆ ಒಪ್ಪದ ನ್ಯಾಯಪೀಠ, ಚುನಾವಣೆ ಈಗಾಗಲೇ ಮುಗಿದಿದೆ. ಎಲ್ಲರ ಮೇಲೆ ತನಿಖೆ ನಡೆಸಬೇಕು ಎಂದಾದರೆ ಹೇಗೆ?. ಎಲ್ಲರನ್ನೂ ಜೈಲಿನಲ್ಲಿ ಕೂರಿಸೋದು ಹಾಗೂ ಎಲ್ಲರನ್ನೂ ಕಸ್ಟಡಿಗೆ ಕೇಳುವುದು ಸರಿಯಾದ ದಾರಿಯಲ್ಲ. ಹೀಗೆ ಮಾಡುತ್ತಾ ಹೋದರೆ ನಾಳೆ ಹೊರಗಡೆ ಇರುವವರಿಗಿಂತ ಜೈಲು ಹಾಗೂ ಕಸ್ಟಡಿಯಲ್ಲಿ ಇರುವವರ ಸಂಖ್ಯೆಯೇ ಹೆಚ್ಚಿರುತ್ತದೆ. ಅವರನ್ನು ಪೋಷಿಸಲು ಖರ್ಚು ಯಾರು ಕೊಡುತ್ತಾರೆ?. ಹೀನ ಅಪರಾಧ ಕೃತ್ಯಗಳನ್ನು ಎಸಗಿದ್ದವರನ್ನು ಕಸ್ಟಡಿಗೆ ಕೇಳುವುದು ಸಮಂಜಸ ಎಂದು ನ್ಯಾಯಪೀಠ ಹೇಳಿತು.












Click it and Unblock the Notifications