ವಿದ್ಯಾರ್ಥಿನಿ ಆತ್ಮಹತ್ಯೆ; ಶಿಕ್ಷಕನ ವಿರುದ್ಧದ ಪ್ರಕರಣ ರದ್ದಿಗೆ ನಿರಾಕರಿಸಿದ ಕೋರ್ಟ್
ಬೆಂಗಳೂರು, ಜುಲೈ 07: ವಿದ್ಯಾರ್ಥಿನಿಯೊಬ್ಬರಿಗೆ ಬೆದರಿಕೆ ಹಾಕುವ ಮೂಲಕ ಆತ್ಮಹತ್ಯೆಗೆ ಕಾರಣವಾದ ಶಿಕ್ಷಕರ ವಿರುದ್ಧದ ಪ್ರಕರಣ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಅಷ್ಟೇ ಅಲ್ಲದೆ, ವಿದ್ಯಾರ್ಥಿ ದೆಸೆ ಅತ್ಯಂತ ಅಮೂಲ್ಯ, ಶಿಕ್ಷಕರು ಶಿಸ್ತು ಕಲಿಸುವ ನೆಪದಲ್ಲಿ ಜೀವಕ್ಕೆ ಹಾನಿಯಾಗುವಂತೆ ಕೃತ್ಯಗಳಿಗೆ ಮುಂದಾಗಬಾರದು ಎಂದು ಅಭಿಪ್ರಾಯಪಟ್ಟಿದೆ.
ವಿದ್ಯಾರ್ಥಿನಿಯೊಬ್ಬರಿಗೆ ಸಹಪಾಠಿಯೊಬ್ಬರನ್ನು ಚುಂಬಿಸುವ ವೀಡಿಯೊವನ್ನು ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕುವ ಮೂಲಕ ವಿದ್ಯಾರ್ಥಿನಿ ಸಾವಿಗೆ ಕಾರಣವಾಗಿದ್ದ ಆರೋಪದಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಧರ್ಮಸ್ಥಳದ ಎಸ್‌ಡಿಎಂ ಪ್ರೌಢ ಶಾಲೆ ಶಿಕ್ಷಕರಾದ ರೂಪೇಶ್ ಮತ್ತು ಸದಾನಂದ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶವನ್ನು ನೀಡಿದೆ.

ಹೈಕೋರ್ಟ್ ಆದೇಶವೇನು?: ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ, "ಇದೊಂದು ಸೂಕ್ಷ್ಮ ಪ್ರಕರಣವಾಗಿದ್ದು ಘಟನೆ ಕುರಿತು ವಿಚಾರಣೆ ನಡೆಸಬೇಕಾದ ಅಗತ್ಯವಿದೆ. ಹದಿಹರೆಯದ ಮಕ್ಕಳಿಗೆ ಶಿಕ್ಷಕರು ಬೋಧನೆ ಮಾಡುವ ಸಂದರ್ಭದಲ್ಲಿ ಅವರ ಮಾನಸಿಕ ಸ್ಥಿತಿಗತಿ ಗಮನದಲ್ಲಿಟ್ಟುಕೊಳ್ಳಬೇಕು ಬದಲಿಗೆ ಮಕ್ಕಳನ್ನು ನಿರ್ಜೀವಿಗಳಂತೆ ನೋಡಬಾರದು" ಎಂದು ತಿಳಿಸಿದೆ.
ಶಿಕ್ಷಕರು ಮತ್ತು ಬೋಧಕರ ನಡುವೆ ಸೌರ್ಹಾದ ಸಂಬಂಧವಿರಬೇಕು. ಮಕ್ಕಳ ವಿಚಾರದಲ್ಲಿ ಶಿಕ್ಷಕರಲ್ಲಿನ ಸಂಕುಚಿತ ದೃಷ್ಟಿಕೋನ ಬದಲಾಗಬೇಕು. ವಿದ್ಯಾರ್ಥಿಗಳ ಜೀವನ ಅತ್ಯಂತ ಅಮೂಲ್ಯವಾದ್ದಾಗಿದ್ದು, ಶಿಕ್ಷಕರು ಶಿಸ್ತು ಕಲಿಸುವ ನೆಪದಲ್ಲಿ ಕ್ಷಮಿಸಲಾಗದ ಕೃತ್ಯಗಳನ್ನು ಮಾಡುವ ಮೂಲಕ ಮಕ್ಕಳ ಜೀವ ಆಕಸ್ಮಿಕವಾಗಿ ಕಳೆದುಕೊಳ್ಳುವಂತೆ ಮಾಡಬಾರದು ಎಂದು ಪೀಠ ತಿಳಿಸಿದೆ.
ಅಲ್ಲದೆ, ಶಿಕ್ಷಕ ಸದಾನಂದ ಎಂಬುವರು ಮೃತ ವಿದ್ಯಾರ್ಥಿನಿ ಮತ್ತೊಬ್ಬ ಯುವಕನನ್ನು ಚುಂಬಿಸುತ್ತಿರುವ ವಿಡಿಯೋ ತನ್ನ ಬಳಿ ಇದೆ. ಅದನ್ನು ಎಲ್ಲರಿಗೂ ತಿಳಿಯುವಂತೆ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂಬುದಾಗಿ ಮೃತ ವಿದ್ಯಾರ್ಥಿನಿ ಮರಣಪೂರ್ವ ಹೇಳಿಕೆ ನೀಡಿದ್ದಾರೆ. ಆದರೆ, ಶಿಕ್ಷಕರಾಗಿರುವ ಅರ್ಜಿದಾರರು ವಿದ್ಯಾರ್ಥಿನಿ ಅಶಿಸ್ತಿನಿಂದ ನಡೆದುಕೊಂಡಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ. ವಿದ್ಯಾರ್ಥಿನಿ ಮತ್ತೊಬ್ಬ ಯುವಕನ ಜೊತೆ ಮಾತನಾಡುವುದು ಅಶಿಸ್ತು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.
ಮೃತ ವಿದ್ಯಾರ್ಥಿನಿ 14 ವರ್ಷದವರಾಗಿದ್ದು, ದೈಹಿಕ ಮತ್ತು ಮಾನಸಿಕವಾಗಿ ಬದಲಾಗುವ ಹಂತದ್ದಲ್ಲಿದ್ದರು. ಅಂತಹ ಮಕ್ಕಳ ಜೊತೆ ಸಹಾನುಭೂತಿಯಿಂದ ವ್ಯವಹರಿಸಬೇಕು. ಕಾಲ ಬದಲಾಗಿದ್ದು, ಅದಕ್ಕೆ ಅನುಗುಣವಾಗಿ ನಾವು ಬದಲಾಗಬೇಕು ಎಂಬ ಅಂಶ ಶಿಕ್ಷಕರು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಎಸ್‌ಡಿಎಂ ಪ್ರೌಢ ಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ ಮೃತಳು, ಅದೇ ಶಾಲೆಯಲ್ಲಿನ ಯುವಕನೊಂದಿಗೆ ನಿರಂತರವಾಗಿ ಮಾತನಾಡುತ್ತಿದ್ದರು. ಈ ಸಂಬಂಧ ಶಿಕ್ಷಕರು ಶಾಲೆಯ ಮುಖ್ಯೋಪಾಧ್ಯಾಯಿನಿ ಹಾಗೂ ವಿಧ್ಯಾರ್ಥಿನಿ ತಾಯಿಯ ಗಮನಕ್ಕೆ ತಂದಿದ್ದರು. ಈ ಸಂಬಂಧ ಶಾಲೆಗೆ ಬಂದಿದ್ದ ವಿದ್ಯಾರ್ಥಿನಿ ತಾಯಿ, ತನ್ನ ಮಗಳ ಬಗ್ಗೆ ಏನೇ ಆರೋಪವಿದ್ದರೂ, ಅದನ್ನು ಇತರೆ ಮಕ್ಕಳ ಮುಂದೆ ಬಹಿರಂಗ ಪಡಿಸಿ ಅವಮಾನಿಸದೆ ನನ್ನ ಗಮನಕ್ಕೆ ತರಬೇಕು. ಯಾವುದೇ ಕಾರಣಕ್ಕೂ ತನ್ನ ಮಗಳ ಘನೆತೆಗೆ ಮಸಿ ಬಳಿಯುವಂತಾಗಬಾರದು ಎಂದು ಶಿಕ್ಷಕರಿಗೆ ತಿಳಿಸಿದ್ದರು.
ಇದಾದ ಬಳಿಕವೂ ವಿದ್ಯಾರ್ಥಿನಿ ಆ ಯುವಕನೊಂದಿಗೆ ಮಾತನಾಡುವುದು ಮುಂದುವರೆದಿತ್ತು. ಇದರಿಂದ ಮೃತಳ ಕುರಿತು ಅರ್ಜಿದಾರ ರೂಪೇಶ್ ಇತರೆ ವಿದ್ಯಾರ್ಥಿಗಳಿಗೆ ತಿಳಿಸಿ ಅವಮಾನಿಸಿದ್ದರು. ಇದರಿಂದ ಸಂತ್ರಸ್ತೆ ಇಲಿ ಪಾಷಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಪ್ರಕರಣ ಸಂಬಂಧ ಅದೇ ಶಾಲೆಯ ಚಿತ್ರಕಲಾ ಶಿಕ್ಷಕ ರೂಪೇಶ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಸದಾನಂದ ವಿರುದ್ಧ ವಿದ್ಯಾರ್ಥಿನಿ ತಾಯಿ ದೂರು ಸಲ್ಲಿಸಿದ್ದರು.
ದೂರು ದಾಖಲಿಸಿಕೊಂಡಿದ್ದ ಧರ್ಮಸ್ಥಳ ಪೊಲೀಸರು ಆರಂಭದಲ್ಲಿ ಐಪಿಸಿಯ ವಿವಿಧ ಸೆಕ್ಷನ್‌ಗಳು, ಫೋಕ್ಸೋ ಮತ್ತು ಬಾಲನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯಡಿ ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಿದ್ದರು. ವಿದ್ಯಾರ್ಥಿಯ ಸಾವಿನ ನಂತರ, ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆಗಾಗಿ ಐಪಿಸಿ ಸೆಕ್ಷನ್ 305 ಅನ್ನು ಸೇರಿಸಿ ಎಫ್‌ಐಆರ್ ದಾಖಲಿಸಿ ವಿಚಾರಣೆ ಮುಂದುವರೆಸಿದ್ದರು. ಇದನ್ನು ರದ್ದುಗೊಳಿಸಲು ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಮೃತ ಮಗುವಿಗೆ ಶಿಸ್ತು ಕಲಿಸಲು ಮುಂದಾದ ಪರಿಣಾಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ ಪ್ರಚೋದನೆಯಂಬ ಅರ್ಥ ಬರುವುದಿಲ್ಲ. ಹೀಗಾಗಿ ಪ್ರಕರಣ ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದರು.












Click it and Unblock the Notifications