ಅಲಯನ್ಸ್ ವಿವಿಯ ಡಾ. ಮಧುಕರ್ ಅಂಗೂರ್ ವಿರುದ್ಧದ ಕೇಸ್ ರದ್ದು
ಬೆಂಗಳೂರು, ಮಾರ್ಚ್ 21: ಅಲಯನ್ಸ್ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಮಧುಕರ್ ಜಿ. ಅಂಗೂರ್ ವಿರುದ್ಧ ಜಾರಿ ನಿರ್ದೇಶನಾಲಯ ಹಣ ದುರ್ಬಳಕೆ ತಡೆ ಕಾಯಿದೆ (ಪಿಎಂಎಲ್‌ಎ) 2002 ಅಡಿ ಹೂಡಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದು ಮಾಡಿದೆ.
ಇದರಿಂದಾಗಿ ಮಧುಕರ್ ಅಂಗೂರ್‌ಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ತಾಂತ್ರಿಕ ಕಾರಣದಿಂದಾಗಿ ಪ್ರಕರಣ ರದ್ದುಗೊಳಿಸಲಾಗಿದ್ದು, ಜಾರಿ ನಿರ್ದೇಶನಾಲಯ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದರೆ ಪ್ರಕರಣಕ್ಕೆ ಮತ್ತೆ ಜೀವ ಬರುವ ಸಾಧ್ಯತೆ ಇದೆ.

ಅದಕ್ಕಾಗಿಯೇ ಈ ಪ್ರಕರಣದಲ್ಲಿ ಪ್ರತಿವಾದಿ ಜಾರಿ ನಿರ್ದೇಶನಾಲಯ ಅಗತ್ಯಬಿದ್ದರೆ ಸುಪ್ರೀಂಕೋರ್ಟ್ ಮುಂದೆ ಮರು ಪರಿಶೀಲನಾ ಅರ್ಜಿಯನ್ನು ಸಲ್ಲಿಸಿ ಅರ್ಜಿಯನ್ನು ಮತ್ತೆ ಪರಿಗಣಿಸುವಂತೆ ಕೋರಲು ಸ್ವತಂತ್ರ್ಯವಿದೆ ಎಂದು ನ್ಯಾಯಾಲಯ ಹೇಳಿದೆ.
ಮಧುಕರ್ ಅಂಗೂರ್ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾ. ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯಪೀಠ ಸುಪ್ರೀಂಕೋರ್ಟ್ ಪವನ್ ದಿಬ್ಬೂರ್ ವರ್ಸಸ್ ಜಾರಿ ನಿರ್ದೇಶಾಲಯದ ಪ್ರಕರಣದಲ್ಲಿ ನೀಡಿದ್ದ ತೀರ್ಪು ಆಧರಿಸಿ ಪ್ರಕರಣ ರದ್ದುಗೊಳಿಸಿ ಆದೇಶ ನೀಡಿದೆ.
ಎರಡೂ ಕಡೆ ವಾದ ಆಲಿಸಿದ ಬಳಿಕ ನ್ಯಾಯಾಲಯ, ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಐಪಿಸಿ ಸೆಕ್ಷನ್ 120ಬಿ ಆರೋಪ ಹೊರತುಪಡಿಸಿ ಇತರೆ ಅರೋಪಗಳು ಪಿಎಂಎಲ್ ಎ ಕಾಯಿದೆ ಶೆಡ್ಯೂಲ್ಡ್ ಅಪರಾಧಗಳ ಪಟ್ಟಿಯಲ್ಲಿ ಬರುವುದಿಲ್ಲ. ಆದ್ದರಿಂದ ಸುಪ್ರೀಂಕೋರ್ಟ್ ತೀರ್ಪು ನೀಡಿರುವಂತೆ ಪ್ರಕರಣ ಊರ್ಜಿತವಾಗುವುದಿಲ್ಲ. ಹಾಗಾಗಿ ಅದನ್ನು ಆಧರಿಸಿ ಪ್ರಕರಣವನ್ನು ರದ್ದುಪಡಿಸಲಾಗುತ್ತಿದೆ ಎಂದು ಆದೇಶ ನೀಡಿದೆ.
ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಐಪಿಸಿ ಸೆಕ್ಷನ್ 120 ಬಿ ಅಡಿಯಲ್ಲಿ ಕ್ರಿಮಿನಲ್ ಪಿತೂರಿ ಆರೋಪ ಇದ್ದಾಗ ಮಾತ್ರ ಅದು ಶೆಡ್ಯೂಲ್ಡ್ ಅಪರಾಧದ ವ್ಯಾಪ್ತಿಗೆ ಒಳಪಡುತ್ತದೆಂದು ಹೇಳಿರುವುದಾಗಿ ನ್ಯಾಯಪೀಠ ಆದೇಶಿಸಿದೆ.
ಪ್ರಕರಣ ಮುಂದುವರಿಸುವಂತಿಲ್ಲ: ತಮ್ಮ ಕಕ್ಷಿದಾರರ ಮೇಲೆ ಹೊರಿಸಲಾಗಿರುವ ಐಪಿಸಿ ಸೆಕ್ಷನ್ 120ಬಿ ಅಡಿಯ ಆರೋಪಗಳು ಪಿಎಂಎಲ್ ಎ ಕಾಯಿದೆಯ ಶೆಡ್ಯೂಲ್ಡ್ ಪಟ್ಟಿಯಲ್ಲಿ ಇಲ್ಲ ಹಾಗೂ ಪಿಎಂಎಲ್‌ಎ ಅಡಿ ಪ್ರಕರಣವನ್ನು ಮುಂದುವರಿಸುವಂತಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.
ಆದರೆ ಪ್ರತಿವಾದಿ ವಕೀಲರು, ಅರ್ಜಿದಾರರ ವಾದವನ್ನು ಗಂಭೀರವಾಗಿ ತಳ್ಳಿಹಾಕಿಲ್ಲ. ಬದಲಿಗೆ ಪವನ್ ದಿಬ್ಬೂರ್ ಪ್ರಕರಣದಲ್ಲಿ ನೀಡಿರುವ ತೀರ್ಪು ಮರು ಪರಾಮರ್ಶೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ರಿವ್ಯೂ ಅರ್ಜಿ ಹೂಡಲಾಗಿದೆ ಎಂದು ಹೇಳಿದ್ದರು.












Click it and Unblock the Notifications