ಮುರುಘಾಮಠದ ಆಡಳಿತಾಧಿಕಾರಿ ನೇಮಕ ರದ್ದಾಗಿದ್ದು ಏಕೆ?
ಬೆಂಗಳೂರು, ಮೇ 23; ಚಿತ್ರದುರ್ಗದ ಮುರುಘಾಮಠದ ಆಡಳಿತಾಧಿಕಾರಿ ನೇಮಕ ವಿಚಾರದಲ್ಲಿ ಸರ್ಕಾರಕ್ಕೆ ಹಿನ್ನಡೆಯಾಗಿದ್ದು, ಆಡಳಿತಾಧಿಕಾರಿ ನೇಮಕ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಜತೆಗೆ ಸರ್ಕಾರಕ್ಕೆ ನಿಯಮದ ಪ್ರಕಾರ ಆಡಳಿತಾಧಿಕಾರಿ ನೇಮಕ ಮಾಡುವ ಅಧಿಕಾರವೇ ಇಲ್ಲ ಎಂದು ನ್ಯಾಯಪೀಠ ಸಾರಿದೆ.
ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘ ರಾಜೇಂದ್ರ ಬೃಹನ್ಮಠದ (ಎಸ್‌ಜೆಎಂ) ಪೀಠಾಧಿಪತಿ ಡಾ. ಶಿವಮೂರ್ತಿ ಮರುಘಾ ಶರಣರು ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿನಿವೃತ್ತ ಐಎಎಸ್ ಅಧಿಕಾರಿ ಪಿ. ಎಸ್. ವಸ್ತ್ರದ್ ಅವರನ್ನು ಮಠದ ಆಡಳಿತಾಧಿಕಾರಿಯನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.

ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿದ ಸರ್ಕಾರದ ಆದೇಶ ರದ್ದು ಕೋರಿ ಶ್ರೀ ಜಗದ್ಗುರು ಮುರುಘರಾಜೇಂದ್ರ (ಎಸ್‌ಜೆಎಂ) ವಿದ್ಯಾಪೀಠದ ಅಧ್ಯಕ್ಷ , ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಹಾಗೂ ಭಕ್ತರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ, ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನ್ಯಾಯಪೀಠ ಸೋಮವಾರ ಪ್ರಕಟಿಸಿತು.
ಸರ್ಕಾರದ ಅಧಿಕಾರವಿಲ್ಲ: ಮಠಗಳ ಕಾರ್ಯ ನಿರ್ವಹಣೆ ನಿಯಂತ್ರಣ ಹೇರುವ ಕರ್ನಾಟಕ ಹಿಂದೂ ಧಾರ್ಮಿಕ ಮತ್ತು ಧರ್ಮದಾಯ ದತ್ತಿ ಸಂಸ್ಥೆಗಳು ಕಾಯ್ದೆ-1997ರ ಸೆಕ್ಷನ್ 78 ಅನ್ನು ತೆಗೆದುಹಾಕಲಾಗಿದೆ. ಈ ಕಾಯ್ದೆಗೆ 2011ರಲ್ಲಿತಿದ್ದುಪಡಿ ತರಲಾಗಿದೆ ಮತ್ತು ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದ ರಾಜ್ಯ ಸರ್ಕಾರ, ಮಠಗಳ ಆಡಳಿತ ನಿರ್ವಹಣೆ ನಿಯಂತ್ರಣ ವಿಚಾರವನ್ನು ಸರ್ಕಾರದ ಅಧಿಕಾರ ವ್ಯಾಪ್ತಿಯಿಂದ ಹೊರಗಿಡಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಹಾಗಾಗಿ ಮಠದ ನಿರ್ವಹಣೆಯಲ್ಲಿ ಮಧ್ಯಪ್ರವೇಶ ಮಾಡುವ ಹಾಗೂ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಲು ಸರ್ಕಾರಕ್ಕೆ ಅಧಿಕಾರ ಒದಗಿಸುವ ಯಾವುದೇ ಶಾಸನ ಇಲ್ಲವಾಗಿದೆ. ಹೀಗಿದ್ದರೂ ರಾಜ್ಯ ಸರ್ಕಾರವು ಸಂವಿಧಾನದ ಪರಿಚ್ಛೇದ 162ರ ಅಡಿಯ ಕಾರ್ಯಕಾರಿ ಅಧಿಕಾರವನ್ನು ಬಳಸಿ ಮರುಘಾಮಠದ ಆಡಳಿತ ನಿರ್ವಹಣೆಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿದೆ. ಇಂತಹ ಕಾರ್ಯಕಾರಿ ಆದೇಶದ ಮೂಲಕ ಮಠಕ್ಕೆ ಆಡಳೀತಾಧಿಕಾರಿಯನ್ನು ನೇಮಕ ಮಾಡಲು ರಾಜ್ಯ ಸರ್ಕಾರ ಶಾಸಕನಾತ್ಮಕ ಅಧಿಕಾರ ಹೊಂದಿಲ್ಲ ಎಂದು ಕೋರ್ಟ್ ಹೇಳಿದೆ. ಸರ್ಕಾರದ ಆದೇಶವು ಅಸಿಂಧುವಾಗಿದ್ದು, ಅದನ್ನು ರದ್ದುಪಡಿಸಲಾಗಿದೆ ಎಂದು ಹೈಕೋರ್ಟ್ ಆದೇಶಿಸಿದೆ.
ಸೂಕ್ತ ಪರಿಹಾರ ಕಂಡುಕೊಳ್ಳಿ: ಆಡಳಿತಾಧಿಕಾರ ನೇಮಕಾತಿ ಆದೇಶವು ಕಾನೂನು ಬಾಹಿರವಾಗಿ ಆಗಿರುವುದರಿಂದ ಸರ್ಕಾರದ ಆದೇಶವನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದ ಹೈಕೋರ್ಟ್, ಡಾ. ಶಿವಮೂರ್ತಿ ಮರುಘಾ ಶರಣು ಜೈಲಿನಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಠ ಮತ್ತು ಅದಕ್ಕೆ ಸಂಬಂಧಿತ ಶೈಕ್ಷಣಿಕ ಸಂಸ್ಥೆಗಳ ಆಡಳಿತ ಹಾಗೂ ನಿರ್ವಹಣೆಗಾಗಿ ಮಠದ ಭಕ್ತರು ಮತ್ತು ವೀರಶೈವ/ ಲಿಂಗಾಯತ ಸಮುದಾಯದ ಪ್ರಮುಖ ವ್ಯಕ್ತಿಗಳು ಸೂಕ್ತ ಕ್ರಿಯಾ ಯೋಜನೆ ರೂಪಿಸಬೇಕಿದೆ ಎಂದು ಹೇಳಿದೆ.
ಈ ಮಧ್ಯಂತರ ವ್ಯವಸ್ಥೆ ಮಾಡುವರೆಗೆ ಸರ್ಕಾರ ನೇಮಿಸಿರುವ ಆಡಳಿತಾಧಿಕಾರಿಯನ್ನು ಮುಂದಿನ 6 ವಾರಗಳ ಅಲ್ಪಾವಧಿಗೆ ಮುಂದುವರಿಸಲಾಗುವುದು. ಈ ಸಂದರ್ಭದಲ್ಲಿ ಅವರು ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳದೇ ದೈನಂದಿನ ಚಟುವಟಿಕೆಯನ್ನಷ್ಟೇ ನಿರ್ವಹಿಸಬೇಕು ಎಂದು ಸ್ಪಷ್ಟಪಡಿಸಿದೆ.
ಅಲ್ಲದೆ, ಟ್ರಸ್ಟಿಯನ್ನು ತೆಗೆದುಹಾಕುವ, ಹೊಸ ಟ್ರಸ್ಟಿಯನ್ನು ನೇಮಕ ಮಾಡುವ ಮತ್ತು ಯಾವುದೇ ಟ್ರಸ್ಟಿಯ ಸುಪರ್ದಿಗೆ ಟ್ರಸ್ಟ್‌ನ ಆಸ್ತಿ ಒಪ್ಪಿಸುವುದು ಸೇರಿದಂತೆ ಸಿವಿಲ್ ಕ್ರಿಯಾ ಸಂಹಿತೆಯ ಸೆಕ್ಷನ್ 92 ಅಡಿ ವ್ಯಾಪ್ತಿಗೆ ಪ್ರಕರಣದ ವಿಚಾರ/ ವ್ಯಾಜ್ಯಗಳ ಪರಿಹಾರಕ್ಕಾಗಿ ವೀರಶೈವ/ ಲಿಂಗಾಯತ ಸಮುದಾಯದ ಪ್ರಮುಖ ವ್ಯಕ್ತಿಗಳು ಹಾಗೂ ಭಕ್ತಾಧಿಕಾರಿಗಳು ಸಂಬಂಧಪಟ್ಟ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿ ಪರಿಹಾರ ಪಡೆದುಕೊಳ್ಳಬಹುದು. ಮರುಘಾ ಶರಣರು ನ್ಯಾಯಾಂಗ ಬಂಧನದಲ್ಲಿ ಮುಂದವರಿಯುವುದರಿಂದ ಮಠದ ಮತ್ತು ಅದರ ಸಂಸ್ಥೆಗಳ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಎತ್ತೆಚ್ಚುಕೊಂಡು ಪರಿಹರಿಸಬೇಕಿದೆ. ಆಡಳಿತ ನಿರ್ವಹಣೆ ಪರಿಣಾಮಕಾರಿಯಾಗಬೇಕಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಕರಣದ ಹಿನ್ನೆಲೆ ಏನು?; ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯ ಸೆಕ್ಷನ್‌ಗಳಾದ 17, 5(ಎಲ್), 6, 7 ಹಾಗೂ ಐಪಿಸಿ ಸೆಕ್ಷನ್‌ಗಳಾದ 376(2), 376 (3), 149 ಅಡಿ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿದಾಖಲಾಗಿದ್ದ ಪ್ರಕರಣವನ್ನು ಚಿತ್ರದುರ್ಗದ ಗ್ರಾಮೀಣ ಠಾಣೆಗೆ ವರ್ಗಾಯಿಸಲಾಗಿತ್ತು.
ಪ್ರಕರಣ ಸಂಬಂಧ 2022ರ ಸೆ.1ರಂದು ಮುರುಘಾ ಶರಣರನ್ನು ಬಂಧಿಸಲಾಗಿದೆ. ಆ ನಂತರವೂ ಮತ್ತೊಂದು ಪೋಕ್ಸೊ ಪ್ರಕರಣ ಸ್ವಾಮೀಜಿ ವಿರುದ್ಧ ದಾಖಲಾಗಿದ್ದು, ಸದ್ಯ ಅವರು ಚಿತ್ರದುರ್ಗದ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಮಧ್ಯೆ ಮಠದ ಆಡಳಿತ ನಿರ್ವಹಣೆಗಾಗಿ ಆಡಳಿತಾಧಿಕಾರಿ ನೇಮಕ ಮಾಡಿ 2022ರ ಡಿ.13ರಂದು ಸರ್ಕಾರ ಆದೇಶ ಹೊರಡಿಸಿತ್ತು. ಇದಾದ ಬಳಿಕ ಪೀಠಾಧಿಪತಿಗಳ ಅಧಿಕಾರ ಚಲಾವಣೆಗೆ ನಿರ್ಬಂಧ ವಿಧಿಸಿ 2022ರ ಡಿ.15ರಂದು ವಿಚಾರಣಾ ನ್ಯಾಯಾಲಯ ಆದೇಶಿಸಿತ್ತು.












Click it and Unblock the Notifications