ಚೆಕ್‌ಗೆ ಸಹಿ ಹಾಕಲು ಮುರುಘಾ ಸ್ವಾಮೀಜಿಗೆ ಹೈಕೋರ್ಟ್ ಅನುಮತಿ
ಬೆಂಗಳೂರು.ಸೆ.30. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗದ ಮುರುಘರಾಜೇಂದ್ರ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಸ್ವಾಮೀಜಿಗೆ ಕೊನೆಗೂ ಚೆಕ್ ಗೆ ಸಹಿ ಹಾಕಲು ಹೈಕೋರ್ಟ್ ಶುಕ್ರವಾರ ಅನುಮತಿ ನೀಡಿದೆ.
ಆರೋಪಿ ಶಿವಮೂರ್ತಿ ಶರಣರು ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ವಿಚಾರಣೆ ನಂತರ ಅನುಮತಿ ನೀಡಿತು.
ಸಿಬ್ಬಂದಿಗೆ ವೇತನಕ್ಕೆ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಅನುಮತಿ ನೀಡುತ್ತಿರುವುದಾಗಿ ನ್ಯಾಯಾಲಯ ಹೇಳಿದೆ.
ಮಠದ ವಿದ್ಯಾಪೀಠ ಸಂಸ್ಥೆಗಳ ಉದ್ಯೋಗಿ ಹಾಗೂ ಸಿಬ್ಬಂದಿಗೆ ವೇತನ ನೀಡುವುದಕ್ಕಾಗಿ ಅ.3, 6 ಮತ್ತು 10 ರಂದು ಚೆಕ್ ಗಳಿಗೆ ಮಾತ್ರ ಸಹಿ ಹಾಕಬಹುದು. ಸಹಿ ಪಡೆಯುವ ವ್ಯಕ್ತಿ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳಬೇಕು. ಈ ಪ್ರಕ್ರಿಯೆ ವೇಳೆ ತನಿಖಾಧಿಕಾರಿ ಹಾಗೂ ಜೈಲು ಅಧೀಕ್ಷಕರು ಉಪಸ್ಥಿತರಿರಬೇಕು ಎಂದು ನ್ಯಾಯಪೀಠ ಷರತ್ತು ವಿಧಿಸಿದೆ. ಜತೆಗೆ ಸಹಿ ಮಾಡಿದ ಚೆಕ್ ಗಳ ನಕಲು (ಜೆರಾಕ್ಸ್) ಪ್ರತಿಗಳನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನ್ಯಾಯಪೀಠ ಸೂಚನೆ ನೀಡಿದೆ.
ಪವರ್ ಆಫ್ ಅಟಾರ್ನಿ:
ಚೆಕ್‌ಗೆ ಸಹಿ ಹಾಕುವ ಈ ಅನುಮತಿ ಅಕ್ಟೋಬರ್ ತಿಂಗಳಿಗೆ ಮಾತ್ರ ಈ ಆದೇಶ ಅನ್ವಯ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ, ಮುಂದಿನ ತಿಂಗಳಿನಿಂದ ಚೆಕ್ ಗಳಿಗೆ ಸಹಿ ಹಾಕುವ ಅಧಿಕಾರವನ್ನು ಸ್ವಾಮೀಜಿಯಿಂದ ಮತ್ತೊಬ್ಬರಿಗೆ ವರ್ಗಾಯಿಸುವ ಸಂಬಂಧ ಪವರ್ ಆಫ್ ಅಟಾರ್ನಿ ವ್ಯವಸ್ಥೆ ಮಾಡಬೇಕು. ಈ ಸಂಬಂಧದ ಮನವಿಯನ್ನು ವಿಚಾರಣಾ ನ್ಯಾಯಾಲಯ ಸಲ್ಲಿಸಿಬೇಕು. ನ್ಯಾಯಾಲಯ ಮನವಿ ಪರಿಗಣಿಸಿ ಕಾನೂನು ಪ್ರಕಾರ ಆದೇಶ ಮಾಡಬಹುದು ಎಂದು ನ್ಯಾಯಪೀಠ ಆದೇಶ ನೀಡಿದೆ.
ಇದಕ್ಕೂ ಮುನ್ನ ಸ್ವಾಮೀಜಿ ಪರ ವಕೀಲರು, ಚಕ್ ಗೆ ಸಹಿ ಹಾಕುವ ಕುರಿತು ವಿವರವಾದ ಮಾಹಿತಿ ಸಲ್ಲಿಸಿದರು.

ನ್ಯಾಯಪೀಠ ಅಚ್ಚರಿ:
ಗುರುವಾರ ಚೆಕ್ ಗಳನ್ನು ವಿವರವಾಗಿ ಪರಿಶೀಲಿಸಿದ ನ್ಯಾಯಪೀಠ, "ಎಲ್ಲಾ ಚೆಕ್ ಗಳೂ ಸೆಲ್ಫ್ ಆರ್ ಟಿ ಜಿ ಎಸ್ ಎಂದಿವೆ.14,30 ಲಕ್ಷಗಳಷ್ಟು ಬೃಹತ್ ಮೊತ್ತದ ಈ ಚೆಕ್ ಗಳನ್ನು ಸೆಲ್ಫ್ ಎಂದು ನಮೂದಿಸಿಕೊಂಡು ಬಂದಿದ್ದೀರಿ. ಯಾಕೊ ಸರಿ ಕಾಣುತ್ತಿಲ್ಲ.
ಈ ಮನವಿಯಲ್ಲಿ ಸ್ಪಷ್ಟತೆಯೇ ಇಲ್ಲ. ನೌಕರರಿಗೆ ಸಂಬಳ ನೀಡಬೇಕಾದ ಚೆಕ್ ಗಳು ಸೆಲ್ಫ್ ಎಂದು ತೋರಿಸುತ್ತಿದ್ದೀರಲ್ಲಾ " ಎಂದು ಅನುಮಾನ ವ್ಯಕ್ತಪಡಿಸಿತ್ತು,
ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಕಿರಣ್ ಜವಳಿ ಆಕ್ಷೇಪವ್ಯಕ್ತಪಡಿಸಿ, ಅರ್ಜಿದಾರರು ಸಲ್ಲಿಸಿರುವ ಪ್ರಸ್ತಾವ ಮೇಲ್ನೋಟಕ್ಕೆ ಸಮರ್ಪಕವಾಗಿಲ್ಲ. ಈ ಪ್ರಸ್ತಾವವನ್ನು ನ್ಯಾಯಪೀಠವು ಚಿತ್ರದುರ್ಗ ಸೆಷನ್ಸ್ ಕೋರ್ಟ್ ಗೇ ವರ್ಗಾಯಿಸುವುದು ಸೂಕ್ತ. ಅಲ್ಲಿನ ನ್ಯಾಯಾಧೀಶರೇ ಈ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ ವಿಲೇವಾರಿ ಮಾಡುವಂತೆ ನಿರ್ದೇಶನ ನೀಡಬೇಕೆಂದರು.
ನಿಮ್ಮ ಪ್ರಸ್ತಾವಸ್ಪಷ್ಟವಾಗಿ ವಿವರಿಸಿ. ನೌಕರರು ಹಸಿವಿನಿಂದ ಬಳಲಬಾರದು ಎಂಬುದಷ್ಟೇ ಕೋರ್ಟ್ ಕಾಳಜಿ. ಆದರೆ, ನೀವು ಈ ರೀತಿ ಸೆಲ್ಫ್ ಚೆಕ್ ಗಳನ್ನು ತೋರಿಸುತ್ತಿರುವುದು ಸರಿಯಲ್ಲ. ಸೆಷನ್ಸ್ ನ್ಯಾಯಾಲಯ ಇದನ್ನು ತಕ್ಷಣವೇ ಪರಿಶೀಲಿಸುವಂತೆ ಆದೇಶಿಸುತ್ತೇವೆ" ಎಂದು ಮೌಖಿಕವಾಗಿ ಹೇಳಿತು.
ಸ್ವಾಮೀಜಿ ಏಕೈಕ ಟ್ರಸ್ಟಿ:
ಸ್ವಾಮೀಜಿ ಪರ ವಕೀಲರು, ಸ್ವಾಮೀಜಿ ವಿದ್ಯಾಪೀಠದ ಏಕೈಕ ಟ್ರಸ್ಟಿಯಾಗಿದ್ದು, ಚೆಕ್ ಹಾಗೂ ಸಂಬಂಧಿತ ದಾಖಲೆಗಳಿಗೆ ಸಹಿ ಮಾಡಲು ಅನುಮತಿ ನೀಡಲು ವಿಚಾರಣಾಧೀನ ನ್ಯಾಯಾಲಯ ಅನುಮತಿ ನಿರಾಕರಿಸಿದೆ. ಇದರಿಂದಾಗಿ ಸಿಬ್ಬಂದಿಗೆ ವೇತನ ಭತ್ಯೆ ನೀಡಲು ಸಮಸ್ಯೆಯಾಗುತ್ತಿದೆ, ಸುಮಾರು 200 ಚಕ್ ಗಳಗೆ ಸ್ವಾಮೀಜಿ ಸಹಿ ಹಾಕಬೇಕಿದೆ. ಹಾಗಾಗಿ ಅಧೀನ ನ್ಯಾಯಾಲಯದ ಆದೇಶ ರದ್ದು ಮಾಡಬೇಕು, ನ್ಯಾಯಾಂಗ ಬಂಧನಲ್ಲಿದಲ್ಲಿರುವ ಸ್ವಾಮೀಜಿಗೆ ಸಹಿ ಹಾಕಲು ಅನುಮತಿ ನೀಡಬೇಕು ಎಂದು ಕೋರಿದರು.
ಸಿಬ್ಬಂದಿಯ ವೇತನಕ್ಕೆ ತೊಂದರೆ:
ಚಿತ್ರದುರ್ಗದ ವಿಶೇಷ ಕೋರ್ಟ್ ಸೆಪ್ಟೆಂಬರ್ 20ರಂದು ಮಾಡಿರುವ ಆದೇಶವನ್ನು ರದ್ದು ಮಾಡಬೇಕು. ಅಲ್ಲದೇ, ಮಠ ಹಾಗೂ ವಿದ್ಯಾಪೀಠದ ನಿರ್ವಹಣೆ ಮತ್ತು ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ವೇತನ ಪಾವತಿಸಲು ಮಠ ಮತ್ತು ವಿದ್ಯಾಪೀಠದ ಚೆಕ್ ಮತ್ತು ಸಂಬಂಧಿತ ದಾಖಲೆಗಳಿಗೆ ಸಹಿ ಮಾಡಲು ಅವಕಾಶ ಮಾಡಿಕೊಡುವಂತೆ ಚಿತ್ರದುರ್ಗ ಜಿಲ್ಲಾ ಕಾರಾಗೃಹದ ಮೇಲ್ವಿಚಾರಕರಿಗೆ ನಿರ್ದೇಶಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.
ಭಾರತೀಯ ಟ್ರಸ್ಟ್ ಕಾಯಿದೆ 1882ರ ಸೆಕ್ಷನ್ 34, ಟ್ರಸ್ಟ್ ನ ನಿರ್ವಹಣೆ ಮತ್ತು ಆಡಳಿತಕ್ಕೆ ಸಂಬಂಧಪಟ್ಟಿದೆ. ಇಲ್ಲಿ ಅರ್ಜಿದಾರರು ಚೆಕ್ ಮತ್ತು ಸಂಬಂಧಿತ ದಾಖಲೆಗಳಿಗೆ ಸಹಿ ಮಾಡಲು ಮಾತ್ರ ಅವಕಾಶ ಕೋರುತ್ತಿದ್ದಾರೆ. ಆದರೆ ಅನುಮತಿ ನಿರಾಕರಿಸಲಾಗಿದೆ ಎಂದು ಹೇಳಲಾಗಿದೆ.
ವಿದ್ಯಾಪೀಠದ ಆಡಳಿತ ಮತ್ತು ನಿರ್ವಹಣೆ ನೋಡಿಕೊಳ್ಳುವುದಕ್ಕೆ ಮಠದ ಆಡಳಿತ ಮಂಡಳಿ ಸೀಮಿತವಾಗಿದ್ದು, ಸಿಬ್ಬಂದಿಯ ವೇತನ, ಮಠ ಹಾಗೂ ವಿದ್ಯಾಪೀಠದ ನಿರ್ವಹಣೆಗೆ ಸಂಬಂಧಿಸಿದ ದಾಖಲೆಗಳಿಗೆ ಸಹಿ ಮಾಡುವ ಅಥವಾ ಹಣಕಾಸಿನ ವಿಚಾರದಲ್ಲಿ ಆಡಳಿತ ಮಂಡಳಿಯ ಪಾತ್ರವಿಲ್ಲ. ಮಠ ಅಥವಾ ವಿದ್ಯಾಪೀಠದ ಬ್ಯಾಂಕ್ ಖಾತೆಗಳನ್ನು ನಿರ್ವಹಿಸುವ ಅಧಿಕಾರ ಆಡಳಿತ ಮಂಡಳಿಗೆ ಇಲ್ಲ. ಹಣಕಾಸಿನ ವಿಚಾರ ಹಾಗೂ ಚೆಕ್ ಗೆ ಸಹಿ ಮಾಡುವ ಅಧಿಕಾರ ಅರ್ಜಿದಾರರಿಗೆ ಮಾತ್ರ ಇದೆ ಎಂದು ಹೇಳಲಾಗಿದೆ.
ಮಠ ಮತ್ತು ವಿದ್ಯಾಪೀಠದಲ್ಲಿ ಸುಮಾರು ಮೂರು ಸಾವಿರ ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಆರೋಪಿ ಸ್ವಾಮೀಜಿ ಅವರು ಚೆಕ್ ಮತ್ತು ಸಂಬಂಧಿತ ದಾಖಲೆಗಳಿಗೆ ಸಹಿ ಮಾಡಲು ಅನುಮತಿಸದಿದ್ದರೆ ಸಿಬ್ಬಂದಿಗೆ ವೇತನ ಪಾವತಿಯಾಗದೆ, ಆರ್ಥಿಕ ಸಮಸ್ಯೆ ಉಂಟು ಮಾಡಿದಂತಾಗುತ್ತದೆ. ಕರ್ನಾಟಕ ಕಾರಾಗೃಹ ಕಾಯಿದೆ 1963ರ ಸೆಕ್ಷನ್ 40ರ ಅಡಿ ಅರ್ಜಿದಾರರು ವಿಚಾರಣಾಧೀನ ಕೈದಿಯಾಗಿದ್ದು, ಚೆಕ್ ಮತ್ತು ಸಂಬಂಧಿತ ದಾಖಲೆಗಳಿಗೆ ಸಹಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಕೋರಲಾಗಿದೆ.












Click it and Unblock the Notifications