ವಾರಾಂತ್ಯದಲ್ಲಿ ಕುದುರೆ ರೇಸ್ ನಡೆಸಲು ಹೈಕೋರ್ಟ್ ಗ್ರೀನ್ ಸಿಗ್ನಲ್
ಬೆಂಗಳೂರು, ಜೂನ್ 19: ಬೆಂಗಳೂರು ಟರ್ಫ್ ಕ್ಲಬ್ (ರೇಸ್‌ಕೋರ್ಸ್)ನಲ್ಲಿ ಷರತ್ತುಗಳ ಅನ್ವಯ ವಾರಾಂತ್ಯದಲ್ಲಿ ರೇಸ್‌ಗಳನ್ನು ಆಯೋಜನೆ ಮಾಡುವುದಕ್ಕೆ ಕರ್ನಾಟಕ ಹೈಕೋಟ್ ಹಸಿರು ನಿಶಾನೆ ನೀಡಿದೆ. ಅಲ್ಲದೆ, ಸರ್ಕಾರ ಅನುಮತಿ ನಿರಾಕರಿಸಿದ್ದ ಆದೇಶಕ್ಕೆ ತಡೆ ನೀಡಿದೆ.
ರೇಸ್ ಪಂದ್ಯಗಳ ಆಯೋಜನೆಗೆ ಕೋರಿದ್ದ ಮನವಿಯನ್ನು ತಿರಸ್ಕರಿಸಿದ್ದ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಬೆಂಗಳೂರು ಟರ್ಫ್ ಕ್ಲಬ್ ಲಿಮಿಟೆಡ್, ಕರ್ನಾಟಕ ಟ್ರೈನ್ಸ್ ಅಸೋಸಿಯೇಷನ್ಸ್, ಕರ್ನಾಟಕ ರೇಸ್ ಕುದುರೆ ಮಾಲೀಕರ ಸಂಘ, ಕರ್ನಾಟಕ ಜಾಕಿಗಳ ಸಂಘ ಸೇರಿದಂತೆ ಮತ್ತಿತರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಕುಮಾರ್ ಅವರಿದ್ದ ನ್ಯಾಯಪೀಠ, 2024ರ ಮಾರ್ಚ್ ತಿಂಗಳಲ್ಲಿ ಸರ್ಕಾರ ಅನುಮತಿ ನೀಡಿದ್ದ ಷರತ್ತುಗಳ ಅನ್ವಯ ಕುದುರೆ ಪಂದ್ಯಗಳನ್ನು ಆಯೋಜನೆ ಮಾಡವುದಕ್ಕೆ ಅವಕಾಶ ನೀಡಿ ಆದೇಶಿಸಿದೆ.
ಹೈಕೋರ್ಟ್ ಏನು ಹೇಳಿದೆ?: ಆನ್‌ಕೋರ್ಸ್ (ಬೆಂಗಳೂರಿನಲ್ಲಿ ನಡೆಯುವ ಪಂದ್ಯ) ಮತ್ತು ಆಫ್ ಕೋರ್ಸ್ (ಹೊರಭಾಗಗಳಲ್ಲಿ ಮೈಸೂರು, ಬಾಂಬೆ ನಡೆಯುವ ಪಂದ್ಯಗಳು)ಗಳನ್ನು ಬಿಟಿಸಿ ಹಮ್ಮಿಕೊಳ್ಳಬಹುದಾಗಿದೆ. ಅಲ್ಲದೆ, ರಾಜ್ಯ ಸರ್ಕಾರವು ಕುದುರೆ ಪಂದ್ಯಗಳ ಆಯೋಜನೆ ವೇಳೆ ಅದರ ಮೇಲ್ವಚಾರಣೆ ಮತ್ತು ನಿಯಂತ್ರಣವವನ್ನು ಮಾಡಬಹುದಾಗಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಈ ಆದೇಶದಿಂದಾಗಿ ಕಳೆದ ಮೂರು ತಿಂಗಳನಿಂದ ಸ್ಥಗಿತಗೊಂಡಿದ್ದ ಕುದರೆ ಪಂದ್ಯಾವಳಿಗಳು ಪುನರಾರಂಭವಾಗಲಿದೆ. ಅರ್ಜಿಯ ಕುರಿತಂತೆ ಈ ಹಿಂದೆ ನಡೆದ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ರೇಸ್‌ಕೋರ್ಸ್ ಅಕ್ರಮಗಳ ತಾಣವಾಗಿದೆ. ಪ್ರತಿದಿನ ಕೋಟ್ಯಾಂತರ ರೂ.ಗಳ ಅವ್ಯವಹಾರ ನಡೆಯುತ್ತಿದೆ. ಜತೆಗೆ, ತೆರಿಗೆ ವಂಚನೆಗೆ ಬುಕ್ಕಿಗಳು ಪ್ರಯತ್ನ ಮಾಡುತ್ತಿದ್ದು, ದಾಳಿ ಸಂದರ್ಭದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ.
ಅಲ್ಲದೆ, ನೂರಾರು ಮಂದಿ ಸಾಮಾನ್ಯ ಜನ ಕುದುರೆ ಪಂದ್ಯಗಳಲ್ಲಿ ತೊಡಗಿ ಜೀವನ ನಡೆಸುವುದಕ್ಕೆ ಪರದಾಡುತ್ತಿದ್ದಾರೆ, ಆಟೋ ಚಾಲಕರು ತಮ್ಮ ದುಡಿಮೆಯನ್ನು ಪಂದ್ಯಗಳಲ್ಲಿ ವ್ಯಯ ಮಾಡುತ್ತಿದ್ದಾರೆ. ಹೀಗಾಗಿ ಸರ್ಕಾರ ಪಂದ್ಯಗಳ ಆಯೋಜನೆಗೆ ಅನುಮತಿ ನಿರಾಕರಿಸಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು.
ರೇಸ್‌ಕೋರ್ಸ್ ಪರ ವಕೀಲರು, ರೇಸ್‌ಕೋರ್ಸ್ ಆಡಳಿತ ಮಂಡಳಿಯಲ್ಲಿ ಸರ್ಕಾರದ ಹಣಕಾಸು ಕಾರ್ಯದರ್ಶಿಗಳು, ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸದಸ್ಯರಾಗಿದ್ದಾರೆ. ಕುದರೆ ಪಂದ್ಯಗಳ ಆಯೋಜನೆಯ ಎಲ್ಲ ಚಟುವಟಿಕೆಗಳು ಸರ್ಕಾರದ ಗಮನಕ್ಕೆ ಇರುತ್ತದೆ. ಅಕ್ರಮಗಳು ನಡೆಸುವ ಸಾಧ್ಯತೆಗಳು ಇಲ್ಲ ಎಂದು ವಿವರಿಸಿದ್ದರು.
ಅಕ್ರಮ ಬೆಟ್ಟಿಂಗ್ ಆರೋಪ: ತೆರಿಗೆ ವಂಚನೆಗಾಗಿ ಅಕ್ರಮವಾಗಿ ಬೆಟ್ಟಿಂಗ್ ಮಾಡಿದ ಆರೋಪದಲ್ಲಿ ಆರೋಪ ಪಟ್ಟಿ ದಾಖಲಿಸಿರುವ ಬುಕ್ಕಿಗಳ ಪರವಾನಿಗೆಯನ್ನು ರದ್ದು ಪಡಿಸುವುದಕ್ಕಾಗಿ ಮಂಡಳಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ, ಕುದರೆ ಪಂದ್ಯಗಳ ಆಯೋಜನೆಯಲ್ಲಿ ಬುಕ್ಕಿ ಕಂಪೆನಿಗಳಿಗೆ ಯಾವುದೇ ಸಂಬಂಧವಿರುವುದಿಲ್ಲ. ಹೀಗಾಗಿ ಕುದರೆ ಪಂದ್ಯಗಳ ಆಯೋಜನೆಗೆ ಅವಕಾಶ ಕಲ್ಪಿಸಬೇಕು ಎಂದು ಪೀಠಕ್ಕೆ ಕೋರಿದ್ದರು.
ಜತೆಗೆ, ಪ್ರತಿ ದಿನ 1 ಕೋಟಿಗಿಂತಲೂ ಹೆಚ್ಚು ರೂ.ಗಳ ತೆರಿಗೆ ಸಂಗ್ರಹವಾಗುತ್ತಿದೆ. ಇದು ಸರ್ಕಾರದ ಬೊಕ್ಕಸಕ್ಕೆ ಸೇರುತ್ತಿದೆ. ಅಲ್ಲದೆ, ಕುದುರೆ ಪಂದ್ಯಗಳನ್ನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸುಮಾರು 2 ಸಾವಿರಕ್ಕೂ ಹೆಚ್ಚು ಜನರು ಅವಲಂಬಿಸಿದ್ದಾರೆ. ಆದ್ದರಿಂದ ಪಂದ್ಯಗಳ ಆಯೋಜನೆಗೆ ಅನುಮತಿ ನೀಡಬೇಕು ಎಂದು ಕೋರಿದ್ದರು.












Click it and Unblock the Notifications