ಮೈತ್ರಿಯಾ ಕೇಸ್: ಕಾರ್ತಿಕ್ ಗೌಡ ಮದುವೆಗೆ ಅಡ್ಡಿ ಆತಂಕವಿಲ್ಲ!
ಬೆಂಗಳೂರು, ಸೆ.30: ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡರ ಪುತ್ರ ಕಾರ್ತಿಕ್ ಗೌಡ ಅವರ ಮದುವೆಗೆ ಇದ್ದ ಅಡ್ಡಿ ಆತಂಕ ಸದ್ಯಕ್ಕೆ ದೂರಾಗಿದೆ. ಮದುವೆ ಡೇಟ್ ಫಿಕ್ಸ್ ಆಗಿದ್ದರೂ ಮೈತ್ರಿಯಾ ಗೌಡ ಅವರು ಕೋರ್ಟಿಗೆ ಸಲ್ಲಿಸಿದ್ದ ಅರ್ಜಿಯ ಭೀತಿ ಕಾರ್ತಿಕ್ ಗಿತ್ತು. ಅದರೆ, ಬುಧವಾರ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠ ಪ್ರಕರಣದ ವಿಚಾರಣೆಗೆ ಮಧ್ಯಂತರ ತಡೆ ನೀಡಿದೆ.
ಕಾರ್ತಿಕ್ ಗೌಡ ಅವರ ವಿರುದ್ಧ ನಟಿ ಮೈತ್ರಿಯಾ ಗೌಡ ಅವರು ಅತ್ಯಾಚಾರ, ವಂಚನೆ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದ ರದ್ದು ಮಾಡುವಂತೆ ಕಾರ್ತಿಕ್ ಅವರು ಸಲ್ಲಿಸಿದ್ದ ಅರ್ಜಿ ವಜಾಗೊಂಡಿತ್ತು. ಹೀಗಾಗಿ ಮೈತ್ರಿಯಾ ಪ್ರೇಮ ಪ್ರಸಂಗ ಪ್ರಕರಣದಲ್ಲಿ ಕಾರ್ತಿಕ್ ಗೌಡ ಮತ್ತೊಮ್ಮೆ ಪೊಲೀಸರ ತನಿಖೆಗೆ ಲಭ್ಯವಾಗಿದ್ದು, ತನಿಖಾಧಿಕಾರಿಗಳು ಅಗತ್ಯ ಬಿದ್ದಾಗ ವಿಚಾರಣೆಗಾಗಿ ಸಮನ್ಸ್ ಜಾರಿಗೊಳಿಸಬಹುದಾಗಿದೆ. [ಗೌಡರ ಪದಚ್ಯುತಿಗೊಳಿಸಲು ರಾಷ್ಟ್ರಪತಿಗೆ ಮೈತ್ರಿಯಾ ಪತ್ರ]
ಮಡಿಕೇರಿಯ ಉದ್ಯಮಿ ನಾಣಯ್ಯ ಅವರ ಪುತ್ರಿಯನ್ನು ಅಕ್ಟೋಬರ್ 29ರಂದು ವರಿಸಲು ಸಿದ್ಧವಾಗುತ್ತಿರುವ ಕಾರ್ತಿಕ್ ಅವರು ಈ ಕೇಸಿಗೆ ಸಂಬಂಧಿಸಿದಂತೆ ದೋಷಾರೋಪಣ ಪಟ್ಟಿ ಸಲ್ಲಿಸುವುದಕ್ಕೆ ತಡೆ ನೀಡುವಂತೆ ಕೋರ್ಟಿಗೆ ಸಲ್ಲಿಸಿದ್ದರು. ಜೊತೆಗೆ ಚಾರ್ಜ್ ಶೀಟ್ ಹಾಕದಂತೆ ಆದೇಶಿಸಲು ಮನವಿ ಮಾಡಿದ್ದರು. [ಕಾರ್ತಿಕ್ ಗೌಡಗೆ ನಿರೀಕ್ಷಣಾ ಜಾಮೀನು]

ಸೆ. 18ರಂದು ತನಿಖಾ ತಂಡ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಸಿದ್ಧಪಡಿಸಿಕೊಂಡು ಸಲ್ಲಿಸಿದ್ದರು. ಆರ್ ಟಿ ನಗರ ಪೊಲೀಸರು ಸಲ್ಲಿಸಿದ್ದ 632 ಪುಟಗಳ ಚಾರ್ಜ್ ಶೀಟ್ ನಲ್ಲಿ ಅತ್ಯಾಚಾರ ಪ್ರಕರಣವನ್ನು ಕೈ ಬಿಟ್ಟು ವಂಚನೆ ಆರೋಪವನ್ನು ಮಾತ್ರ ಕಾರ್ತಿಕ್ ಮೇಲೆ ಹೊರೆಸಲಾಗಿದೆ. ಅದರೆ, ಮಧ್ಯಂತರ ತಡೆ ನೀಡಿರುವ ನ್ಯಾ. ರತ್ನಕಲಾ ಅವರಿರುವ ನ್ಯಾಯಪೀಠ, ನಾಲ್ಕು ವಾರಗಳ ನಂತರ ಪೊಲೀಸರು ತನಿಖೆ ಮುಂದುವರೆಸುವಂತೆ ನಿರ್ದೇಶಿಸಿದ್ದಾರೆ. [ಕೌಟುಂಬಿಕ ಕೋರ್ಟಿಗೆ ಕಾಲಿಟ್ಟಿದ್ದೇಕೆ?]
ಮೈತ್ರಿಯಾ ಜೊತೆ ಮದುವೆ ಆಗಿಲ್ಲ: ಕಾರ್ತಿಕ್ ಕಾನೂನುಬದ್ಧವಾಗಿ ನನ್ನ ಪತಿಯಾಗಿದ್ದಾರೆ. ಹಿಂದೂ ಧರ್ಮದ ಪ್ರಕಾರ ನಮ್ಮಿಬ್ಬರ ಮದುವೆಯಾಗಿದೆ. ಅವರು ನನ್ನನ್ನು ಪತ್ನಿ ಎಂದು ಒಪ್ಪಿಕೊಂಡು ಪತ್ನಿಗೆ ಸೇರುವ ಎಲ್ಲಾ ಹಕ್ಕುಗಳನ್ನು ನೀಡತಕ್ಕದ್ದು, ಅಲ್ಲದೆ ಕಾರ್ತಿಕ್ ಅವರು ಬೇರೆ ಯಾವುದೇ ಯುವತಿ ಜೊತೆ ಮದುವೆಯಾಗುವುದು ಕಾನೂನು ಉಲ್ಲಂಘನೆಯಾಗುತ್ತದೆ. ಇಂಥ ಪ್ರಯತ್ನಕ್ಕೆ ತಡೆ ಒಡ್ಡಬೇಕು ಎಂದು ಮೈತ್ರಿಯಾ ಸಲ್ಲಿಸಿದ್ದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ತಳ್ಳಿ ಹಾಕಿರುವುದು ಎಲ್ಲರಿಗೂ ಗೊತ್ತೇ ಇದೆ.
ಮೈತ್ರಿಯಾ ಅವರು ನೀಡಿರುವ ದೂರಿನಲ್ಲಿ ಆರೋಪಿಸಿದಂತೆ ಅತ್ಯಾಚಾರ ನಡೆದಿಲ್ಲ ದೂರನ್ನು ರದ್ದುಗೊಳಿಸಿ ಎಂದು ಕಾರ್ತಿಕ್ ಗೌಡ ಪರ ಎಸ್. ಶಂಕರಪ್ಪ ವಾದಿಸಿದ್ದರು. ಆದರೆ, ನಟರಾಜ್ ಅವರ ವಾದವನ್ನು ಹೈಕೋರ್ಟ್ ಪೀಠ ತಿರಸ್ಕರಿಸಿದೆ.












Click it and Unblock the Notifications