ಜೈಲು ಶಿಕ್ಷೆ ರದ್ದು: ಕೆಎಸ್‌ಆರ್‌ಟಿಸಿ ಚಾಲಕನ ನೆರವಿಗೆ ಧಾವಿಸಿದ ಹೈಕೋರ್ಟ್
ಬೆಂಗಳೂರು, ಜ.30: ಸಣ್ಣ ರಸ್ತೆ ಅಪಘಾತ ಮಾಡಿದ್ದಕ್ಕಾಗಿ ಎರಡು ತಿಂಗಳು ಜೈಲು ಶಿಕ್ಷಗೆ ಒಳಗಾಗಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್ ಚಾಲಕನ ನೆರವಿಗೆ ಹೈಕೋರ್ಟ್ ಧಾವಿಸಿದೆ.
ಅಲ್ಲದೆ, ಆತನಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಧಿಸಿದ್ದ 2 ತಿಂಗಳ ಜೈಲು ಶಿಕ್ಷೆಯನ್ನು ರದ್ದುಗೊಳಿಸಿದೆ. ಜೊತೆಗೆ ಆ ಚಾಲಕನಿಗೆ ಶಿಕ್ಷೆಯಾಗಿದ್ದ ವಿಚಾರ ಯಾವುದೇ ರೀತಿಯಲ್ಲೂ ಆತನ ವೃತ್ತಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು, ಆತನ ಸೇವಾ ಪುಸ್ತಕದಲ್ಲಿ ರಿಮಾರ್ಕ್ ಎಂದು ಪರಿಗಣಿಸಬಾರದೆಂದು ಸಾರಿಗೆ ಸಂಸ್ಥೆಗೆ ನಿರ್ದೇಶನ ನೀಡಿದೆ.
ಶಿವಮೊಗ್ಗ ಜಿಲ್ಲೆಯ ವಾಸಿ ಕೆಎಸ್‌ಆರ್‌ಟಿಸಿ ಚಾಲಕ ಎಚ್.ದೇವೇಂದ್ರಪ್ಪ ಸಲ್ಲಿಸಿದ್ದ ಕ್ರಿಮಿನಲ್ ರಿವಿಷನ್ ಅರ್ಜಿಯನ್ನು ಆಲಿಸಿದ ನ್ಯಾ. ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ಮಾಡಿದೆ.

Recommended Video
ಸಾಕ್ಷ್ಯ ಹಾಗೂ ಪ್ರಕರಣದ ವಿವರಗಳನ್ನು ಗಮನಿಸಿದ ನ್ಯಾಯಪೀಠ, ಇದೊಂದು ಸಣ್ಣ ಅಪಘಾತ, ಯಾರಿಗೂ ಗಾಯ ಅಥವಾ ಹಾನಿಯಾಗಿಲ್ಲ. ಘಾಟ್ ರಸ್ತೆಯಲ್ಲಿ ಕಡಿದಾದ ತಿರುವಿನಲ್ಲಿ ಚಾಲಕ ಸರಿಯಾಗಿ ಚಾಲನೆ ಮಾಡುತ್ತಿದ್ದರೂ ಸಹ ಖಾಸಗಿ ಬಸ್‌ಗೆ ಢಿಕ್ಕಿಯಾಗಿದೆ. ಇದರಲ್ಲಿ ಚಾಲಕನ ನಿರ್ಲಕ್ಷ್ಯ ಕಾಣುತ್ತಿಲ್ಲ ಎಂದು ನ್ಯಾಯಪೀಠ, 2 ತಿಂಗಳ ಜೈಲು ಶಿಕ್ಷೆ ರದ್ದು ಮಾಡಿ ಕೇವಲ 1500 ರೂ. ದಂಡ ಪಾವತಿಸಲು ಆದೇಶಿಸಿತು.
ಪ್ರಕರಣದ ಹಿನ್ನೆಲೆ: 2014ರ ಆಗಸ್ಟ್‌ನಲ್ಲಿ ಚಾರ್ಮಾಡಿ ಘಾಟ್‌ನ ಕಿರಿದಾದ ರಸ್ತೆಯಲ್ಲಿ ಚಾಲಕ ದೇವೇಂದ್ರಪ್ಪ ಚಾಲನೆ ಮಾಡುತ್ತಿದ್ದ ಬಸ್ ಖಾಸಗಿ ಬಸ್‌ಗೆ ಢಿಕ್ಕಿ ಹೊಡೆದು ಸಣ್ಣ ಅಪಘಾತ ಸಂಭವಿಸಿತ್ತು. ಆ ಪ್ರಕರಣದಲ್ಲಿ ವಿಚಾರಣೆ ನಡೆಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಮ್ಯಾಜಿಸ್ಟ್ರೇಟ್ ಕೋರ್ಟ್ 2019ರಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 279 (ಸಾರ್ವಜನಿಕ ರಸ್ತೆಯಲ್ಲಿ ನಿರ್ಲಕ್ಷ್ಯದ ಚಾಲನೆ) ಮತ್ತು ಸೆಕ್ಷನ್ 337 (ಇತರೆಯವರ ವೈಯಕ್ತಿಕ ಸುರಕ್ಷತೆಗೆ ಘಾಸಿಗೊಳಿಸಿದ್ದು) ಗಳಡಿ 2 ತಿಂಗಳು ಜೈಲು ಶಿಕ್ಷೆ ಮತ್ತು 1500 ರೂ. ದಂಡ ವಿಧಿಸಿತ್ತು. ಜಿಲ್ಲಾ ಸೆಷನ್ಸ್ ನ್ಯಾಯಾಲಯ ಕೂಡ 2021ರಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶವನ್ನು ಎತ್ತಿಹಿಡಿದಿತ್ತು. ಹಾಗಾಗಿ ಆ ಆದೇಶ ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.












Click it and Unblock the Notifications