ಎಷ್ಟು ಅಪರಾಧಿಗಳು ಮೇಲ್ಮನವಿ ಸಲ್ಲಿಸಿದ್ದಾರೆಂದು ಮಾಹಿತಿ ಕೇಳಿದ ಹೈಕೋರ್ಟ್
ಬೆಂಗಳೂರು. ಅ.16: ರಾಜ್ಯದಲ್ಲಿ ಈವರೆಗೆ ಎಷ್ಟು ಅಪರಾಧಿಗಳು ತಮ್ಮ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸುವ ಕಾನೂನುಬದ್ಧ ಹಕ್ಕನ್ನು ಚಲಾಯಿಸಿದ್ದಾರೆ ಮತ್ತು ಒಂದು ಅವರಿಗೆ ಸ್ವತಃ ವಕೀಲರ ಸೇವೆಯಲ್ಲಿ ಪಡೆದುಕೊಳ್ಳಲು ಸಾಧ್ಯವಾಗದಿದ್ದಲ್ಲಿ ಕಾನೂನಿನ ಪ್ರಕಾರ ಅವರಿಗೆ ಕಾನೂನು ನೆರವು ನೀಡಲಾಗಿದೆಯೇ ಎಂಬ ಬಗ್ಗೆ ಸಮಗ್ರ ಮಾಹಿತಿಯನ್ನು ಒದಗಿಸುವಂತೆ ಕರ್ನಾಟಕ ಹೈಕೋರ್ಟ್ ಕೇಳಿದೆ.
ಆರೋಪಿ ಪರ ವಕೀಲರು ಹಾಜರಾಗುವುದನ್ನು ನಿಲ್ಲಿಸಿದ್ದರಿಂದ ಧಾರವಾಡದ ಅಪರಾಧಿಯ ಪರ ವಕಾಲತ್ತು ವಹಿಸಲು ಹೈಕೋರ್ಟ್ ಅಮಿಕಸ್ ಕ್ಯೂರಿಯನ್ನು ನೇಮಿಸಬೇಕಾಗಿ ಬಂದಿರುವುದನ್ನು ಗಮನಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಮತ್ತು ನ್ಯಾಯಮೂರ್ತಿ ಜಿ.ಬಸವರಾಜ ಅವರಿದ್ದ ವಿಭಾಗೀಯ ಪೀಠ ಈ ಮಧ್ಯಂತರ ಆದೇಶ ನೀಡಿದೆ.
ಮೇಲ್ಮನವಿ ಸಲ್ಲಿಸಿಲ್ಲ ಅಲ್ಲದೆ, ಅದೇ ಪ್ರಕರಣದ ಆರೋಪಿಗಳಲ್ಲಿ ಒಬ್ಬರು ತಮ್ಮ ಶಿಕ್ಷೆಯ ವಿರುದ್ಧ ಯಾವುದೇ ಮೇಲ್ಮನವಿ ಸಲ್ಲಿಸಿಲ್ಲ ಎಂದು ಅಮಿಕಸ್ ಕ್ಯೂರಿ ಮೂಲಕ ನ್ಯಾಯಪೀಠವು ಮಾಹಿತಿ ಪಡೆದು ಕಳವಳ ವ್ಯಕ್ತಪಡಿಸಿದೆ.
ರಾಜ್ಯದ ಎಲ್ಲಾ ಕಾರಾಗೃಹಗಳಿಲ್ಲಿರುವ ಅಪರಾಧಿಗಳ ಸಂಖ್ಯೆ ಎಷ್ಟು ಮತ್ತು ಎಲ್ಲಾ ಅಪರಾಧಿಗಳು ತಮ್ಮ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೆಯೇ ಎಂಬ ವಿವರಗಳನ್ನು ಸಂಗ್ರಹಿಸಲು ಹೈಕೋರ್ಟ್ ಕಾನೂನು ಸೇವೆಗಳ ಸಮಿತಿಗೆ (ಎಚ್‌ಸಿಎಲ್‌ಎಸ್) ನ್ಯಾಯಪೀಠ ನಿರ್ದೇಶನ ನೀಡಿದೆ.
ಅಪರಾಧಿಗಳು ಸಲ್ಲಿಸಿದ ಮೇಲ್ಮನವಿಗಳ ಸಂದರ್ಭದಲ್ಲಿ, ಖಾಸಗಿ ವಕೀಲರ ಮೂಲಕ ಮೇಲ್ಮನವಿ ಸಲ್ಲಿಸಲಾಗಿದೆಯೇ ಅಥವಾ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ನೇಮಕಗೊಂಡ ವಕೀಲರ ಮೂಲಕ ಮೇಲ್ಮನವಿ ಸಲ್ಲಿಸಲಾಗಿದೆಯೇ ಎಂಬುದನ್ನು ಎಚ್‌ಸಿಎಲ್‌ಎಸ್ ಕಂಡುಹಿಡಿಯಬೇಕು ಎಂದು ನ್ಯಾಯಪೀಠ ಸೂಚನೆ ನೀಡಿದೆ.

ಒಂದು ವೇಳೆ ಯಾವುದೇ ಮೇಲ್ಮನವಿ ಸಲ್ಲಿಸದಿದ್ದರೆ, ಮೇಲ್ಮನವಿಗಳನ್ನು ಏಕೆ ಸಲ್ಲಿಸಲಾಗಿಲ್ಲ ಮತ್ತು ಅಂತಹ ಅಪರಾಧಿಗಳಿಗೆ ಉಚಿತ ಕಾನೂನು ಸೇವೆ/ಸಹಾಯವನ್ನು ವಿಸ್ತರಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದೂ ಸಹ ನ್ಯಾಯಪೀಠ ಕಾನೂನು ಸೇವಾ ಪ್ರಾಧಿಕಾರಕ್ಕೆ ಹೇಳಿದೆ.
ನಿಗಾ ಇಡಬೇಕಾಗುತ್ತದೆ ಶಿಕ್ಷೆಗೊಳಗಾದ ವ್ಯಕ್ತಿಗಳು ಮೇಲ್ಮನವಿ ಸಲ್ಲಿಸಿದ್ದಾರೆಯೇ ಮತ್ತು ಅವರು ಕಾನೂನು ನೆರವು ಪಡೆದಿದ್ದಾರೆಯೇ ಎಂಬ ಬಗ್ಗೆ ನಿಗಾ ಇಡಲು ಅಗತ್ಯ ಸಾಫ್ಟ್ ವೇರ್ ಅಭಿವೃದ್ಧಿಪಡಿಸಲು ರಿಜಿಸ್ಟ್ರಾರ್ (ಕಂಪ್ಯೂಟರ್‌ಗಳು) ಗೆ ಪೀಠ ಸೂಚಿಸಿದೆ.
ಬಂಧನದಲ್ಲಿರುವ ಯಾವುದೇ ವ್ಯಕ್ತಿಗೆ ಶಿಕ್ಷೆಯನ್ನು ಪ್ರಶ್ನಿಸುವ ತನ್ನ ಹಕ್ಕನ್ನು ಚಲಾಯಿಸಲು ಕಾನೂನು ನೆರವು ಪಡೆಯಲು ಸಾಧ್ಯವಾಗದಿದ್ದರೆ ಅಂತಹ ವ್ಯಕ್ತಿಯು ತನ್ನ ವಿರುದ್ಧದ ಯಾವುದೇ ಶಿಕ್ಷೆಯ ಆದೇಶವನ್ನು ಪ್ರಶ್ನಿಸುವ ಉದ್ದೇಶಕ್ಕಾಗಿ ಉಚಿತ ಕಾನೂನು ಸಹಾಯವನ್ನು ಒದಗಿಸಬೇಕಾದ್ದು ಸಾಂವಿಧಾನಿಕ ಕರ್ತವ್ಯವಾಗಿದ್ದು. ಆ ನಿಟ್ಟಿಲ್ಲಿ ಕಾನೂನು ಸೇವಾ ಪ್ರಾಧಿಕಾರಗಳು ಮುತುವರ್ಜಿ ವಹಿಸಬೇಕು ಎಂದು ನ್ಯಾಯಪೀಠ ನಿರ್ದೇಶನವನ್ನು ನೀಡಿದೆ.












Click it and Unblock the Notifications