7 ಜೆಡಿಎಸ್ ಶಾಸಕರ ಅನರ್ಹತೆ : ಶಾಸಕರ ಭವಿಷ್ಯ ಇನ್ನೂ ಅತಂತ್ರ!
ಬೆಂಗಳೂರು, ಮಾರ್ಚ್ 21 : ಜೆಡಿಎಸ್ ಪಕ್ಷದಿಂದ ಅಮಾನತುಗೊಂಡಿರುವ 7 ಶಾಸಕರ ಅನರ್ಹತೆ ಬಗ್ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ. ಗುರುವಾರ ಉತ್ತರ ನೀಡುವಂತೆ ಸ್ಪೀಕರ್ ಕೆ.ಬಿ.ಕೋಳಿವಾಡ ಅವರಿಗೆ ನೋಟಿಸ್ ನೀಡಲಾಗಿದೆ.
ಬುಧವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿಯ ವಿಚಾರಣೆ ನಡೆಯಿತು. ನ್ಯಾಯಮೂರ್ತಿ ರಾಘವೇಂದ್ರ ಎಸ್. ಚೌಹಾಣ್ ಅವರು ಜೆಡಿಎಸ್ ಪಕ್ಷದ ಪರವಾಗಿ ಸಿ.ಎನ್. ಬಾಲಕೃಷ್ಣ ಮತ್ತು ಬಿ.ಬಿ.ನಿಂಗಯ್ಯ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದರು.
ವಿಧಾನಸಭೆ ಸ್ಪೀಕರ್ ಕೆ.ಬಿ.ಕೋಳಿವಾಡ ಅವರು ತಮ್ಮ ನಿಲುವನ್ನು ಮುಚ್ಚಿದ ಲಕೋಟೆಯಲ್ಲಿ ಎಜಿ ಮದುಸೂಧನ್ ನಾಯಕ್ ಅವರ ಮೂಲಕ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದರು.

7 ಬಂಡಾಯ ಶಾಸಕರ ಪರವಾಗಿ ರಾಘವನ್ ವಾದ ಮಂಡನೆ ಮಾಡಿದರು. ರಾಜ್ಯಸಭೆ ಚುನಾವಣೆಯ ಅಧಿಸೂಚನೆ ಪ್ರಕಟವಾದ ಬಳಿಕ ಅನರ್ಹತೆಗೆ ಅರ್ಜಿ ಸಲ್ಲಿಸಿರುವುದು ಸರಿಯಲ್ಲ, ಇದು ಕಾನೂನು ಬಾಹಿರ ಎಂದು ವಾದ ಮಂಡನೆ ಮಾಡಿದರು.
ನ್ಯಾಯಾಲಯದಲ್ಲಿ ನಡೆದಿದ್ದೇನು?
* ಹೈಕೋರ್ಟ್ ಇಂದು ತೀರ್ಪು ಪ್ರಕಟಿಸುವಂತೆ ಸ್ಪೀಕರ್‌ಗೆ ಮಂಗಳವಾರ ಸೂಚಿಸಿತ್ತು. ಆದರೆ, ತೀರ್ಪು ಪ್ರಕಟಿಸದ ಸ್ಪೀಕರ್ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಯಲಕ್ಕೆ ತಮ್ಮ ನಿಲುವು ತಿಳಿಸಿದರು.
* ಜೆಡಿಎಸ್ ಪಕ್ಷ ರಾಜಕೀಯ ಲಾಭಕ್ಕಾಗಿ ಅನರ್ಹತೆ ಕೋರಿ ಅರ್ಜಿ ಸಲ್ಲಿಸಿದೆ. ರಾಜ್ಯಸಭೆ ಚುನಾವಣೆ ಅಧಿಸೂಚನೆ ಪ್ರಕಟವಾದ ಬಳಿಕ ಅರ್ಜಿ ಸಲ್ಲಿಸಿದ್ದು ತಪ್ಪು ಎಂದು ಬಂಡಾಯ ಶಾಸಕರ ಪರವಾಗಿ ರಾಘವನ್ ವಾದ ಮಂಡನೆ ಮಾಡಿದರು.
* ಸ್ಪೀಕರ್ ನಿಲುವಿನ ಬಗ್ಗೆ ನ್ಯಾಯಾಲಯದಲ್ಲಿ ವಾದ ಪ್ರತಿವಾದ ನಡೆಯಿತು. ಅಂತಿಮವಾಗಿ ಸ್ಪೀಕರ್‌ಗೆ ನೋಟಿಸ್ ನೀಡಿ, ಗುರುವಾರ ಉತ್ತರ ನೀಡುವಂತೆ ಕೋರ್ಟ್ ಸೂಚನೆ ನೀಡಿತು.












Click it and Unblock the Notifications