ಬಗೆಹರಿಯದ ಟಿಕೆಟ್ ಗೊಂದಲ; ಹಾಸನ ಕ್ಷೇತ್ರ ಬಿಟ್ಟು ಉಳಿದ ಕ್ಷೇತ್ರಗಳಲ್ಲಿ ಪಂಚರತ್ನ ಯಾತ್ರೆ: ಹೆಚ್ಡಿಕೆಯ ಲೆಕ್ಕಾಚಾರವೇನು?
ಹಾಸನ ಟಿಕೆಟ್ ಗೊಂದಲ ಮುಂದುವರೆದಿದ್ದು, ಪಂಚರತ್ನ ರಥಯಾತ್ರೆಯಿಂದ ಹಾಸನ ಕ್ಷೇತ್ರವನ್ನ ಕೈಬಿಡಲಾಗಿದೆ.
ಬೆಂಗಳೂರು,ಮಾರ್ಚ್ 7: ಪ್ರಾದೇಶಿಕ ಪಕ್ಷ ಜೆಡಿಎಸ್ ಈ ಬಾರಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಭರ್ಜರಿ ಯಾತ್ರೆಯನ್ನ ನಡೆಸುತ್ತಿದೆ. ಈಗಾಗಲೇ ದಳಪತಿಗಳು 93 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ಹಾಸನ ವಿಧಾನಸಭಾ ಕ್ಷೇತ್ರವೇ ಕಗ್ಗಂಟಾಗಿದೆ.
2023 ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ರಾಜ್ಯಾದ್ಯಂತ ಸಿದ್ಧತೆ ಕೈಗೊಂಡಿರುವ ಜೆಡಿಎಸ್ ಪಕ್ಷದ ನಾಲ್ಕನೇ ಹಂತದ ಪಂಚರತ್ನ ರಥಯಾತ್ರೆ ಈ ಬಾರಿ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಏಕೆಂದರೆ, ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಪಂಚರತ್ನ ರಥಯಾತ್ರೆಯನ್ನ ನಡೆಸುತ್ತಿದ್ದಾರೆ. ಆದರೆ, ಹಾಸನ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರದಲ್ಲಿ ರಥಯಾತ್ರೆ ಸಾಗಿದರೂ, ಹಾಸನ ವಿಧಾನಸಭಾ ಕ್ಷೇತ್ರ ಪ್ರವೇಶಿಸದಂತೆ ರಥಯಾತ್ರೆ ಯೋಜಿಸಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ ಎಂದು ಚರ್ಚೆ ನಡೆಯುತ್ತಿದೆ.

ಈಗಾಗಲೇ ನಾನೇ ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂದು ಭವಾನಿ ರೇವಣ್ಣ ಹೇಳಿದ್ದು, ಕಣಕ್ಕಿಳಿಯಲು ರೆಡಿಯಾಗಿದ್ದಾರೆ. ಆದರೆ ಇದಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದು, ಸಾಮಾನ್ಯ ಕಾರ್ಯಕರ್ತರಿಗೆ ನಾನು ಟಿಕೆಟ್ ನೀಡುತ್ತೇನೆ ಎಂದು ಹೇಳಿದರು. ಆದರೆ ಸಾಕಷ್ಟು ಗೊಂದಲದ ನಡುವೆ ಹಾಸನ ವಿಚಾರವನ್ನ ರೇವಣ್ಣ ಅವರಿಗೆ ಬಿಟ್ಟು ಬಿಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಹಾಸನ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಪಂಚರತ್ನ ರಥಯಾತ್ರೆ ಸಾಗಿದರೂ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಸಂಚರಿಸದಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಡೆಯು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜೊತೆಗೆ ಹಾಸನ ಟಿಕೆಟ್ ವಿಚಾರದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಹೆಚ್ ಡಿ ರೇವಣ್ಣ ನಡುವೆ ಅಂತರ ಹೆಚ್ಚಾಗಲು ಕಾರಣವಾಗಿದೆ.
ನಾಲ್ಕನೇ ಹಂತದ ಯಾತ್ರೆ ಆರಂಭವಾಗಲಿದ್ದು, ತುಮಕೂರು, ಹಾಸನ, ಚಿಕ್ಕಮಗಳೂರು, ಮೈಸೂರು, ಬೆಂಗಳೂರು, ಚಾಮರಾಜನಗರ, ಯಾದಗಿರಿ ಜಿಲ್ಲೆಗಳಲ್ಲಿ ಈ ನಾಲ್ಕೈನೇ ಹಂತದ ಯಾತ್ರೆ ಸಾಗಲಿದೆ. ಬುಧವಾರ (ಮಾರ್ಚ್8) ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಯಾತ್ರೆ ಸಂಚರಿಸಲಿದೆ. ಮಾರ್ಚ್ 9 ಮತ್ತು 10ರಂದು ಬೇಲೂರಿನಲ್ಲಿ ಸಭೆಗಳು ಜರುಗಲಿವೆ. ನಂತರ 13ರಂದು ಚನ್ನರಾಯಪಟ್ಟಣ, 14ರಂದು ಅರಸೀಕೆರೆ, 15ರಂದು ಹೊಳೆನರಸೀಪುರ, 16ರಂದು ಅರಕಲಗೂಡು, 17ರಂದು ಸಕಲೇಪುರ ಕ್ಷೇತ್ರದಲ್ಲಿ ಯಾತ್ರೆ ನಡೆಯಲಿದೆ.

ಒಟ್ಟು ಒಂದು ವಾರ ಹಾಸನ ಜಿಲ್ಲೆಯಲ್ಲಿ ಪಂಚರತ್ನ ರಥ ಯಾತ್ರೆ ನಡೆದರೂ ಸಹ ಹಾಸನ ಕ್ಷೇತ್ರಕ್ಕೆ ಮಾತ್ರ ತೆರಳದಿರುವುದರಿಂದ ಪಕ್ಷದ ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರಲ್ಲಿ ಟಿಕೆಟ್ ಗೊಂದಲ ಮುಂದುವರಿದಿದೆ ಎಂದು ಹೇಳಲಾಗಿದೆ. ಹಾಸನ ಕ್ಷೇತ್ರದಲ್ಲಿ ಇನ್ನೂ ಅಭ್ಯರ್ಥಿ ಯಾರು ಎಂಬುದು ಸ್ಪಷ್ಟವಾಗದ ಹಿನ್ನೆಲೆ ರಥಯಾತ್ರೆಯ ಪಟ್ಟಿಯಿಂದ ಹಾಸನ ಕ್ಷೇತ್ರವನ್ನ ಕೈಬಿಡಲಾಗಿದೆ. ಒಂದು ವೇಳೆ ಹಾಸನ ಕ್ಷೇತ್ರಕ್ಕೆ ಯಾತ್ರೆ ಹೋದರೆ ಯಾವ ಅಭ್ಯರ್ಥಿಯ ಪರವಾಗಿ ಮತ ಕೇಳಬೇಕಾಗಬುದುದು ಎನ್ನುವ ಗೊಂದಲದಲ್ಲಿ ಜೆಡಿಎಸ್ ಇದೆ ಎಂದು ಹೇಳಲಾಗಿದೆ.
ಇನ್ನೂ ಹಾಸನ ಟಕೆಟ್ ಬಿಕ್ಕಟ್ಟಿನಿಂದಾಗಿ ಪಕ್ಷ ಹಾಗೂ ಕುಟುಂಬದ ಸದಸ್ಯರಿಗೆ ಆಗುವ ಅವಮಾನವನ್ನ ತಪ್ಪಿಸುವ ಸಲುವಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಯಾತ್ರೆಯ ಪಟ್ಟಿಯಿಂದ ಹಾಸನ ಕ್ಷೇತ್ರವನ್ನ ಕೈ ಬಿಡಲಾಗಿದೆ ಎಂದು ಹೇಳಲಾಗಿದೆ. ಇನ್ನೂ ಕೆಲ ದಿನಗಳಲ್ಲಿ ಹಾಸನ ಅಭ್ಯರ್ಥಿ ಘೋಷಣೆಯಾಗಲಿದ್ದು, ಅಭ್ಯರ್ಥಿ ಘೋಷಣೆಯ ಬಳಿಕವೇ ಹಾಸಕದಲ್ಲಿ ಬೃಹತ್ ಸಮಾವೇಶವನ್ನ ನಡೆಸಲು ದಳಪತಿಗಳು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.












Click it and Unblock the Notifications