ಹಳೇಹುಬ್ಬಳ್ಳಿ ಕೇಸ್: ಸಿಎಂ ಸಿದ್ದರಾಮಯ್ಯ ಯೂಟರ್ನ್, ಅಚ್ಚರಿಯ ಹೇಳಿಕೆ!
ಹಳೇಹುಬ್ಬಳ್ಳಿ ಪ್ರಕರಣದಿಂದ ಸರ್ಕಾರಕ್ಕೆ ಮುಜುಗರವಾಗುವ ಸಂದರ್ಭ ಎದುರಾಗುವ ಮುನ್ನವೇ ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚೆತ್ತುಕೊಂಡಿದ್ದಾರೆಯೇ ಎನ್ನುವ ಪ್ರಶ್ನೆ ಎದುರಾಗಿದೆ. ಹಳೇ ಹುಬ್ಬಳ್ಳಿ ಕೋಮುಗಲಭೆ ವಿಚಾರವು ಬಿಜೆಪಿ ಹಾಗೂ ಕಾಂಗ್ರೆಸ್‌ನ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ. ಅಲ್ಲದೇ ಹಳೇಹುಬ್ಬಳ್ಳಿಯ ಗಲಭೆ ಕೇಸ್ ವಾಪಸ್ ಪಡೆದ ವಿಚಾರವು ಪ್ರತಿಭಟನೆ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಕಾಂಗ್ರೆಸ್ ಯೂಟರ್ನ್ ತೆಗೆದುಕೊಂಡಿದೆ.
ಹಳೇಹುಬ್ಬಳ್ಳಿ ಗಲಭೆ ಕೇಸ್ ಹಿಂಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರಕರಣಗಳನ್ನು ಹಿಂಪಡೆಯುವುದಕ್ಕೆ ಕೋರ್ಟ್ ಅನುಮತಿ ನೀಡಿದರೆ ಮಾತ್ರ ಹಳೇಹುಬ್ಬಳ್ಳಿ ಕೇಸ್‌ನ ವಾಪಸ್ ತೆಗೆದುಕೊಳ್ಳುತ್ತೇವೆ ಎಂದು ಯೂಟರ್ನ್ ಹೊಡೆದಿದ್ದಾರೆ.

ಹಳೇಹುಬ್ಬಳ್ಳಿ ಪ್ರಕರಣವನ್ನು ಹಿಂಪಡೆಯುವ ಬಗ್ಗೆ ಈಚೆಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ, ಇದಕ್ಕೆ ಬಿಜೆಪಿ ಹಾಗೂ ಜೆಡಿಎಸ್ ವಿರೋಧ ಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ. ಬಿಜೆಪಿ ಈ ವಿಚಾರವಾಗಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುವ ಮುನ್ಸೂಚನೆಯನ್ನು ನೀಡಿತ್ತು. ಈಗಾಗಲೇ ಈ ಸಂಬಂಧ ಧಾರವಾಡ ಜಿಲ್ಲೆಯಲ್ಲಿ ಬಿಜೆಪಿ ನೇತೃತ್ವದಲ್ಲಿ ಸರಣಿ ಪ್ರತಿಭಟನೆಗಳು ನಡೆದಿವೆ.
ಸಿ.ಎಂ ಸಿದ್ದರಾಮಯ್ಯ ಹೇಳಿದ್ದೇನು: ಹಳೇಹುಬ್ಬಳ್ಳಿ ಕೇಸ್ ಹಿಂಪಡೆದಿರುವುದು ಹಾಗೂ ವಿರೋಧ ಪಕ್ಷಗಳ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿದ್ದಾರೆ. ಈ ವಿಷಯದಲ್ಲಿ (ಹಳೇಹುಬ್ಬಳ್ಳಿ) ಸುಳ್ಳು ಕೇಸ್ ಹಾಕಲಾಗಿದೆ. ಹೀಗಾಗಿ, ಈ ಕೇಸ್ ಹಿಂಪಡೆಯುವುದಕ್ಕೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಮುಂದುವರಿದು ಹಳೇಹುಬ್ಬಳ್ಳಿಯ ಕೇಸ್ ವಾಪಸ್ ಪಡೆಯುವುದಕ್ಕೆ ಕೋರ್ಟ್‌ನ ಅನುಮತಿ ಸಹ ಬೇಕು. ಒಂದೊಮ್ಮೆ ಕೋರ್ಟ್ ಅನುಮತಿಸಿದರೆ ಮಾತ್ರ ಹಳೇಹುಬ್ಬಳ್ಳಿ ಕೇಸ್ ಹಿಂದಕ್ಕೆ ಪಡೆಯುವುದಕ್ಕೆ ಸಾಧ್ಯವಿದೆ. ಕೋರ್ಟ್ ಅನುಮತಿ ನೀಡದೆ ಇದ್ದರೆ, ಕೇಸ್ ವಾಪಸ್ ಪಡೆಯುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.
43 ಕೇಸ್‌ಗಳನ್ನು ವಾಪಸ್ ಪಡೆಯಲಾಗಿದೆ: ರಾಜ್ಯದಲ್ಲಿ ಹಳೇಹುಬ್ಬಳ್ಳಿ ಮಾತ್ರವಲ್ಲದೇ ಒಟ್ಟು 43 ಕೇಸ್‌ಗಳನ್ನು ಹಿಂಪಡೆಯಲಾಗಿದೆ ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಉದ್ದೇಶಪೂರ್ವಕ ಹಾಗೂ ಸುಳ್ಳು ಪ್ರಕರಣಗಳನ್ನು ದಾಖಲು ಮಾಡಿದ್ದರೆ, ಇಲ್ಲವೇ ಹೋರಾಟದ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದ್ದರೆ ಸಮಿತಿ ರಚನೆ ಮಾಡಿ ಪರಿಶೀಲನೆ ಮಾಡಲಾಗುತ್ತದೆ. ಈ ನಿರ್ದಿಷ್ಟ ಪ್ರಕರಣಗಳನ್ನು ಪರಿಶೀಲನೆ ಮಾಡುವುದಕ್ಕೆಂದೇ ಸಂಪುಟ ಉಪಸಮಿತಿಯನ್ನು ರಚಿಸಲಾಗಿರುತ್ತದೆ. ಈ ರೀತಿಯ ಒಂದು ಉಪ ಸಮಿತಿ ಎನ್ನುವುದು ಎಲ್ಲಾ ಸರ್ಕಾರದಲ್ಲೂ ಇರುತ್ತೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮುಂದುವರಿದು ಈ ಪ್ರಕಣರದಲ್ಲಿ (ಹಳೇಹುಬ್ಬಳ್ಳಿ ಗಲಭೆ) ಉಪ ಸಮಿತಿ ಪರಿಶೀಲನೆ ಮಾಡಿ, ವರದಿ ನೀಡಿದ ನಂತರವೇ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರವನ್ನು ತೆಗದುಕೊಳ್ಳಲಾಗಿದೆ ಎಂದು ಅವರು ಸಮರ್ಥನೆ ಮಾಡಿಕೊಂಡಿದ್ದಾರೆ. ಉಪ ಸಮಿತಿ ರಾಜ್ಯ ಸಚಿವ ಸಂಪುಟಕ್ಕೆ ವಿಸ್ತೃತ ವರದಿಯನ್ನು ನೀಡಿದೆ. ಈ ವರದಿಯ ಆಧಾರದ ಮೇಲೆ ಕೇಸ್ ವಾಪಸ್ ಪಡೆಯುವುದಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲೂ, ಆರ್ ಎಸ್ ಎಸ್ ಕಾರ್ಯಕರ್ತರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ವಾಪಸ್ ಪಡೆಯಲಾಗಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.












Click it and Unblock the Notifications