ಸನ್ನೆಡತೆ ತೋರಿದ ಕೈದಿಗಳಿಗೆ ಬಿಡುಗಡೆ ಭಾಗ್ಯ!
ಬೆಂಗಳೂರು. ಜ.4 : ಸನ್ನಡೆತೆ ಆಧಾರದ ಮೇಲೆ ಕೈದಿಗಳ ಅವಧಿಪೂರ್ವ ಬಿಡುಗಡೆಗೆ ಒಪ್ಪಿಗೆ, ಕಬ್ಬು ಬೆಳೆಗಾರರಿಗೆ 450 ಕೋಟಿ ಪ್ರೋತ್ಸಾದ ಧನ, 331 ಪಶು ವೈದ್ಯಾಧಿಕಾರಿಗಳ ನೇಮಕಕ್ಕೆ ಒಪ್ಪಿಗೆ, ಮೈಸೂರಿನಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಪ್ರಾದೇಶಿಕ ಕೇಂದ್ರ ಸ್ಥಾಪನೆಗೆ 115 ಕೋಟಿ ಬಿಡುಗಡೆ ಮುಂತಾದವ ಮಹತ್ವದ ನಿರ್ಣಯಗಳಿಗೆ ಶುಕ್ರವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಡಿಕೆ ಶಿವಕುಮಾರ್ ಮತ್ತು ರೋಷನ್ ಬೇಗ್ ಸಂಪುಟಕ್ಕೆ ಸೇರಿದ ನಂತರ ನಡೆದ ಮೊದಲ ಸಂಪುಟ ಸಭೆ ಇದಾಗಿತ್ತು. ಸಭೆಯ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಸಂಪುಟ ಸಭೆಯ ವಿವರಗಳನ್ನು ಮಾಧ್ಯಮಗಳಿಗೆ ನೀಡಿದರು. [ಡಿ.19ರ ಸಂಪುಟ ಸಭೆ ನಿರ್ಣಯಗಳು]
ರಾಜ್ಯದಲ್ಲಿ ಕಳೆದ ಕೆಲವು ವರ್ಷಗಳಿಂದ ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಅವಧಿಗೆ ಮೊದಲೇ ಬಿಡುಗಡೆ ಮಾಡಿರಲಿಲ್ಲ. ಈ ಬಗ್ಗೆ ಹಲವು ವಲಯಗಳಿಂದ ಒತ್ತಡ ತೀವ್ರವಾಗಿತ್ತು. ಆದರೆ, ಸುಪ್ರೀಂ ಕೋರ್ಟ್ ಮತ್ತು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಈ ಸಂಬಂಧ ಮಾರ್ಗದರ್ಶಿ ಸೂತ್ರ ರಚಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದರಿಂದ ವಿಳಂಬವಾಗಿತ್ತು ಎಂದು ಜಯಚಂದ್ರ ಹೇಳಿದ್ದರು.
ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದ್ದು, 14 ವರ್ಷ ಪೂರೈಸಿದ ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲು ಸರ್ಕಾರ ಒಪ್ಪಿಗೆ ನೀಡಿದೆ ಎಂದರು. ಕೈದಿಗಳ ಬಿಡುಗಡೆಗಾಗಿ ಸರ್ಕಾರ ಮಾರ್ಗದರ್ಶಿ ಸೂತ್ರ ರಚಿಸಿದೆ. ಅದರಂತೆ, ಕೋಮು ಗಲಭೆ, ಸರ್ಕಾರಿ ನೌಕರರ ಹತ್ಯೆ, ರಾಷ್ಟ್ರದ್ರೋಹ, ಸಂಘಟಿತ ಅಪರಾಧ, ಅಪಹರಣ ಹತ್ಯೆ, ಮಾದಕ ವಸ್ತು ಸಾಗಣೆ ಸೇರಿದಂತೆ 21 ಗಂಭೀರ ಪ್ರಕರಣಗಳಲ್ಲಿ ಭಾಗಿಯಾದ ವ್ಯಕ್ತಿಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ಜಯಚಂದ್ರ ಹೇಳಿದರು.
ಅರ್ಹ ಕೈದಿಗಳ ಪಟ್ಟಿಯನ್ನು ತಯಾರಿಸುವಂತೆ ಕಾರಾಗೃಹ ಇಲಾಖೆ ಎಡಿಜಿಪಿ ಅವರಿಗೆ ಸೂಚನೆ ನೀಡಲಾಗಿದೆ. ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಪಟ್ಟಿ ಪರಿಶೀಲನೆ ಸಮಿತಿ ರಚಿಸಲಾಗಿದ್ದು, ಈ ಸಮಿತಿ ನೀಡುವ ವರದಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ರಾಜ್ಯಪಾಲರ ಒಪ್ಪಿಗೆ ಪಡೆದು ಕೈದಿಗಳನ್ನು ಬಿಡುಗಡೆ ಮಾಲಾಗುವುದು ಎಂದು ಅವರು ತಿಳಿಸಿದರು. [ಸಂಪುಟ ಸಭೆಯ ಇತರ ವಿವರಗಳು]

ಕಬ್ಬು ಬೆಳೆಗಾರರಿಗಾಗಿ 450 ಕೋಟಿ ಬಿಡುಗಡೆ
2013-14ನೇ ಸಾಲಿನಲ್ಲಿ ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ರು. 150 ಪ್ರೋತ್ಸಾಹ ಧನ ನೀಡುವ ಉದ್ದೇಶದಿಂದ 450 ಕೋಟಿ ಬಿಡುಗಡೆ ಮಾಡಲು ಸರ್ಕಾರ ಒಪ್ಪಿಗೆ ನೀಡಿದೆ. ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಸರ್ಕಾರ ರೈತರಿಗೆ ಈ ಭರವಸೆ ನೀಡಿತ್ತು. ಸಕ್ಕರೆ ಕಾರ್ಖಾನೆಗೆ ಪೂರೈಕೆಯಾದ ಕಬ್ಬಿನ ವಿವರವನ್ನು ಪಡೆದು ರೈತರಿಗೆ ನೇರವಾಗಿ ಜಿಲ್ಲಾಧಿಕಾರಿಗಳ ಮೂಲಕ ಈ ಹಣ ತಲುಪಿಸಲು ನಿರ್ಧರಿಸಲಾಗಿದೆ. ಇದರಿಂದ ಬೆಳಗಾವಿ ಭಾಗದ ರೈತರಿಗೆ 170 ಕೋಟಿ, ಬಾಗಲಕೋಟೆಗೆ 105 ಕೋಟಿ, ವಿಜಾಪುರದ ರೈತರಿಗೆ 30 ಕೋಟಿ ಲಾಭವಾಗಲಿದ್ದು, ಮೊದಲ ಹಂತದಲ್ಲಿ 300 ಕೋಟಿ ಬಿಡುಗಡೆ ಮಾಡಲು ಸಂಪುಟ ಒಪ್ಪಿಗೆ ನೀಡಲಾಗಿದೆ.

371 ಜೆ ತಿದ್ದುಪಡಿ
ಹೈದ್ರಾಬಾದ್ ಕರ್ನಾಟಕದ 6 ಜಿಲ್ಲೆಗಳಿಗೆ ಸಂವಿಧಾನದ ವಿಶೇಷ ಸೌಲಭ್ಯ ನೀಡುವ ಉದ್ದೇಶದಿಂದ ಜಾರಿಗೆ ತಂದ 371 ಜೆ ತಿದ್ದುಪಡಿ ಹಿನ್ನೆಲೆಯಲ್ಲಿ ರಚನೆಯಾದ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಕಾರ್ಯಕ್ರಮಗಳನ್ನು ಸುಲಲಿತವಾಗಿ ಜಾರಿಗೆ ತರಲು ಕೆಲ ಆಡಳಿತಾತ್ಮಕ ತಿದ್ದುಪಡಿಗೆ ಸಂಪುಟ ಒಪ್ಪಿಗೆ ನೀಡಿದೆ. ಹಿಂದೆ ಅಸ್ತಿತ್ವದಲ್ಲಿದ್ದ ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯನ್ನು ಹೊಸದಾಗಿ ರಚನೆಯಾದ ಮಂಡಳಿಯಲ್ಲಿ ವಿಲೀನಗೊಳಿಸಿ ಅದರ ಸ್ಥಿರ ಮತ್ತು ಚರಾಸ್ಥಿಯನ್ನು ಇದರ ವ್ಯಾಪ್ತಿಗೆ ತರಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಪಶು ವೈದ್ಯರ ನೇಮಕಕ್ಕೆ ಒಪ್ಪಿಗೆ
331 ಪಶು ವೈದ್ಯಾಧಿಕಾರಿಗಳ ನೇಮಕಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಆದರೆ, ಹಾಸನ ಮತ್ತು ಶಿವಮೊಗ್ಗ ಪಶು ವೈದ್ಯ ಕಾಲೇಜುಗಳಿಗೆ ಭಾರತೀಯ ಪಶುವೈದ್ಯ ಪರಿಷತ್ ಮಾನ್ಯತೆ ಸಮಸ್ಯೆ ಇದೆ. ಆದ್ದರಿಂದ, ಬೆಂಗಳೂರು ಮತ್ತು ಬೀದರ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ 260 ವಿದ್ಯಾರ್ಥಿಗಳನ್ನು ತಕ್ಷಣಕ್ಕೆ ನೇಮಕ ಮಾಡಿಕೊಳ್ಳುಲು ನಿರ್ಧರಿಸಲಾಗಿದೆ. ಶಿವಮೊಗ್ಗ ಮತ್ತು ಹಾಸನದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳನ್ನು ಸುಪ್ರೀಂ ಕೋರ್ಟ್ ಮತ್ತು ಪಶುವೈದ್ಯ ಪರಿಷತ್ ತೀರ್ಮಾನಕ್ಕೆ ಒಳಪಟ್ಟು ಎಂಬ ನಿಬಂದನೆ ಆಧಾರದ ಮೇಲೆ 71 ಜನರನ್ನು ನೇಮಕ ಮಾಡಿಕೊಳ್ಳಲು ನಿರ್ಧಾರ ಕೈಗೊಳ್ಳಲಾಗಿದೆ.

ಮರಳು ಲಾರಿ ಮುಷ್ಕರಕ್ಕೆ ಮಣಿಯುವುದಿಲ್ಲ
ಮರಳು ಲಾರಿ ಮಾಲೀಕರ ಮುಷ್ಕರಕ್ಕೆ ಮಣಿಯದೇ ಹೊಸ ಕಾನೂನನ್ನು ಸಮರ್ಪಕವಾಗಿ ಜಾರಿಗೊಳಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಲಾರಿ ಮಾಲೀಕರು ಒಂದು ಪರ್ಮಿಟ್ ಪಡೆದು ಎಲ್ಲಿ ಬೇಕೆಂದರಲ್ಲಿಂದ ಮರಳು ತುಂಬಿಕೊಳ್ಳಲು ಅನುಮತಿ ಕೊಡಿ ಎಂದು ಕೇಳುತ್ತಿದ್ದಾರೆ. ಹೊಸ ನೀತಿ ಜಾರಿಯಿಂದ ಸರ್ಕಾರಕ್ಕೆ ವಾರ್ಷಿಕ 1000 ಕೋಟಿ ಆದಾಯ ಬರುತ್ತದೆ. ಹೀಗಾಗಿ ಕಾನೂನು ಜಾರಿಗೊಳಿಸಲು ಸರ್ಕಾರ ತೀರ್ಮಾನಿಸಿದೆ.

ಅನ್ನಭಾಗ್ಯಕ್ಕಾಗಿ ಸಾಲ ಪಡೆಯುವುದು
ಸಿಎಂ ಸಿದ್ದರಾಮಯ್ಯ ಅವರ ಕನಸಿನ ಅನ್ನಭಾಗ್ಯ ಯೋಜನೆ ಜಾರಿಗೆ ಬಂದ ನಂತರ ಸಾರ್ವಜನಿಕ ಆಹಾರ ಪೂರೈಕೆಗೆ ರಾಜ್ಯಾದ್ಯಂತ ದಾಸ್ತಾನು ಕೇಂದ್ರ ಅಗತ್ಯವಿದೆ. ಇದನ್ನು ಸ್ಥಾಪಿಸಲು ನಬಾರ್ಡ್‌ನಿಂದ 2776.82 ಲಕ್ಷ ಸಾಲ ಪಡೆಯಲು ತಾತ್ವಿಕ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ.

ಸಂಪುಟ ಸಭೆಯ ಇತರ ನಿರ್ಣಯಗಳು
* ನಂಜನಗೂಡು- ಚಾಮರಾಜನಗರ ರೈಲು ಮಾರ್ಗದಲ್ಲಿ ಎರಡು ಕಡೆ ಮೇಲ್ಸೇತುವೆ ನಿರ್ಮಿಸಲು ತಲಾ 20 ಕೋಟಿ ಬಿಡುಗಡೆ.
* ದಾಣಗೆರೆಯಲ್ಲಿ ಐಟಿಐ ತರಬೇತುದಾರರ ತರಬೇತಿ ಸಂಸ್ಥೆ ಸ್ಥಾಪನೆಗೆ 5 ಕೋಟಿ ರೂ.
* ಚಾಮರಾಜನಗರದ ಹ್ಯೂಂಗ್ಯಂನಲ್ಲಿ ಮೊರಾರ್ಜಿ ದೇಸಾಯಿ ಶಾಲೆ ಸ್ಥಾಪನೆಗೆ 3.8 ಕೋಟಿ
* ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸಾಲ ಸೌಲಭ್ಯ ನೀಡಲು 50 ಕೋಟಿ ಸಾಲಕ್ಕೆ ಖಾತರಿ
* ಮೈಸೂರಿನಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಪ್ರಾದೇಶಿಕ ಕೇಂದ್ರ ಸ್ಥಾಪನೆಗೆ 115 ಕೋಟಿ ಬಿಡುಗಡೆ

ಇತರ ಕೆಲವು ನಿರ್ಣಯಗಳು
* ಚಾಮರಾಜನಗರಕ್ಕೆ ಪ್ರತ್ಯೇಕ ಹಾಲು ಉತ್ಪಾದಕ ಸಂಘ ಸ್ಥಾಪಿಸಲು 83 ಕೋಟಿ ಬಿಡುಗಡೆ ಮತ್ತು 45 ಎಕರೆ ಜಾಗ ನಿಗದಿ.
* ಕೊಪ್ಪಳ ಜಿಲ್ಲೆ ಯಲಬುರ್ಗ, ಗಂಗಾವತಿ ಮತ್ತು ಕುಷ್ಟಗಿ ತಾಲೂಕಿನ ಹಳ್ಳಿಗಳಿಗೆ ತುಂಗಭದ್ರಾ ನದಿಯಿಂದ ಕುಡಿಯುವ ನೀರು ಪೂರೈಕೆ ಯೋಜನೆಗೆ 135 ಕೋಟಿ
* ಬೆಳಗಾವಿ ಜಿಲ್ಲೆಗೆ ಬಳ್ಳಾರಿ ನಾಲಾ ಯೋಜನೆಗೆ 635.5 ಕೋಟಿ












Click it and Unblock the Notifications