Karnataka By Election Results: ರಾಜ್ಯದ ಮೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣ ಬಿಚ್ಚಿಟ್ಟ ಈಶ್ವರ್ ಖಂಡ್ರೆ
ಮೈಸೂರು, ನವೆಂಬರ್ 25: ರಾಜ್ಯದಲ್ಲಿ ನಡೆದ ಮೂರೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಂದಿರುವ ಈ ಗೆಲುವು ಗ್ಯಾರಂಟಿಗಳಿಗೆ ಸಂದ ಜಯವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.
ಕೆ.ಆರ್. ನಗರದಲ್ಲಿಂದು ನಡೆದ ಮಲೆ ಮಹದೇಶ್ವರ ಸ್ವಾಮಿ 54ನೇ ಉತ್ಸವದಲ್ಲಿ ಭಾಗಿಯಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಜನಪರವಾಗಿ ಕಾರ್ಯ ನಿರ್ವಹಿಸುತ್ತಿದೆ. ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿದೆ. ಇದನ್ನು ಸಹಿಸಲಾರದೆ ಪ್ರತಿಪಕ್ಷಗಳು ಇಲ್ಲ ಸಲ್ಲದ ಅಪಪ್ರಚಾರ ಮಾಡಿ, ಸುಳ್ಳು ಆರೋಪ ಹೊರಿಸಿ, ಅಬ್ಬರದ ಪ್ರಚಾರ ಮಾಡಿದವು. ಆದರೆ ನಾಡಿನ ಜನರು ಜೆಡಿಎಸ್ - ಬಿಜೆಪಿ ಅಪವಿತ್ರ ಮೈತ್ರಿಯನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿದರು.

ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರಗಳನ್ನು ಅಭದ್ರಗೊಳಿಸುವ ಸಂಚನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ. ರಾಜ್ಯದಲ್ಲಿ 136 ಕ್ಷೇತ್ರಗಳಲ್ಲಿ ಪ್ರಚಂಡ ಜಯಸಾಧಿಸಿರುವ ಕಾಂಗ್ರೆಸ್ ಪಕ್ಷವನ್ನು ಅಸ್ಥಿರಗೊಳಿಸಲು ಪಕ್ಷದ ನಾಯಕರ ಮೇಲೆ ಸುಳ್ಳು ಆರೋಪ ಮಾಡುತ್ತಾ ರಾಜ್ಯದ ಜನತೆಯ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದೆ. ಇದಕ್ಕೆ ರಾಜ್ಯದ ಜನರು ಚುನಾವಣೆ ಫಲಿತಾಂಶದ ಮೂಲಕ ಉತ್ತರ ನೀಡಿದ್ದಾರೆ ಎಂದರು. ಇನ್ನೂ ಪ್ರಿಯಾಂಕಾ ಗಾಂಧಿ ಅವರು, 4 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ನಮ್ಮ ಪಕ್ಷದ ಸರ್ವೋನ್ನತ ನಾಯಕರಾಗಿರುವ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಈಶ್ವರ ಖಂಡ್ರೆ ತಿಳಿಸಿದರು.
ನಮ್ಮ ಪ್ರಾಚೀನ ಸಂಸ್ಕೃತಿ, ಸಂಪ್ರದಾಯಗಳ ಉಳಿವಿಗೆ ಜಾತ್ರೆ, ಉತ್ಸವ, ಧಾರ್ಮಿಕ ಮಹೋತ್ಸವಗಳು ಸಹಕಾರಿ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ಕಾರ್ತೀಕ ಮಾಸ ಬೆಳಕಿನ ಹಬ್ಬ, ನಮ್ಮೆಲ್ಲರಲ್ಲೂ ಇರುವ ಅಜ್ಞಾನವೆಂಬ ಅಂಧಕಾರವನ್ನು ತೊಡದುಹಾಕಿ, ಸುಜ್ಞಾನವೆಂಬ ಬೆಳಕನ್ನು ಹಚ್ಚುವ ಮಾಸ ಕಾರ್ತೀಕ. ಈ ಮಾಸದಲ್ಲಿ ವಿವಿಧ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ, ಅರ್ಚನೆ, ಲಕ್ಷ ದೀಪೋತ್ಸವ ಮತ್ತು ಉತ್ಸವಗಳು ನಡೆಯುತ್ತವೆ. ಧಾರ್ಮಿಕ ವಿಚಾರಗಳ ವಿನಿಮಯ ಆಗುತ್ತದೆ. ಸಹಬಾಳ್ವೆಯ ಮಹತ್ವ ಸಾರುತ್ತವೆ ಎಂದು ಹೇಳಿದರು.
ಮಲೆ ಮಹದೇಶ್ವರ ಸ್ವಾಮಿಯವರು ಜನಪದರ ದೇವರು, ಅವರು ಹುಲಿಯ ಮೇಲೆ ಸಂಚಾರ ಮಾಡುತ್ತಿದ್ದರು ಎಂದು ಕೇಳಿದ್ದೇವೆ. ಆದರೆ ಅವರ ಮನಸ್ಸು ಮಲ್ಲಿಗೆಯಷ್ಟೇ ಮೃದುವಾಗಿತ್ತು. ಹೀಗಾಗಿಯೇ ಅವರು ಮಲ್ಲಿಗೆ ಮಾದಪ್ಪನಾಗಿ ಜನರ ಹೃದಯದಲ್ಲಿ ನೆಲೆಸಿದ್ದಾರೆ ಎಂದರು.
15ನೇ ಶತಮಾನದಲ್ಲಿ ಜನರ ಸಂಕಷ್ಟಗಳನ್ನು ತಮ್ಮ ಅಲೌಕಿಕಶಕ್ತಿಯಿಂದ ಪರಿಹರಿಸಲು ಅವತರಿಸಿದ ದೈವಾಂಶ ಸಂಭೂತರಾದ ಮಹದೇಶ್ವರಸ್ವಾಮಿಯವರು ಬೆಟ್ಟದ ಸರಣಿಯ ರಮಣೀಯತೆಗೆ ಮನಸೋತು ಮಹದೇಶ್ವರ ಬೆಟ್ಟದಲ್ಲಿಯೇ ನೆಲೆಸಿದರು. ಸುದೀರ್ಘ ತಪಸ್ಸು ಮಾಡಿ ಸಿದ್ಧಿಯನ್ನು ಪಡೆದರು., ಇಂದಿಗೂ ತಮ್ಮ ತಪಃಶಕ್ತಿಯನ್ನು ಜನರ ಕಲ್ಯಾಣ ಮಾಡುತ್ತಿದ್ದಾರೆ. ತಮ್ಮ ಅಲೌಕಿಕ ಶಕ್ತಿಯನ್ನು ಸಮಾಜದ ಅದರಲ್ಲೂ ದೀನ ದಲಿತರ, ಶೋಷಿತರನ್ನು ಹರಸುತ್ತಿದ್ದಾರೆ ಎಂದು ಈಶ್ವರ ಖಂಡ್ರೆ ಹೇಳಿದರು.












Click it and Unblock the Notifications