Ration card; ಪಡಿತರ ಚೀಟಿಯಲ್ಲಿ ಈ ತಿದ್ದುಪಡಿಗೆ ಅವಕಾಶ
ಬೆಂಗಳೂರು, ಆಗಸ್ಟ್ 18: ಕರ್ನಾಟಕ ಸರ್ಕಾರ ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡುವ ಗೃಹಲಕ್ಷ್ಮಿ ಯೋಜನೆ ಘೋಷಣೆ ಮಾಡಿದೆ. ಯೋಜನೆ ಫಲಾನುಭವಿಯಾಗಲು ನೋಂದಣಿ ಆರಂಭವಾಗಿದೆ. ಯೋಜನೆಗಾಗಿ ರೇಷನ್ ಕಾರ್ಡ್‌ನಲ್ಲಿ ತಿದ್ದುಪಡಿ ಮಾಡಲು ಅವಕಾಶ ಕೊಡಲಾಗಿದೆ.
ರಾಜ್ಯ ಸರ್ಕಾರ ಸದ್ಯಕ್ಕೆ ರೇಷನ್ ಹೊಸ ಕಾರ್ಡ್‌ಗಳನ್ನು ನೀಡುವುದಿಲ್ಲ. ಆದರೆ ಆಯುಕ್ತರು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಬೆಂಗಳೂರು ಇವರು ಪಡಿತರ ಚೀಟಿಯಲ್ಲಿನ ತಿದ್ದುಪಡಿ/ ಸೇರ್ಪಡೆ ಮಾಡುವ ಬಗ್ಗೆ ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಗೆ ಇನ್ನೂ ನೋಂದಣಿ ಮಾಡಿಸದೇ ಇರುವವರು ರೇಷನ್ ಕಾರ್ಡ್‌ನಲ್ಲಿ ಈ ತಿದ್ದುಪಡಿಗಳನ್ನು ಮಾಡಬಹುದಾಗಿದೆ. ಮುಖ್ಯವಾಗಿ ಗೃಹಲಕ್ಷ್ಮಿ ಯೋಜನೆಗೆ ಕುಟುಂಬದ ಯಜಮಾನಿಯ ಸ್ಥಾನ ಬದಲಾಯಿಸುವ ಅವಶ್ಯಕತೆ ಇದ್ದಲ್ಲಿ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ.
ಯಾವ-ಯಾವ ವಿವರ ತಿದ್ದುಪಡಿ; ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಪಡಿತರ ಚೀಟಿಯಲ್ಲಿ ಈ ಕೆಲವು ತಿದ್ದುಪಡಿ ಅಥವಾ ಸೇರ್ಪಡೆಗೆ ಅವಕಾಶ ನೀಡಿದೆ.
ಗೃಹಲಕ್ಷ್ಮಿಯೋಜನೆಯ ಲಾಭ ಪಡೆಯಲು ಕುಟುಂಬದ ಯಜಮಾನಿಯ ಸ್ಥಾನ ಬದಲಾಯಿಸುವ ಅವಶ್ಯಕತೆ ಇದ್ದಲ್ಲಿ ಈಗ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
* ಯಜಮಾನಿಯ ಸ್ಥಾನದಲ್ಲಿರುವ ಮಹಿಳೆ ನಿಧನರಾಗಿದ್ದರೆ
* ಪಡಿತರ ಚೀಟಿಯಲ್ಲಿ ಪುರುಷ ಕುಟುಂಬದ ಮುಖ್ಯಸ್ಥನಾಗಿದ್ದರೆ
* ಯಜಮಾನಿಯ ಸ್ಥಾನವನ್ನು ಅತ್ತೆಯಿಂದ ಸೊಸೆಗೆ ಅಥವಾ ಸೊಸೆಯಿಂದ ಅತ್ತೆಗೆ ವರ್ಗಾಯಿಸಬೇಕಾಗಿದ್ದರೆ ಈಗ ತಿದ್ದುಪಡಿಗಾಗಿ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ ಎಂದು ಸರ್ಕಾರ ಹೇಳಿದೆ.
ಒಂದು ವೇಳೆ ಗೃಹಲಕ್ಷ್ಮಿ ಯೋಜನೆಗೆ ಇದುವರೆಗೂ ನೋಂದಾಯಿಸದೇ ಇರುವವರು ಯಜಮಾನಿಯ ಬದಲಾವಣೆ ಮಾಡಿಕೊಳ್ಳಬಹುದು. ಯೋಜನೆಯಡಿ ಈಗಾಗಲೇ ನೋಂದಾಯಿಸಿ ಯಜಮಾನಿಯ ಬದಲಾವಣೆಗೆ ಅರ್ಜಿ ಸಲ್ಲಿಸಿದಲ್ಲಿ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಈ ಅರ್ಜಿ ಇತ್ಯರ್ಥಗೊಳ್ಳುವವರೆಗೂ ಗೃಹಲಕ್ಷ್ಮಿ ಯೋಜನೆಯ ಲಾಭ ತಡೆಹಿಡಿಯಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.
ಆಯುಕ್ತರು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಬೆಂಗಳೂರು ಇವರು ಸುತ್ತೋಲೆಯಲ್ಲಿ ಪ್ರಸ್ತುತ ಪಡಿತರ ಚೀಟಿಯಲ್ಲಿನ ಫಲಾನುಭವಿಗಳ ಮಾಹಿತಿಯ ತಿದ್ದುಪಡಿ ಹಾಗೂ ಹೆಚ್ಚುವರಿ ಫಲಾನುಭವಿಗಳ ಹೆಸರನ್ನು ಸೇರ್ಪಡೆ ಮಾಡಲು ಅನುಮೋದನೆಯನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸರ್ಕಾರದ ಮುಂದಿನ ಆದೇಶದವರೆಗೆ ಯಾವುದೇ ಹೊಸ ಪಡಿತರ ಚೀಟಿಯನ್ನು ಮಂಜೂರು ಮಾಡದಂತೆ ನಿರ್ದೇಶಿಲ್ಪಟ್ಟಿದ್ದೇನೆ ಎಂದು ಹೇಳಿದ್ದಾರೆ. ಆದ್ದರಿಂದ ಸರ್ಕಾರ ಸದ್ಯಕ್ಕೆ ಹೊಸ ಪಡಿತರ ಚೀಟಿಗೆ ನೋಂದಣಿ ಮಾಡಿಕೊಳ್ಳುವುದಿಲ್ಲ.
ಕರ್ನಾಟಕದಲ್ಲಿ 2023ರ ಮಾರ್ಚ್‌ನಲ್ಲಿ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಘೋಷಣೆಯಾಗಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿತು. ಆಗ ಬಿಪಿಎಲ್ ಕಾರ್ಡ್ಗೆ ಅರ್ಜಿ ಸ್ವೀಕರಿಸುವುದನ್ನು ಆಹಾರ ಇಲಾಖೆ ಸ್ಥಗಿತಗೊಳಿಸಿತು. ಬಳಿಕ ಚುನಾವಣೆ ಮುಗಿದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಸಹ ಇನ್ನೂ ಹೊಸ ಬಿಪಿಎಲ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿಲ್ಲ.
ಕರ್ನಾಟಕ ಸರ್ಕಾರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಬಿಪಿಎಲ್, ಎಪಿಎಲ್, ಅಂತ್ಯೋದಯ ಕಾರ್ಡ್‌ನಲ್ಲಿ ನಮೂದಿಸಿರುವಂತೆ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2,000 ರೂ. ಗಳನ್ನು 'ಗೃಹಲಕ್ಷ್ಮಿ' ಯೋಜನೆಯಡಿ ನೀಡುತ್ತದೆ. ಡಿಬಿಟಿಯ ಮೂಲಕ ನೇರವಾಗಿ ಯಜಮಾನಿ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುತ್ತದೆ.
ಕುಟುಂಬದಲ್ಲಿ ಅತ್ತೆ ಮತ್ತು ಸೊಸೆ ಇದ್ದರೆ ಯಜಮಾನಿಯ ಸ್ಥಾನವನ್ನು ಅತ್ತೆಯಿಂದ ಸೊಸೆಗೆ ಅಥವಾ ಸೊಸೆಯಿಂದ ಅತ್ತೆಗೆ ವರ್ಗಾಯಿಸಬೇಕಾಗಿದ್ದರೆ ಈಗ ರೇಷನ್ ಕಾರ್ಡ್‌ನಲ್ಲಿ ತಿದ್ದುಪಡಿ ಮಾಡಲು ಅರ್ಜಿ ಸಲ್ಲಿಸಬಹುದು.












Click it and Unblock the Notifications