Gruhalakshmi Scheme: ಗೃಹಲಕ್ಷ್ಮಿ ಯೋಜನೆ ಹಣ ದುರುಪಯೋಗಕ್ಕೆ ಕಡಿವಾಣ ಹಾಕಲು ಹೊಸ ನಿಯಮ
Gruhalakshmi Scheme: ರಾಜ್ಯ ಸರ್ಕಾರ ಜಾರಿ ಮಾಡಿರುವ ಪಂಚ ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದೆ. ಇದರಡಿಯಲ್ಲಿ ಪ್ರತಿ ತಿಂಗಳು ಪ್ರತಿ ಮನೆ ಯಜಮಾನಿ ಖಾತೆಗೆ 2,000 ರೂಪಾಯಿ ಹಣ ಹಾಕಲಾಗುತ್ತದೆ. ಆದರೆ, ಈ ಯೋಜನೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿದ್ದವು. ಆದ್ದರಿಂದ ಸರ್ಕಾರ ಇದೀಗ ಹೊಸ ನಿಯಮ ಜಾರಿಗೆ ಮುಂದಾಗಿದೆ.
ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆಯ ಹಣದ ದುರುಪಯೋಗ ತಪ್ಪಿಸುವ ಉದ್ದೇಶದಿಂದ ಹೊಸ ಮಾರ್ಗಸೂಚಿ ರೂಪಿಸುವ ಚಿಂತನೆ ನಡೆಯುತ್ತಿದೆ. ಮರಣ ಹೊಂದಿರುವ ಫಲಾನುಭವಿಗಳ ಖಾತೆಗಳಿಗೂ ಹಣ ಜಮಾ ಆಗುತ್ತಿರುವ ಕುರಿತು ಆರೋಪ ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ, ಇಂತಹ ಅಕ್ರಮವನ್ನು ತಡೆಯಲು ಜೀವಿತ ಪ್ರಮಾಣಪತ್ರ (ಲೈಫ್ ಸರ್ಟಿಫಿಕೇಟ್) ಸಲ್ಲಿಕೆಯನ್ನು ಕಡ್ಡಾಯಗೊಳಿಸುವ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಶೀಲನೆ ನಡೆಸುತ್ತಿದೆ.

ಫಲಾನುಭವಿಗಳಿಗೆ ಮಾತ್ರ ಹಣ ತಲುಪಬೇಕು: ಈ ಸಂಬಂಧ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದ್ದಾರೆ. ಯೋಜನೆಯ ನಿಜವಾದ ಫಲಾನುಭವಿಗಳಿಗೆ ಮಾತ್ರ ಹಣ ತಲುಪಬೇಕು ಹಾಗೂ ಸರ್ಕಾರದ ಹಣ ವ್ಯರ್ಥ ಆಗದಂತೆ ಕ್ರಮ ಕೈಗೊಳ್ಳಬೇಕೆಂಬು ಎಂದು ಹೇಳಿದ್ದಾರೆ.
ಹಣದ ದುರುಪಯೋಗಕ್ಕೆ ಕಡಿವಾಣ: ಸರ್ಕಾರದ ಮಟ್ಟದಲ್ಲಿ ಈ ಪ್ರಸ್ತಾವನೆಗೆ ಸಕಾರಾತ್ಮಕ ಸ್ಪಂದನೆ ದೊರಕಿದ್ದು, ಮುಂದಿನ ದಿನಗಳಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಹೊಸ ನಿಯಮ ಜಾರಿಗೆ ಬಂದರೆ, ಯೋಜನೆಯ ಪಾರದರ್ಶಕತೆ ಹೆಚ್ಚುವುದರ ಜೊತೆಗೆ, ಹಣದ ದುರುಪಯೋಗಕ್ಕೂ ಕಡಿವಾಣ ಬೀಳಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ದಿನೇಶ್ ಗೂಳಿಗೌಡ ಅವರ ಮನವಿಯನ್ನು ಪುರಸ್ಕರಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಈ ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದ್ದಾರೆ. ನಿವೃತ್ತ ಸರ್ಕಾರಿ ನೌಕರರು ಪಿಂಚಣಿ ಪಡೆಯಲು ಪ್ರತಿ ವರ್ಷ ಬ್ಯಾಂಕ್‌ಗಳಿಗೆ ಜೀವಿತ ಪ್ರಮಾಣಪತ್ರ ಸಲ್ಲಿಸುವುದು ಹೇಗೆ ಕಡ್ಡಾಯವೋ, ಅದೇ ರೀತಿಯಲ್ಲಿ ಗೃಹಲಕ್ಷ್ಮಿ ಯೋಜನೆಗೂ ತರಲು ಉದ್ದೇಶಿಸಲಾಗಿದೆ ಎಂದು ತಿಳಿದುಬಂದಿದೆ.
ಮರಣ ಹೊಂದಿರುವವರ ಹೆಸರಿನಲ್ಲೂ ಹಣ ಜಮಾ: ಗೃಹಲಕ್ಷ್ಮಿ ಯೋಜನೆಯಡಿ ಪ್ರಸ್ತುತ ಸುಮಾರು 1.24 ಕೋಟಿ ಫಲಾನುಭವಿಗಳು ನೋಂದಾಯಿತರಾಗಿದ್ದು, ಈ ಯೋಜನೆಗಾಗಿ ಸರ್ಕಾರ ಇದುವರೆಗೂ ₹57,300 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ವೆಚ್ಚ ಮಾಡಿದೆ. ಆದರೆ, ಕೆಲ ಪ್ರಕರಣಗಳಲ್ಲಿ ಮರಣ ಹೊಂದಿರುವ ವ್ಯಕ್ತಿಗಳ ಹೆಸರಿನಲ್ಲೂ ಹಣ ಜಮಾ ಆಗುತ್ತಿರುವುದು ಬೆಳಕಿಗೆ ಬಂದಿದೆ. ಇಂತಹ ಅಕ್ರಮವನ್ನು ತಡೆಹಿಡಿಯುವುದು ಸರ್ಕಾರದ ಪ್ರಮುಖ ಗುರಿಯಾಗಿದೆ.
ಹೊಸ ಕ್ರಮಗಳ ಜಾರಿ ಬಗ್ಗೆ ಚರ್ಚೆ: ನಿಜವಾದ ಹಾಗೂ ಅರ್ಹ ಫಲಾನುಭವಿಗಳಿಗೆ ಮಾತ್ರ ಹಣ ತಲುಪಬೇಕು. ಜೊತೆಗೆ ಸರ್ಕಾರದ ಹಣ ಯಾವುದೇ ರೀತಿಯಲ್ಲಿ ಸೋರಿಕೆ ಆಗಬಾರದು ಎಂಬ ಉದ್ದೇಶದಿಂದ ಹೊಸ ಕ್ರಮಗಳನ್ನು ಜಾರಿಗೆ ತರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರಿಂದ ಯೋಜನೆಯ ಪಾರದರ್ಶಕತೆ ಹೆಚ್ಚುವ ನಿರೀಕ್ಷೆಯಿದೆ.
ಮನವಿ ಪತ್ರದಲ್ಲಿ ಏನಿದೆ?: ಅಂತ್ಯೋದಯ, ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿಯಾಗಿ ದಾಖಲಾದ ಮಹಿಳೆಯೇ ಗೃಹಲಕ್ಷ್ಮಿ ಯೋಜನೆಯಡಿ ನೆರವು ಪಡೆಯುವ ಅರ್ಹ ಫಲಾನುಭವಿಯಾಗಿರುತ್ತಾರೆ. ಈ ಯೋಜನೆಯ ಮೂಲಕ ಇದುವರೆಗೂ 1,24,12,543 ಮಹಿಳೆಯರಿಗೆ ಸುಮಾರು ₹57,300 ಕೋಟಿ ರೂಪಾಯಿಗಳ ಆರ್ಥಿಕ ನೆರವು ವಿತರಣೆ ಮಾಡಲಾಗಿದೆ.
ಆದರೆ, ಫಲಾನುಭವಿಗಳ ಪಟ್ಟಿಯಲ್ಲಿ ಮರಣ ಹೊಂದಿರುವವರ ಹೆಸರುಗಳು ಉಳಿದುಕೊಂಡಿರುವ ಸಾಧ್ಯತೆ ಇರುವುದರಿಂದ, ಇಂತಹ ಮಾಹಿತಿಯನ್ನು ನಿಯಮಿತವಾಗಿ ಪರಿಶೀಲಿಸುವ ಅಗತ್ಯವಿದೆ. ಮರಣ ಹೊಂದಿದವರ ಖಾತೆಗಳಿಗೆ ಹಣ ಜಮಾ ಆಗದಂತೆ ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಲಾಗಿದೆ.
ನಿವೃತ್ತ ಸರ್ಕಾರಿ ನೌಕರರು ಪಿಂಚಣಿ ಪಡೆಯಲು ಪ್ರತಿವರ್ಷ ಬ್ಯಾಂಕ್‌ಗಳಲ್ಲಿ ಜೀವಿತ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯವಾಗಿರುವಂತೆ, ಗೃಹಲಕ್ಷ್ಮಿ ಯೋಜನೆಯಲ್ಲಿಯೂ ಅರ್ಹ ಫಲಾನುಭವಿಗಳಿಗೆ ಜೀವಿತ ಪ್ರಮಾಣಪತ್ರ ಸಲ್ಲಿಸುವ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಇದರಿಂದ ಯೋಜನೆಯ ದುರುಪಯೋಗವನ್ನು ತಡೆಯುವ ಜೊತೆಗೆ ಪಾರದರ್ಶಕತೆ ಹೆಚ್ಚಲಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.












Click it and Unblock the Notifications