Gruha Lakshmi Scheme: ಎರಡು ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆಯಲ್ಲಿ ಮೋಸ: ಮಹೇಶ್ ಟೆಂಗಿನಕಾಯಿ ಹೇಳಿದ್ದೇನು?
ಬೆಂಗಳೂರು: ರಾಜ್ಯ ಸರಕಾರವು ಗ್ಯಾರಂಟಿ ಎಂದು ಹೇಳುತ್ತ ಹೇಳುತ್ತ ಗ್ಯಾರಂಟಿಯಲ್ಲಿ ಜನರಿಗೆ ಬಹುದೊಡ್ಡ ಮೋಸವನ್ನು ಮಾಡುತ್ತಿದೆ ಎಂದು ಶಾಸಕ ಮಹೇಶ್ ಟೆಂಗಿನಕಾಯಿ ಅವರು ಆರೋಪಿಸಿದ್ದಾರೆ. ಪಡಿತರ ಚೀಟಿದಾರರಿಗೆ ಜನವರಿ 2025ರ ಹಣವನ್ನಾದರೂ ಹಾಕಿ ಅಥವಾ ಅಕ್ಕಿಯನ್ನಾದರೂ ಕೊಡಿ ಎಂದು ಆಗ್ರಹಿಸಿದರು. ಒಂದು ಕಡೆ ಗೃಹಲಕ್ಷ್ಮಿಯ 2025ರ ಫೆಬ್ರವರಿ, ಮಾರ್ಚ್ ತಿಂಗಳ 5 ಸಾವಿರ ಕೋಟಿ ಹಣವನ್ನು ಕೊಟ್ಟಿಲ್ಲ ಎಂದು ಟೀಕಿಸಿದರು.
ಮಾಧ್ಯಮಗಳ ಜೊತೆ ಇಂದು ಮಹೇಶ್ ಟೆಂಗಿನಕಾಯಿ ಅವರು ಮಾತನಾಡಿ, ರಾಜ್ಯ ಸರಕಾರವು ಜನವರಿ 2025ಕ್ಕೆ ಸಂಬಂಧಿಸಿ ಪಡಿತರ ಚೀಟಿದಾರರಿಗೆ 657 ಕೋಟಿ ಹಣವನ್ನಾದರೂ ಹಾಕಲಿ ಅಥವಾ 5 ಕೆಜಿ ಅಕ್ಕಿಯನ್ನಾದರೂ ಮಾರ್ಚ್ ತಿಂಗಳ ಒಳಗೆ ಕೊಡಬೇಕು ಎಂದು ಒತ್ತಾಯಿಸಿದರು. ಇದು ಭಿಕ್ಷೆ ಹಾಕುವುದಲ್ಲ; ಗ್ಯಾರಂಟಿ ಘೋಷಿಸುವಾಗ 10 ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದರು. ಆದರೆ, 5 ಕೆಜಿ ಅಕ್ಕಿ ಕೊಡುತ್ತಿದ್ದಾರೆ. 5 ಕೆಜಿ ಅಕ್ಕಿಯನ್ನು ಕೇಂದ್ರದ ನರೇಂದ್ರ ಮೋದಿಯವರ ನೇತೃತ್ವದ ಸರಕಾರ ಕೊಡುತ್ತಿದೆ ಎಂದು ಹೇಳಿದರು.

ಜನವರಿ 2025ಕ್ಕೆ ಸಂಬಂಧಿಸಿ ಪಡಿತರ ಚೀಟಿದಾರರಿಗೆ ಅಕ್ಕಿ ಕೊಟ್ಟಿಲ್ಲ. 657 ಕೋಟಿ ಉಳಿತಾಯವೇ? ಹಣಕಾಸಿನ ತೊಂದರೆ ಇದೆಯೇ? ಎಂದು ಕೇಳಿದ ಅವರು, ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಕೆಲಸವನ್ನು ಸಚಿವರು ಮಾಡಬೇಕೆಂದು ಆಗ್ರಹಿಸಿದರು. 1 ಕೋಟಿ 27 ಲಕ್ಷ ಜನರಿಗೆ ಅಕ್ಕಿ ಹಾಕುವುದಾಗಲೀ ಅಥವಾ ಹಣ ನೀಡುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ಸಚಿವರು ಸದನದಲ್ಲಿ ಉತ್ತರ ಕೊಡುವ ವೇಳೆ ಇದನ್ನು ಕೇಂದ್ರ ಸರಕಾರದ ಮೇಲೆ ಹಾಕುವ ಪ್ರಯತ್ನ ಮಾಡಿದ್ದರು. ಇದರ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಂದ ಮಾಹಿತಿ ಪಡೆದಿದ್ದೇನೆ. ದುಡ್ಡು ತುಂಬಿದರೆ ಮಧ್ಯಾಹ್ನದ ಒಳಗೆ ಅಕ್ಕಿ ಕೊಡುವುದಾಗಿ ತಿಳಿಸಿದ್ದಾರೆ. ಇದರಲ್ಲಿ ಕೇಂದ್ರ ಸರಕಾರದ ಯಾವುದೇ ರೀತಿಯ ಪಾಲಿಲ್ಲ ಎಂದರಲ್ಲದೇ, ರಾಜ್ಯ ಸರಕಾರವೇ ಮೋಸ ಮಾಡುತ್ತಿದೆ ಎಂದು ಆಕ್ಷೇಪಿಸಿದರು.
415 ಸ್ಥಾನದಿಂದ 99ಕ್ಕೆ ಕುಸಿದ ಕಾಂಗ್ರೆಸ್: ವಿಜಯೇಂದ್ರ
ಹಿಂದೊಮ್ಮೆ 415 ಸಂಸದರ ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಪಕ್ಷವು ಇವತ್ತು 2024ರ ಲೋಕಸಭಾ ಚುನಾವಣೆಯಲ್ಲಿ ಕೇವಲ 99 ಸ್ಥಾನಗಳಿಗೆ ತೃಪ್ತಿ ಪಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಹೇಳಿದರು. ಕಾಂಗ್ರೆಸ್ ಪಕ್ಷಕ್ಕೆ ಯಾಕೆ ಇಂಥ ಹೀನಾಯ ಪರಿಸ್ಥಿತಿ ಬಂದಿದೆ ಎಂದು ಒಂದು ಕ್ಷಣ ಯೋಚಿಸಬೇಕಾಗುತ್ತದೆ. ಹಿಂದೆ ಸೀತೆಯನ್ನು ರಾವಣ ಅಪಹರಿಸಿ ಲಂಕೆಗೆ ತೆಗೆದುಕೊಂಡು ಹೋದನೋ, ಅದೇ ರೀತಿ ಕಾಂಗ್ರೆಸ್ಸಿನವರು ಮಹಾತ್ಮ ಗಾಂಧಿಯವರ ಹೆಸರನ್ನು ಬಳಸಿಕೊಂಡಿದೆ.
ಈ ನಕಲಿ ಕಾಂಗ್ರೆಸ್ ಪಕ್ಷವು, ಮಹಾತ್ಮ ಗಾಂಧಿಗೂ ಟೋಪಿ ಹಾಕುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು. ಅಷ್ಟೇ ಅಲ್ಲ; ಬಡತನ ನಿರ್ಮೂಲನೆ ಮಾಡುತ್ತೇವೆ. ಗರೀಬಿ ಹಠಾವೋ ಎಂದು ಹೇಳಿ, ಈ ದೇಶದ ಬಡವರಿಗೂ ಮಕ್ಮಲ್ ಟೋಪಿ ಹಾಕುವ ಕೆಲಸವನ್ನು ಕಾಂಗ್ರೆಸ್ಸಿನವರು ಮಾಡಿದ ಪರಿಣಾಮವಾಗಿ ಇಂಥ ಹೀನಾಯ ಪರಿಸ್ಥಿತಿ ಕಾಂಗ್ರೆಸ್ ಪಕ್ಷಕ್ಕೆ ದೇಶ ಮತ್ತು ರಾಜ್ಯದಲ್ಲಿ ಬಂದಿದೆ. ಕಾಂಗ್ರೆಸ್ ಪಕ್ಷವು ದೇಶದಲ್ಲಿ ಇಂಥ ಹೀನಾಯ ಪರಿಸ್ಥಿತಿಗೆ ಇವತ್ತು ಯಾಕೆ ಬಂದಿದೆ ಎಂದು ಬೆಳಕು ಚೆಲ್ಲಬೇಕಾಗಿತ್ತು. ಈ ದೇಶದಲ್ಲಿ 1961ರಲ್ಲಿ ಕಾಂಗ್ರೆಸ್ಸಿನ 364 ಸಂಸದರಿದ್ದು, 1984ರಲ್ಲಿ 415 ಸಂಸದರು ಸಂಸತ್ತಿನಲ್ಲಿದ್ದರು.
ನಮ್ಮ ರಾಜ್ಯದಿಂದ ಜಿಎಸ್‍ಟಿ ತೆರಿಗೆ ಮೂಲಕ ಕೇಂದ್ರಕ್ಕೆ ಎಷ್ಟು ಮೊತ್ತ ಹೋಗಿದೆ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ಆಗಿವೆ ಎಂದ ಅವರು, ಆಡಳಿತ ಪಕ್ಷದವರ ಮಾತನ್ನು ಕೇಳುತ್ತಿದ್ದರೆ ನಮ್ಮ ರಾಜ್ಯದ ತೆರಿಗೆ ಹಣದಿಂದ ಕೇಂದ್ರ ಸರಕಾರವು ಬಹಳ ಭ್ರಷ್ಟಾಚಾರ ಮಾಡಿದೆ; ಲೂಟಿ ಮಾಡಿದೆ. ಈ ದೇಶದಲ್ಲಿ, ರಾಜ್ಯದಲ್ಲಿ ಅಭಿವೃದ್ಧಿಯೇ ಆಗಿಲ್ಲ ಎಂಬ ಅರ್ಥದಲ್ಲಿ ಮಾತನಾಡುತ್ತಿದ್ದಾರೆ. ಇದು ಒಂದು ರೀತಿ ಅರ್ಥಹೀನ ಎಂದು ತಿಳಿಸಿದರು.












Click it and Unblock the Notifications