Gruha Jyothi: ಆಗಸ್ಟ್ 1ರಿಂದ ಜಿರೊ ವಿದ್ಯುತ್ ಬಿಲ್- ನೋಂದಣಿ, ನಿಯಮ, ಲೆಕ್ಕಾಚಾರಗಳನ್ನು ಪರಿಶೀಲಿಸಿ
ಬೆಂಗಳೂರು, ಜುಲೈ 31: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆ ಗೃಹಜ್ಯೋತಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಈ ಯೋಜನೆ ಅಡಿಯಲ್ಲಿ, ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುತ್ತದೆ. ಗೃಹ ಜ್ಯೋತಿ ಯೋಜನೆಯ ನೋಂದಣಿ, ನಿಯಮ ಹಾಗೂ ಲೆಕ್ಕಾಚಾರಗಳನ್ನು ಇಲ್ಲಿ ಪರಿಶೀಲಿಸಿ.
ಜುಲೈ 25 ರ ವರೆಗೆ ಯೋಜನೆಗೆ ನೋಂದಾಯಿಸಿದ ಜನರು ಜುಲೈ ತಿಂಗಳ ಬಿಲ್ ಅನ್ನು ಜಿರೊ ದರದಲ್ಲಿ ಪಡೆಯುತ್ತಾರೆ. ಅವರು ಜುಲೈನಿಂದಲೇ ಈ ಯೋಜನೆಗೆ ಅರ್ಹರಾಗುತ್ತಾರೆ. ಅದರ ನಂತರ ನೋಂದಾಯಿಸಿದ ಜನರನ್ನು ಆಗಸ್ಟ್ ತಿಂಗಳ ಬಿಲ್ಲಿಂಗ್‌ಗೆ ಪರಿಗಣಿಸಲಾಗುತ್ತದೆ ಎಂದು ಇಂಧನ ಇಲಾಖೆ ಮಾಹಿತಿ ನೀಡಿದೆ.

ವಿದ್ಯುತ್ ಬಿಲ್ ಬಾಕಿ ಇರುವವರು ಕೂಡ ಯೋಜನೆಗೆ ಅರ್ಹರಾಗುತ್ತಾರೆ ಎಂದು ಸರ್ಕಾರ ಹೇಳಿದೆ. ಆದರೆ ಸೆಪ್ಟೆಂಬರ್ 30 ರೊಳಗೆ ಬಾಕಿ ಇರುವ ವಿದ್ಯುತ್ ಬಿಲ್‌ಗಳನ್ನು ತೆರವುಗೊಳಿಸದ ಗ್ರಾಹಕರಿಗೆ ಈ ಯೋಜನೆ ಅನ್ವಯಿಸುವುದಿಲ್ಲ ಎಂದು ಇಂಧನ ಇಲಾಖೆ ಖಚಿತಪಡಿಸಿದೆ.
ಪ್ರತಿ ಗ್ರಾಹಕರು ಕಳೆದ 12 ತಿಂಗಳುಗಳಲ್ಲಿ ಬಳಸಿದ ಸರಾಸರಿ ಯೂನಿಟ್‌ಗಳ ಆಧಾರದ ಮೇಲೆ ವಿದ್ಯುತ್ ಬಿಲ್ ಅನ್ನು ಲೆಕ್ಕಹಾಕಲಾಗುತ್ತದೆ. ಇದು 200 ಯೂನಿಟ್‌ಗಳಿಗಿಂತ ಕಡಿಮೆ ಇರಬೇಕು ಎಂದು ಸರ್ಕಾರ ಹೇಳಿದೆ.
ಪ್ರತಿ ತಿಂಗಳ ಒಂದನೇ ತಾರೀಖಿನಂದೇ ಬಿಲ್‌ಗಳನ್ನು ಜನರೇಟ್ ಮಾಡಲಾಗುವುದಿಲ್ಲ. ಕೆಲವು ಪ್ರದೇಶಗಳಲ್ಲಿ 15ನೇ ತಾರೀಖಿನವರೆಗೆ ಬಿಲ್‌ಗಳನ್ನು ಜನರೇಟ್ ಮಾಡಬಹುದು ಎಂದು ಇಂಧನ ಇಲಾಖೆ ಹೇಳಿದೆ. ಈ ಯೋಜನೆಯ ಅರ್ಹ ಗ್ರಾಹಕರು ರಾಜ್ಯ ಸರ್ಕಾರದ ಷರತ್ತುಗಳು ಮತ್ತು ಬಳಕೆಯ ಆಧಾರದ ಮೇಲೆ 'ಶೂನ್ಯ' ಬಿಲ್ ಪಡೆಯಲಿದ್ದಾರೆ ಎಂದು ಇಲಾಖೆ ಹೇಳಿದೆ.

ಯೋಜನೆಗೆ ನೋಂದಾಯಿಸಿಕೊಳ್ಳದ ಗ್ರಾಹಕರು ಸೇವಾಸಿಂಧು ಪೋರ್ಟಲ್‌ನಲ್ಲಿ ಅಥವಾ ಆಯಾ ಪ್ರದೇಶಗಳಲ್ಲಿನ ಎಲ್ಲಾ ವಿದ್ಯುತ್ ಸರಬರಾಜು ಕಂಪನಿ ಕಚೇರಿಗಳಲ್ಲಿ ನೋಂದಾಯಿಸಿಕೊಳ್ಳಬಹುದು.
ಈಗಾಗಲೇ ಚಾಲ್ತಿಯಲ್ಲಿರುವ ವಿದ್ಯುತ್ ಸಬ್ಸಿಡಿ ಯೋಜನೆಗಳಾದ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಮತ್ತು ಅಮೃತ ಜ್ಯೋತಿ ಯೋಜನೆಯ ಗ್ರಾಹಕರು ಕೂಡ ಗೃಹ ಜ್ಯೋತಿ ಯೋಜನೆಗೆ ಅರ್ಹರಾಗಿದ್ದಾರೆ.
ಯೋಜನೆಯು ಸ್ಥಳೀಯ ಗ್ರಾಹಕರಿಗೆ ಸೀಮಿತವಾಗಿದೆ. ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಮೀಟರ್ ಹೊಂದಿದ್ದರೆ, ಯೋಜನೆಯು ಕೇವಲ ಒಂದು ಮೀಟರ್‌ಗೆ ಸೀಮಿತವಾಗಿರುತ್ತದೆ.
ಈ ಯೋಜನೆಗೆ ಅರ್ಹರಾಗಲು ಗ್ರಾಹಕರು ಜೂನ್ 30 ರವರೆಗೆ ತಮ್ಮ ಬಾಕಿಯನ್ನು ಪಾವತಿಸಬೇಕು ಎಂದು ಈ ಹಿಂದೆ ಸರ್ಕಾರ ಹೇಳಿತ್ತು. ಆದರೆ ಸರ್ಕಾರವು ಈಗ ಬಾಕಿ ಇರುವ ಬಿಲ್‌ಗಳನ್ನು ಪಾವತಿಸಲು ಮೂರು ತಿಂಗಳ ಕಾಲಾವಕಾಶ ನೀಡಿದೆ.
ಆದರೆ ಸೆಪ್ಟೆಂಬರ್ 30 ರ ನಂತರ, ಹಿಂದಿನ ಬಾಕಿ ಇದ್ದರೆ, ಸರ್ಕಾರವು ಅಂತಹ ಗ್ರಾಹಕರನ್ನು ಉಚಿತ ವಿದ್ಯುತ್ ಯೋಜನೆಯಡಿ ಪರಿಗಣಿಸುವುದಿಲ್ಲ.
ಗ್ರಾಹಕರು ಸೇವಾಸಿಂಧು ಪೋರ್ಟಲ್‌ನಲ್ಲಿ 'ಗೃಹ ಜ್ಯೋತಿ' ಯೋಜನೆಗೆ ಅರ್ಜಿ ಸಲ್ಲಿಸಬಹುದು. ಅಥವಾ, ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ ಅಥವಾ ಎಲ್ಲಾ ವಿದ್ಯುತ್ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು.
ಕಾಂಗ್ರೆಸ್ ನೀಡಿದ ಐದು ಭರವಸೆಗಳಲ್ಲಿ ಇದು ಎರಡನೇ 'ಗ್ಯಾರೆಂಟಿ' ಆಗಿದೆ. ಮಹಿಳೆಯರಿಗೆ ಉಚಿತ ಪ್ರಯಾಣದ ಭರವಸೆ ನೀಡುವ 'ಶಕ್ತಿ' ಯೋಜನೆಯನ್ನು ಜೂನ್ 11 ರಂದು ಜಾರಿಗೊಳಿಸಲಾಗಿದೆ.












Click it and Unblock the Notifications