ರಾಜ್ಯದ ಮೂರು ಜಿಲ್ಲೆಗಳಲ್ಲಿ ಹಿಂಸಾಚಾರ, ಇಬ್ಬರ ಸಾವು
ಬೆಂಗಳೂರು, ಸೆ. 26 : ರಾಜ್ಯದ ಮೂರು ಜಿಲ್ಲೆಗಳಲ್ಲಿ ಗುರುವಾರ ವಿವಿಧ ಕಾರಣಕ್ಕೆ ಘರ್ಷಣೆ ನಡೆದಿದ್ದು, ಘಟನೆಯಿಂದಾಗಿ ಇಬ್ಬರು ಮೃತಪಟ್ಟಿದ್ದಾರೆ. ಧಾರವಾಡ, ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಘರ್ಷಣೆಗಳು ನಡೆದಿದ್ದು, ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
ಧಾರಾವಾಡದ ಹಳ್ಳಿಕೇರಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಇಬ್ಬರು ವ್ಯಕ್ತಿಗಳ ನಡುವೆ ಘರ್ಷಣೆ ನಡೆದು ಯುವಕನೊಬ್ಬ ಮೃತಪಟ್ಟು, ಐವರು ಗಾಯಗೊಂಡಿದ್ದಾರೆ. ಬೆಳಗಾವಿಯಲ್ಲಿ ಪುನಃ ಘರ್ಷಣೆ ನಡೆದಿದ್ದು ಒಬ್ಬ ಯುವಕ ಮೃತಪಟ್ಟಿದ್ದಾನೆ. ಭಟ್ಕಳದಲ್ಲಿ ಗುಂಪು ಘರ್ಷಣೆ ನಡೆದಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ಧಾರವಾಡದ ಹಳ್ಳಿಕೇರಿ ಗ್ರಾಮದಲ್ಲಿ ಘರ್ಷಣೆ ನಡೆದಿದ್ದು, ಗಲಭೆಯಲ್ಲಿ ಗಾಯಗೊಂಡಿದ್ದ ಕವರೆಪ್ಪ ಕೊಟ್ರಪ್ಪ ಜಾವೂರ (32) ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಗಾಯಗೊಂಡಿರುವ ಮತ್ತೊಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ನೀಡುತ್ತಿದ್ದಾರೆ.
ಹಳ್ಳಿಕೇರಿ ಗ್ರಾಮಕ್ಕೆ ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ರವಾನಿಸಲಾಗಿದ್ದು, ಪರಿಸ್ಥಿತಿ ಹತೋಟಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ 45 ಜನರನ್ನು ಬಂಧಿಸಲಾಗಿದೆ. ಗಾಯಾಳುಗಳಿರುವ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲೂ ಭದ್ರತೆ ಹೆಚ್ಚಿಸಲಾಗಿದೆ. [ಬೆಳಗಾವಿಯಲ್ಲಿ ಗುಂಪು ಘರ್ಷಣೆ, 5 ಬೈಕ್‌ಗಳಿಗೆ ಬೆಂಕಿ]
ಬೆಳಗಾವಿ ವರದಿ : ಬೆಳಗಾವಿಯ ಅನಗೋಳದಲ್ಲಿ ಬುಧವಾರ ರಾತ್ರಿ ನಡೆದ ಚೂರಿ ಇರಿತದಲ್ಲಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕರಿಯಾಗದೇ ಕೆಎಲ್‌ಇ ಆಸ್ಪತ್ರೆಯಲ್ಲಿ ಗುರುವಾರ ಮೃತಪಟ್ಟಿದ್ದಾನೆ. ಈತನ ಸಾವಿನ ನಂತರ ಹಿಂಸಾಚಾರ ನಡೆದಿದೆ. ಮೃತಪಟ್ಟ ಯುವಕನನ್ನು ಫಿರೋಜ್ ಪಠಾಣ (25) ಎಂದು ಗುರುತಿಸಲಾಗಿದೆ.
ಪಿರೋಜ್ ಮೃತಪಟ್ಟ ಬಗ್ಗೆ ಮಾಹಿತಿ ದೊರಕಿದ ನಂತರ ಯುವಕರ ಗುಂಪೊಂದು ಅನಗೋಳ ಕಾಲೇಜು ರಸ್ತೆ, ಬೋಗಾರವೇಸ್, ಕ್ಯಾಂಪ್ ಹಾಗೂ ಗೋವಾವೇಸ್ ಪ್ರದೇಶಗಳಲ್ಲಿ ವಾಹನಗಳಿಗೆ ಕಲ್ಲು ತೂರಿದ್ದು ಹಲವಾರು ವಾಹನಗಳು ಜಖಂಗೊಂಡವು. ಇದರಿಂದ ನಗರದ ಕೆಲವು ಪ್ರದೇಶಗಳಲ್ಲಿ ಘರ್ಷಣೆ ನಡೆದಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಉತ್ತರ ಕನ್ನಡ : ಮುರ್ಡೇಶ್ವರದಲ್ಲಿ ಹಳೇ ದ್ವೇಷಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದು ನಾಲ್ವರು ಗಾಯಗೊಂಡಿದ್ದಾರೆ. ಘಟನೆ ಕುರಿತು ಮುರ್ಡೇಶ್ವರ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications