ಕರ್ನಾಟಕದ ನೀರಾವರಿ ಯೋಜನೆಗಳಿಗೆ ಬಾಕಿ ಇರುವ ಅನುಮತಿ, ಅನುದಾನ ನೀಡಿ: ಕೇಂದ್ರಕ್ಕೆ ಡಿ ಕೆ ಶಿವಕುಮಾರ್ ಮನವಿ
ಉದಯಪುರ, ಫೆಬ್ರವರಿ 18: ಕೇಂದ್ರ ಸರಕಾರವು ಕರ್ನಾಟಕ ರಾಜ್ಯಕ್ಕೆ ಬಾಕಿ ಇರುವ ನೀರಾವರಿ ಯೋಜನೆಗಳಿಗೆ ಅನುಮತಿ ಹಾಗೂ ಅನುದಾನಗಳನ್ನು ನೀಡಬೇಕು ಎಂದು ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ "2047ರಲ್ಲಿ ಭಾರತ ಜಲ ಸಮೃದ್ಧಿ ರಾಷ್ಟ್ರ" ಎಂಬ 2ನೇ ಅಖಿಲ ಭಾರತ ರಾಜ್ಯಗಳ ಜಲಸಂಪನ್ಮೂಲ ಸಚಿವರ ಸಮ್ಮೇಳನದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮನವಿ ಮಾಡಿದರು.
ಕರ್ನಾಟಕ ರಾಜ್ಯದ ಯೋಜನೆಗಳಿಗೆ ಕೇಂದ್ರ ಜಲಶಕ್ತಿ ಸಚಿವಾಲಯವು ಆದ್ಯತೆ ಮೇರೆಗೆ ಅಗತ್ಯ ಕ್ರಮ ಕೈಗೊಂಡು ಅನುಮತಿ ಕೊಡಿಸಬೇಕು. ಮೇಕೆದಾಟು ಯೋಜನೆಗೆ ಡಿಪಿಆರ್ ಪರಿಗಣಿಸಿ, ಅನುಮತಿ ನೀಡುವಂತೆ ಸಿಡಬ್ಲ್ಯೂಸಿಗೆ ನಿರ್ದೇಶನ ನೀಡಬೇಕು. ಇದರಿಂದ ತಮಿಳುನಾಡಿಗೆ ಪ್ರತಿ ತಿಂಗಳ ಲೆಕ್ಕಾಚಾರದ ನೀರು ನೀಡಬಹುದು. ಜತೆಗೆ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮತ್ತು ಬೆಂಗಳೂರಿನ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

2023-24 ರ ಕೇಂದ್ರ ಬಜೆಟ್ನಲ್ಲಿ ಮಧ್ಯ ಕರ್ನಾಟಕದ ಬರಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಅನುದಾನ ಘೋಷಿಸಿದ್ದರೂ ಈವರೆಗೂ ಹಣ ಬಿಡುಗಡೆಯಾಗಿಲ್ಲ. ಹೀಗಾಗಿ ಬೇಗನೆ ಯೋಜನೆ ಪೂರ್ಣಗೊಳಿಸಲು ಹಣ ಬಿಡುಗಡೆ ಮಾಡುವಂತೆ ಸಚಿವಾಲಯಕ್ಕೆ ವಿನಂತಿಸುತ್ತೇನೆ ಎಂದರು. 2011 ರ ಸೆಪ್ಟೆಂಬರ್ 16 ರಂದು ನೀಡಿರುವ ತೀರ್ಪಿನಲ್ಲಿ ಕೆಲವು ಬದಲಾವಣೆ ಮಾಡಲು ಸರ್ವೋಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಜತೆಗೆ ಕೃಷ್ಣಾ ಜಲ ವಿವಾದ ನ್ಯಾಯಮಂಡಳಿಯು (KWDT-II) 2010ರಲ್ಲಿ ನೀಡಿರುವ ತೀರ್ಪಿನ ಅನ್ವಯ ತನಗೆ ಮೀಸಲಾಗಿರುವ ನೀರನ್ನು ಕರ್ನಾಟಕ ಬಳಸಿಕೊಳ್ಳಲು ಗೆಜೆಟ್ ಅಧಿಸೂಚನೆ ಹೊರಡಿಸಬೇಕು ಎಂದು ವಿನಂತಿಸಿಕೊಳ್ಳುತ್ತೇನೆ ಎಂದು ಹೇಳಿದರು.
ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಮೇಲೆ ಒತ್ತಡ ತಂದು, 2018ರ ಆಗಸ್ಟ್ ನಲ್ಲಿ ಮಹದಾಯಿ ಜಲ ವಿವಾದ ನ್ಯಾಯಮಂಡಳಿ ನೀಡಿದ ತೀರ್ಪಿನ ಅನ್ವಯ ಕಳಸಾ ನಾಲಾ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮತಿ ದೊರಕಿಸಿಕೊಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಜಲಶಕ್ತಿ ಸಚಿವಾಲಯವು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ಮೇಲೆ ಒತ್ತಡ ಹೇರಿ, ನದಿ ಜೋಡಣೆ ಯೋಜನೆಯಡಿ ಗೋದಾವರಿ- ಕಾವೇರಿ ಯೋಜನೆಗೆ ಸಂಬಂಧಿಸಿದಂತೆ ರಾಜ್ಯದ ಪಾಲನ್ನು ಮರುಪರಿಶೀಲನೆ ಮಾಡಬೇಕು. ಈ ಯೋಜನೆಯಡಿ ಪ್ರಸ್ತುತ ಕರ್ನಾಟಕಕ್ಕೆ ಕೇವಲ 15.891 ಟಿಎಂಸಿ (ಶೇ. 10.74) ನೀರನ್ನು ಮಾತ್ರ ಹಂಚಿಕೆ ಮಾಡಲಾಗಿದೆ ಎಂದರು.
ನಮ್ಮ ದೇಶವು ಪ್ರಪಂಚದ ಶೇ.18 ರಷ್ಟು ಜನಸಂಖ್ಯೆ ಹೊಂದಿದೆ. ಆದರೆ ಶೇ. 4 ರಷ್ಟು ಮಾತ್ರ ಶುದ್ದ ಕುಡಿಯುವ ನೀರಿನ ಮೂಲವನ್ನು ಹೊಂದಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ದೇಶವು ಸಾಕಷ್ಟು ಸವಾಲು ಎದುರಿಸಬೇಕಿದೆ. ಕೃಷಿ ಅಗತ್ಯಗಳಿಗೆ, ಬೆಳೆಯುತ್ತಿರುವ ಜನಸಂಖ್ಯೆಗೆ, ನಗರಗಳ ವಿಸ್ತರಣೆಗೆ, ಕೈಗಾರಿಕೆಗಳಿಗೆ ನೀರು ಬೇಡಿಕೆ ಪೂರೈಸಲು ಈಗಿನಿಂದಲೇ ಸನ್ನದ್ಧವಾಗಿರಬೇಕು ಎಂದು ಹೇಳಿದರು. ದೇಶದಲ್ಲಿ ಈವರೆಗೆ ಸುಮಾರು 253 ಶತಕೋಟಿ ಘನ ಮೀಟರ್ (BCM) ನೀರಿನ ಸಂಗ್ರಹಣಾ ಸಾಮರ್ಥ್ಯವಿದೆ. ನಮ್ಮ ದೇಶವು ಸುಸ್ಥಿರ ಪ್ರಗತಿ ಸಾಧಿಸಲು ನೀರಿನ ಸಂಪನ್ಮೂಲ ಬಲಪಡಿಸುವ ಅಗತ್ಯವಿದೆ. ನೀರಿನ ಸಂಗ್ರಹ ಸಾಮರ್ಥ್ಯ ಮತ್ತು ಜಿಡಿಪಿ ಬೆಳವಣಿಗೆ ನಡುವೆ ನೇರ ಸಂಬಂಧವಿದೆ ಎಂದು ಅನೇಕ ತಜ್ಞರು ಹೇಳಿದ್ದಾರೆ ಎಂದರು.
ನೀರು ವಿಶಿಷ್ಟ ಸಂಪನ್ಮೂಲ. ಸುಸ್ಥಿರ ಆರ್ಥಿಕ ಬೆಳವಣಿಗೆಗೆ, ಮಾನವನ ಮೂಲಭೂತ ಅಗತ್ಯ ಪೂರೈಸಲು, ಪರಿಸರ ಸಮತೋಲನ ಕಾಯ್ದುಕೊಳ್ಳಲು ನೀರು ಮೂಲಾಧಾರ. ಹವಾಮಾನ ಬದಲಾವಣೆ, ಹೆಚ್ಚುತ್ತಿರುವ ನೀರಿನ ಮಾಲಿನ್ಯ ಮತ್ತು ವಿವಿಧ ವಲಯಗಳು ಅಥವಾ ಬಳಕೆದಾರರ ನಡುವಿನ ಸ್ಪರ್ಧೆಯಿಂದ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ಕರ್ನಾಟಕವು ಪರಿಣಾಮಕಾರಿ ನಿರ್ವಹಣೆ ಮತ್ತು ನೀರಿನ ಬಳಕೆಯ ದಕ್ಷತೆಯನ್ನು ಸಾಧಿಸಲು ಅನೇಕ ಸುಧಾರಣೆಗಳನ್ನು ಜಾರಿಗೆ ತಂದಿದೆ. ನೀರಾವರಿ ಮತ್ತು ಕುಡಿಯುವ ನೀರಿನ ಕಾಮಗಾರಿಗಳಿಂದ ಅಕ್ರಮವಾಗಿ ನೀರು ಬಳಸಿಕೊಳ್ಳುವುದನ್ನು ತಡೆಯಲು ಕರ್ನಾಟಕ ನೀರಾವರಿ ಕಾಯ್ದೆಗೆ 1965ಕ್ಕೆ, 2024ರ ಆಗಸ್ಟ್ ನಲ್ಲಿ ತಿದ್ದುಪಡಿ ಮಾಡಲಾಯಿತು.












Click it and Unblock the Notifications