ಪಂಚಾಯಿತಿ ಫೈಟ್ : ಮೊದಲ ಹಂತದಲ್ಲಿ ಶೇ 80ರಷ್ಟು ಮತದಾನ
ಬೆಂಗಳೂರು, ಮೇ 29 : ಪಂಚಾಯಿತಿ ಫೈಟ್ ಆರಂಭವಾಗಿದೆ. ಗ್ರಾಮ ಪಂಚಾಯಿತಿ ಚುನಾವಣೆಗೆ ಶುಕ್ರವಾರ ಮೊದಲ ಹಂತದ ಮತದಾನ ನಡೆಯುತ್ತಿದೆ. 15 ಜಿಲ್ಲೆಗಳಲ್ಲಿ ಮತದಾನ ಆರಂಭವಾಗಿದ್ದು, ಒಟ್ಟು 1,19,648 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬೆಳಗ್ಗೆ 7 ರಿಂದ ಸಂಜೆ 5ರವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಶುಕ್ರವಾರ ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು, ಹಾಸನ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಬೆಳಗಾವಿ, ವಿಜಾಪುರ, ಬಾಗಲಕೋಟ, ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಒಟ್ಟು 3,154 ಗ್ರಾಮ ಪಂಚಾಯಿತಿಗಳಲ್ಲಿ ಮತದಾನ ನಡೆಯುತ್ತಿದೆ. [ಪಂಚಾಯಿತಿ ಚುನಾವಣೆ ವೇಳಾಪಟ್ಟಿ]
ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಬಾಳೆಲೆ ಗ್ರಾಮ ಪಂಚಾಯಿತಿ ಚುನಾವಣೆಗೆ ಸುಳುಗೋಡು ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಭ್ಯರ್ಥಿ ಕಳ್ಳಿಚಂಡ ಎ.ನಂಜಪ್ಪ (52) ಹೃದಯಾಘಾತದಿಂದ ಗುರುವಾರ ಮೃತಪಟ್ಟಿದ್ದಾರೆ. ಆದ್ದರಿಂದ ಮತದಾನ ಮುಂದೂಡಲಾಗಿದೆ.

ಸಮಯ 5.30 : ಮೊದಲ ಹಂತದ ಮತದಾನ ಅಂತ್ಯಗೊಂಡಿದ್ದು ಶೇ 80ರಷ್ಟು ಮತದಾನವಾಗಿದೆ
ಸಮಯ 3 ಗಂಟೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುಟ್ಟೂರು ಸಿದ್ದರಾಮನ ಹುಂಡಿಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಮತದಾನ ಮಾಡಿದರು.
ಸಮಯ 1 ಗಂಟೆ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅವರು ಬೋಳಿಯಾರು ರಂತಡ್ಕದ ಜಾರದಗುಡ್ಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 258ರಲ್ಲಿ ಮತ ಚಲಾಯಿಸಿದರು.
ಸಮಯ 12 ಗಂಟೆ : ಇಬ್ಬರು ಪಾದಾಚಾರಿಗಳಿಗೆ ರಾಜಹಂಸ ಬಸ್ ಡಿಕ್ಕಿ ಹೊಡೆದು ಅವರು ಮೃತಪಟ್ಟ ಕಾರಣ ಸಕಲೇಶಪುರದ ಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಚುನಾವಣೆ ಬಹಿಷ್ಕರಿಸಲಾಗಿದೆ. ಮೃತಪಟ್ಟವರನ್ನು ಶೆಟ್ಟಿಹಳ್ಳಿಯ ನಂಜೇಗೌಡ (24) ಮತ್ತು ಗೋಪಾಲ(30) ಎಂದು ಗುರುತಿಸಲಾಗಿದೆ.
ಸಮಯ 11.30 : ಬೆಳಗಾವಿ ತಾಲೂಕಿನ ಹುದಲಿಯಲ್ಲಿ ಬ್ಯಾಲೆಟ್ ಪೇಪರ್ ನಲ್ಲಿ ಅಭ್ಯರ್ಥಿ ಹೆಸರಿರದ ಕಾರಣ ಮತ್ತು ಖನಗಾಂವ ಕೆ.ಎಚ್ ಗ್ರಾಮ ಪಂಚಾಯಿತಿಯಲ್ಲಿ ಅಭ್ಯರ್ಥಿಯ ಚಿಹ್ನೆಗಳು ಬದಲಾದ ಕಾರಣ ಮೇ 31ರಂದು ಮರುಮತದಾನ ನಡೆಸಲು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.
ಸಮಯ 10.30 : ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬ್ರಹ್ಮಾಪುರ ಗ್ರಾಮದಲ್ಲಿ ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಜನರು ಚುನಾವಣೆ ಬಹಿಷ್ಕರಿಸಿದ್ದಾರೆ.
ಸಮಯ 9.30 : ಕೋಲಾರ ಜಿಲ್ಲೆಯ ಮುಳಬಾಗಿಲಿನ ಬಲ್ಲಾ ಗ್ರಾಮ ಉದ್ರಿಕ್ತಗೊಂಡಿದೆ. ಕೊಲೆಯಾದ ಸುಬ್ರಮಣಿ ಬೆಂಬಲಿಗರು
ಪ್ರತಿಸ್ಪರ್ಧಿಗಳ 5 ಮನೆ, 1 ಟ್ರ್ಯಾಕ್ಟರ್, 1 ಆಟೋಗೆ ಬೆಂಕಿ ಹಾಕಿದ್ದಾರೆ. ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಸಮಯ 9 ಗಂಟೆ : ಚಾಮರಾಜನಗರ ಜಿಲ್ಲೆಯ ಬಸನಾಪುರ ಗ್ರಾಮದಲ್ಲಿ ಅಭ್ಯರ್ಥಿಗಳ ಚಿಹ್ನೆ ಬದಲಾಗಿದ್ದು, ಅಭ್ಯರ್ಥಿಗಳು ಮತಗಟ್ಟೆ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ಮತದಾನ ಸ್ಥಗಿತಗೊಳಿಸಲಾಗಿದೆ.
ಸಮಯ 8.30 : ಮಂಡ್ಯ ಜಿಲ್ಲೆಯ ದೊಡ್ಡ ಅರಸಿನಕೆರೆಯಲ್ಲಿ ವಸತಿ ಸಚಿವ ಅಂಬರೀಶ್ ಮತದಾನ ಮಾಡಿದರು. 30 ನಿಮಿಷ ಸಾಲಿನಲ್ಲಿ ಕಾದ ಅವರು ನಂತರ ತಮ್ಮ ಹಕ್ಕು ಚಲಾಯಿಸಿದರು.

ಸಮಯ 7.30 : ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಬಲ್ಲಾ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದ ಸುಬ್ರಮಣಿ ಅವರನ್ನು ದುಷ್ಕರ್ಮಿಗಳು ಗುರುವಾರ ರಾತ್ರಿ ಕೊಲೆ ಮಾಡಿದ್ದಾರೆ. ಕೋಲಾರದಲ್ಲಿ ಜೂನ್ 2ರಂದು ಚುನಾವಣೆ ನಡೆಯಲಿದೆ.












Click it and Unblock the Notifications