Gram Panchayat; ಮುಷ್ಕರ ವಾಪಸ್ ಪಡೆದ ಪಿಡಿಒಗಳು
ಬೆಂಗಳೂರು, ಸೆಪ್ಟೆಂಬರ್ 06; ಗ್ರಾಮ ಪಂಚಾಯಿತಿ ಮಟ್ಟದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳು ಸೆಪ್ಟೆಂಬರ್ 14ರಿಂದ ಘೋಷಣೆ ಮಾಡಿದ್ದ ಮುಷ್ಕರವನ್ನು ವಾಪಸ್ ಪಡೆದಿದ್ದಾರೆ. ಬಡ್ತಿ ಸಮಸ್ಯೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಪಿಡಿಒಗಳು ಮುಷ್ಕರಕ್ಕೆ ಕರೆ ನೀಡಿದ್ದರು.
ವಿಕಾಸಸೌಧದಲ್ಲಿ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಇಲಾಖೆಯ ಉನ್ನತ ಅಧಿಕಾರಿಗಳು, ಪಿಡಿಒಗಳ ಸಂಘದ ಪದಾಧಿಕಾರಿಗಳ ಜೊತೆ ಸಭೆಯನ್ನು ನಡೆಸಿದರು. ಸಭೆಯ ಬಳಿಕ ಕರ್ನಾಟಕ ಪಂಚಾಯತ್‌ರಾಜ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಮುಷ್ಕರ ವಾಪಸ್ ಪಡೆಯುವುದಾಗಿ ಘೋಷಣೆ ಮಾಡಿದೆ.

ಈ ಕುರಿತು ಕರ್ನಾಟಕ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜು ವಾರದ ಮಾತನಾಡಿದ್ದು, "ಸಚಿವ ಪ್ರಿಯಾಂಕ್ ಖರ್ಗೆಯವರು ನಮ್ಮ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನಮ್ಮ ಬೇಡಿಕೆ ಈಡೇರಿಸುವ ನಿರೀಕ್ಷೆಯಿರುವ ಕಾರಣ ಉದ್ದೇಶಿತ ಅಸಹಕಾರ ಚಳವಳಿ ಕೈ ಬಿಟ್ಟಿದ್ದೇವೆ" ಎಂದು ಹೇಳಿದ್ದಾರೆ.
ಸಭೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಪಿಡಿಒಗಳ ಜೇಷ್ಠತಾ ಪಟ್ಟಿಯನ್ನು ಕಾನೂನು ಚೌಕಟ್ಟು ಮೀರದಂತೆ ವೈಜ್ಞಾನಿಕವಾಗಿ ಪರಿಶೀಲಿಸಿ ಪ್ರಕಟಿಸಲು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜೇಷ್ಠತಾ ಪಟ್ಟಿಯಲ್ಲಿ ಹಲವು ಜಿಲ್ಲೆಗಳಲ್ಲಿ ಗೊಂದಲವಾಗಿದೆ. ಅಧಿಕಾರಿಗಳು ಕೋರ್ಟ್ ಮೊರೆ ಹೋಗಿರುವ ಕಾರಣ ಕಗ್ಗಂಟಾಗಿದೆ. ಈ ಸಮಸ್ಯೆ ಬಗಹರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವರು ಭರವಸೆ ನೀಡಿದ್ದಾರೆ.
ಸಚಿವರ ಭರವಸೆ ಏನು?; ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, "ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಯತ್ನಿಸುವೆ. ಗ್ರಾಮೀಣ ಪ್ರದೇಶದ ಜನರ ಕ್ಷೇಮಾಭ್ಯುದಯಕ್ಕೆ ಅಧಿಕಾರಿಗಳು ಹೆಚ್ಚು ಬದ್ಧತೆಯಿಂದ ಕೆಲಸ ಮಾಡಿದರೆ ಸರ್ಕಾರವು ಹೆಚ್ಚು ಮುತುವರ್ಜಿವಹಿಸಲಿದೆ" ಎಂದರು.
"ಸಾಮಾನ್ಯ ವರ್ಗಾವಣೆ ಸಮಯಕ್ಕೆ ಕೌನ್ಸೆಲಿಂಗ್ ಜಾರಿಗೊಳಿಸಿ ಈ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುವೆ. ಪಿಡಿಒ ಹುದ್ದೆಯನ್ನು ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಪರಿಶೀಲಿಸಿ ಎಲ್ಲಾ ಅಧಿಕಾರಿಗಳಿಗೆ ಈ ಸೌಲಭ್ಯ ವಿಸ್ತರಿಸುವೆ" ಎಂದು ತಿಳಿಸಿದರು.
ಕರ್ನಾಟಕ ಪಂಚಾಯತ್‌ರಾಜ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಬಡ್ತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತು. ಆನ್‌ಲೈನ್ ಸೇವೆಗಳನ್ನು ಬಂದ್ ಮಾಡುತ್ತೇವೆ, ಸೆಪ್ಟೆಂಬರ್ 14ರಿಂದ ಮುಷ್ಕರ ನಡೆಸುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು.
ಬಡ್ತಿಯಲ್ಲಿ ಗೊಂದಲ; ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಬಡ್ತಿಯ ಸಮಸ್ಯೆ ಎದುರಾಗಿತ್ತು. 2010ನೇ ಸಾಲಿನಲ್ಲಿ ಕರ್ತವ್ಯಕ್ಕೆ ಹಾಜರಾದ ಪಿಡಿಒಗಳಿಗೆ ಬಡ್ತಿ ನೀಡುವಾಗ ವ್ಯತ್ಯಾಸ ಉಂಟಾಗಿತ್ತು. ಸರ್ಕಾರದ ನೇಮಕಾತಿ ಆದೇಶದ ಪ್ರಕಾರ 2010ರ ಏಪ್ರಿಲ್ 5ರಂದು ಕರ್ತವ್ಯಕ್ಕೆ ಹಾಜರಾದವರಿಗೆ ಬಡ್ತಿ ನೀಡಲಾಗಿತ್ತು. ಆದರೆ ಏಪ್ರಿಲ್ 27ರಂದು ನೇಮಕಗೊಂಡವರಿಗೆ ಅವಕಾಶ ಇರಲಿಲ್ಲ.
ಜೇಷ್ಠತಾ ಪಟ್ಟಿಯಲ್ಲಿ ಲೋಪವಿದೆ ಎಂದು ಹಿಂದಿನ ಬಿಜೆಪಿ ಸರ್ಕಾರ ಸಹ ಒಪ್ಪಿಕೊಂಡಿತ್ತು. ಇದನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ಕೋರ್ಟ್‌ಗೆ ಸಹ ಸರ್ಕಾರ ಮಾಹಿತಿ ನೀಡಿತ್ತು. ಆದರೂ ಕೆಲವು ಅಡ್ಡಿಗಳ ನೆಪ ಹೇಳಿ ಹಲವರಿಗೆ ಬಡ್ತಿಯನ್ನು ತಡೆಹಿಡಿಯಲಾಗಿತ್ತು. ಇದರಿಂದಾಗಿ ಪಿಡಿಒಗಳು ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದರು.
ಬಡ್ತಿ ವಿಚಾರ ನ್ಯಾಯಾಲಯದ ಮೆಟ್ಟಿಲು ಏರಿದ ಬಳಿಕ ಜೇಷ್ಠತೆಗೆ ಸಂಬಂಧಿಸಿದಂತೆ ಅಡ್ವೋಕೇಟ್ ಜನರಲ್ ನೇತೃತ್ವದ ಸಮಿತಿ ವರದಿಯೊಂದನ್ನು ನೀಡಿತ್ತು. ಈ ಎಲ್ಲಾ ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ ಸಂಘ ಗಡುವು ನೀಡಿತ್ತು. ಇಲ್ಲವಾದಲ್ಲಿ ಅಸಹಕಾರ ಚಳವಳಿ ಮೂಲಕ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ಕೊಟ್ಟಿತ್ತು.
ಬೇಡಿಕೆಗಳು
* ಇಲಾಖಾ ವಿಚಾರಣೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು
* ರಜಾದಿನಗಳಲ್ಲಿ ಕರ್ತವ್ಯ ನಿರ್ವಹಿಸುವಂತೆ ಸಿಇಒ ಹಾಗೂ ಇಒಗಳು ಆದೇಶ ಮಾಡುವುದನ್ನು ತಡೆಯಬೇಕು
* ಕರ್ತವ್ಯ ಅವಧಿ ಹೊರತುಪಡಿಸಿ ಸಭೆ ಮಾಡಬಾರದು
* ಯೋಜನೆಗಳಲ್ಲಿನ ಸಮಸ್ಯೆಗಳಿಗೆ ಸ್ಪಂದಿಸಬೇಕು
* ಸಾರ್ವಜನಿಕರು ನೀಡುವ ದಾಖಲೆರಹಿತ ದೂರುಗಳನ್ನು ವಿಚಾರಣೆಗೆ ಎತ್ತಿಕೊಂಡು ಹಿಂಸೆ ನೀಡುವುದು ನಿಲ್ಲಿಸಬೇಕು
* ಪಂಚತಂತ್ರ ತಂತ್ರಾಶ ಹಾಗೂ ಅಪ್ಲಿಕೇಶನ್‌ನಲ್ಲಿನ ದೋಷಗಳನ್ನು ಸರಿಪಡಿಸಬೇಕು












Click it and Unblock the Notifications