Gram Panchayat; ಸರ್ಕಾರದ ವಿರುದ್ಧ ಪಿಡಿಒಗಳ ಅಸಮಾಧಾನ
ಬೆಂಗಳೂರು, ಆಗಸ್ಟ್ 22: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮುಗಿದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಸರ್ಕಾರ ನಡೆಸುತ್ತಿದ್ದಾರೆ. ಹೊಸ ಸರ್ಕಾರ ಸರ್ಕಾರಿ ನೌಕರರ ವರ್ಗಾವಣೆಯಲ್ಲಿ ಬ್ಯುಸಿಯಾಗಿದೆ. ಆದರೆ ಪಿಡಿಒಗಳು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳು ವರ್ಗಾವಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಸರ್ಕಾರ ಬೇಡಿಕೆಯನ್ನು ಈಡೇರಿಸದೇ ಹೋದಲ್ಲಿ ಹೋರಾಟ ಅನಿವಾರ್ಯವಾಗುತ್ತದೆ ಎಂದು ಹೇಳಿದ್ದಾರೆ.

ಪಿಡಿಒ ಹುದ್ದೆಯನ್ನು ಗ್ರೂಪ್ 'ಬಿ' ದರ್ಜೆಗೆ ಉನ್ನತೀಕರಣ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಕೆ ಮಾಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತರನ್ನು ಭೇಟಿ ಮಾಡಿ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಬೇಡಿಕೆಗಳನ್ನು ಮುಂದಿಟ್ಟಿದೆ.
ಹೋರಾಟದ ಎಚ್ಚರಿಕೆ; ಪಿಡಿಒ ಎಲ್ಲಾ ಹುದ್ದೆಯನ್ನು ಗ್ರೂಪ್ 'ಬಿ' ದರ್ಜೆಗೆ ಉನ್ನತೀಕರಣ ಮಾಡಬೇಕು. ಈ ಕುರಿತು 12 ವರ್ಷದಿಂದ ಮನವಿ ಸಲ್ಲಿಸಲಾಗಿದೆ. ಆದರೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಆರೋಪ ಮಾಡಿದೆ.
1,500 ಹಿರಿಯ ಪಿಡಿಒ ಹುದ್ದೆ ಸೃಷ್ಟಿಸಿ ಯಾವುದೇ ರೀತಿಯಲ್ಲಿ ವೃಂದ ಮತ್ತು ನೇಮಕಾತಿ ನಿಯಮವನ್ನು ಮಾಡದೆ, ಸೂಕ್ತ ವರ್ಗಾವಣೆ ನಿಯಮ ರೂಪಿಸದೇ ಪಿಡಿಒ ಹುದ್ದೆಯನ್ನು ರಾಜ್ಯವೃಂದ ಎಂದು ಪರಿಗಣಿಸಿ ತರಾತುರಿಯಲ್ಲಿ ವರ್ಗಾವಣೆ ಮಾಡಲಾಗಿದೆ ಎಂದು ಸಂಘ ಹೇಳಿದೆ.
'ಸಿ' ವೃಂದದ ಹುದ್ದೆಗಳಿಗೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕೌನ್ಸಿಲಿಂಗ್ ಮಾಡದೇ ವರ್ಗಾವಣೆ ಮಾಡಲಾಗಿದೆ. ಬೇಕಾಬಿಟ್ಟಿ ವರ್ಗಾವಣೆಯಿಂದಾಗಿ 100ಕ್ಕೂ ಹೆಚ್ಚು ನೌಕರರು ಪಿಡಿಒ ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಪ್ರಸ್ತುತ 69 ಪಿಡಿಒಗಳಿಗೆ ಸ್ಥಳವನ್ನು ತೋರಿಸದೇ ವರ್ಗಾವಣೆ ಮಾಡಲಾಗಿದೆ ಎಂದು ಸಂಘ ದೂರಿದೆ.
ಪಿಡಿಒಗಳು ವರ್ಗಾವಣೆಗೆ ಅರ್ಜಿ ನೀಡದಿದ್ದರೂ ಸಹ ಹಾಸನದಿಂದ ಬೆಳಗಾವಿ, ಮಂಗಳೂರಿನಿಂದ ಕಲಬುರಗಿ, ಬಿಜಾಪುರದಿಂದ ಮೈಸೂರಿಗೆ ವರ್ಗಾವಣೆ ಮಾಡಲಾಗಿದೆ. ನ್ಯಾಯಾಲಯದ ಆದೇಶ ಎಂದು ಹೇಳಿ ನಾಲ್ಕು ವರ್ಷದಿಂದ ಒಂದೇ ಒಂದು ಬಡ್ತಿ ನೀಡಲಾಗಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳು ವರ್ಗಾವಣೆಯ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಪ್ರತಿನಿತ್ಯ ಶಾಸಕರು ಮನವಿ ನೀಡುತ್ತಿದ್ದಾರೆ" ಎಂದು ಹೇಳಿದ್ದಾರೆ.
"ಪಿಡಿಒಗಳ ವರ್ಗಾವಣೆ ಮಾಡಲು ರೂಪುರೇಷೆ ಅಗತ್ಯ ಇದ್ದು, ಅದನ್ನು ಸಿದ್ಧಪಡಿಸುವ ಅಗತ್ಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಮುಖ್ಯಮಂತ್ರಿಗಳು ಸೂಚಿಸಿದ ಬಳಿಕ ರೂಪುರೇಷೆ ತಯಾರಾಗಲಿದೆ" ಎಂದು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಕರ್ನಾಟಕ ಸರ್ಕಾರ ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳ ನೇಮಕಾತಿಯಲ್ಲಿ ಬದಲಾವಣೆಯನ್ನು ತಂದಿತ್ತು. ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಸರ್ಕಾರ ಶಾಖೆ), ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್-2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ನೇಮಕಾತಿ (ವಿಶೇಷ) ನಿಯಮಗಳು 2019 ಅನ್ನು ಹಿಂಪಡೆದಿತ್ತು.
ನೇಮಕಾತಿ ಕುರಿತು ಹೊಸ ಆದೇಶ ಹೊರಡಿಸಿದ್ದ ಸರ್ಕಾರ ಇನ್ನು ಮುಂದೆ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್-1, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ವೃಂದದ ನೇರ ನೇಮಕಾತಿ ಕೋಟಾದ ಖಾಲಿ ಹುದ್ದೆಗಳನ್ನು ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ಮೂಲಕ ಭರ್ತಿ ಮಾಡಲಾಗುತ್ತದೆ ಎಂದು ಹೇಳಿತ್ತು.












Click it and Unblock the Notifications