ಗ್ರಾಮ ಪಂಚಾಯಿತಿ ಚುನಾವಣೆಗೆ ತೆರೆ: ಇಲ್ಲಿದೆ ಸಂಪೂರ್ಣ ವಿವರ!
ಬೆಂಗಳೂರು, ಡಿ. 27: ಎರಡು ಹಂತಗಳಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಗೆ ತೆರೆ ಬಿದ್ದಿದೆ. ಲೋಕಲ್ ಫೈಟ್ ಎಂದೆ ಕರೆಯಲ್ಪಡುವ ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷಾತೀತವಾಗಿ ನಡೆದರೂ, ಮೂರು ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ. ಡಿಸೆಂಬರ್ 22 ಹಾಗೂ ಡಿಸೆಂಬರ್ 27 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಿತು. ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಅದರಂತೆಯೆ ಚುನಾವಣೆ ಶಾಂತಿಯುವಾಗಿ ನಡೆದಿದ್ದು, ಡಿಸೆಂಬರ್ 30ರಂದು ಫಲಿತಾಂಶ ಪ್ರಕಟವಾಗಲಿದೆ.
ಇದು ಪಕ್ಷಾತೀತವಾದ ಚುನಾವಣೆ ಆಗಿದ್ದರಿಂದ, ರಾಜಕೀಯ ಪಕ್ಷಗಳ ಚಿಹ್ನೆ ಇಲ್ಲದೆ ಸಾಮಾನ್ಯ ಚಿಹ್ನೆಗಳ ಮೇಲೆ ಚುನಾವಣೆ ನಡೆದಿದೆ. ಆದರೂ ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶ ಮುಂದೆ ನಡೆಯುವ ಚುನಾವಣೆಗಳ ದಿಕ್ಸೂಚಿ ಆಗಿದ್ದರಿಂದ ಮೂರು ಪಕ್ಷಗಳಿಗೆ ಈ ಚುನಾವಣೆ ಪ್ರತಿಷ್ಠೆಯ ಕಣ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರು ರಾಜಕೀಯ ಪಕ್ಷಗಳು ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
Gram Panchayat polls 2020 Voting: ಪಂಚಾಯಿತಿ ಫೈಟ್; 2ನೇ ಹಂತದ ಮತದಾನ ಮುಕ್ತಾಯ
ಈ ಪಂಚಾಯಿತಿ ಫಲಿತಾಂಶ ಮುಂದೆ ಬರಲಿರುವ ತಾ.ಪಂ., ಜಿ.ಪಂ., ಲೋಕಸಭಾ ಹಾಗೂ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಮೇಲೆ ಬಹಳಷ್ಟು ಪರಿಣಾಮ ಬೀರಲಿದೆ. ಹೀಗಾಗಿ ವಿಧಾನಸಭೆ ಚುನಾವಣೆಗೆ ಕಮ್ಮಿ ಇಲ್ಲದಂತೆ ಪಂಚಾಯಿತಿ ಚುನಾವಣೆ ರಂಗೇರಿತ್ತು. ಎರಡು ಹಂತಗಳಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯ ಸಂಪೂರ್ಣ ವಿವರ ಇಲ್ಲಿದೆ.

ಎರಡು ಹಂತಗಳಲ್ಲಿ ನಡೆದ ಚುನಾವಣೆ
ಪಕ್ಷಾತೀತವಾಗಿದ್ದರೂ ಮೂರು ರಾಜಕೀಯ ಪಕ್ಷಗಳಿಗೆ ಗ್ರಾಮ ಪಮಚಾಯಿತಿ ಚುನಾವಣೆ ಪ್ರತಿಷ್ಠೆಯ ಕಣವಾಗಿತ್ತು. ತಳಮಟ್ಟದಲ್ಲಿ ನಡೆಯುವ ಈ ಚುನಾವಣೆ, ಮುಂದಿನ ಚುನಾವಣೆಗಳಿಗೆ ದಿಕ್ಸೂಚಿ ಹಾಗೂ ಅಡಿಪಾಯ ಇದ್ದಂತೆ. ಹೀಗಾಗಿ ಮೂರು ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳ ಮಧ್ಯೆಯೆ ತೀವ್ರ ಪೈಪೋಟಿ ಇತ್ತು. ಹೀಗಾಗಿ ರಾಜ್ಯ ಚುನಾವಣಾ ಆಯೋಗ ಮುಕ್ತ-ನ್ಯಾಯ ಸಮ್ಮತ ಚುನಾವಣೆ ನಡೆಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿತ್ತು. ರಾಜ್ಯಾದ್ಯಂತ ಎರಡು ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 5,728 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆದಿದೆ.

ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು
ರಾಜ್ಯದ ಎಲ್ಲ 30 ಜಿಲ್ಲೆಗಳ 226 ತಾಲೂಕುಗಳ ವ್ಯಾಪ್ತಿಯಲ್ಲಿನ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆದಿದ್ದು, ಒಟ್ಟು 5,728 ಪಂಚಾಯಿತಿಗಳ 91,339 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿತ್ತು. ಎರಡು ಹಂತಗಳಲ್ಲಿ ನಡೆದ ಚುನಾವಣೆಗೆ ಒಟ್ಟು 3,11,887 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದರು. ಅವರಲ್ಲಿ 2,97,281 ಅಭ್ಯರ್ಥಿಗಳ ನಾಮಪತ್ರ ಕಮಬದ್ಧವಾಗಿದ್ದವು. ಕೊನೆಗೆ 74,467 ಅಭ್ಯರ್ಥಿಗಳು ನಾಮಪತ್ರ ವಾಪಾಸ್ ಪಡೆದಿದ್ದರಿಂದ 8,074 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದರು.

ಭವಿಷ್ಯ ಬರೆದ ಮತದಾರರು
ಮೊದಲ ಹಂತದಲ್ಲಿ ಒಟ್ಟು 15,384,509 ಮತದಾರರು ಹಾಗೂ ಎರಡನೇ ಹಂತದಲ್ಲಿ 7,100,113 ಮತದಾರರು ಮತದಾನ ಮಾಡಬೇಕಾಗಿತ್ತು. ಎರಡೂ ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ 22,484,622 ಮತದಾರರು ಮತದಾನ ಮಾಡಬೇಕಾಗಿತ್ತು. ಒಟ್ಟು ಶೇಕಡಾ 80ಕ್ಕಿಂತ ಹೆಚ್ಚು ಮತದಾನವಾಗಿದ್ದು, ಅವರಲ್ಲಿ ಸುಮಾರು 2 ಕೋಟಿಗೂ ಅಧಿಕ ಮತದಾರರು, ಅಭ್ಯರ್ಥಿಗಳ ಹಣೆಬರಹ ಬರೆದಿದ್ದಾರೆ.
ಅಂತಿಮವಾಗಿ 2,22,814 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದರು. ಎರಡು ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಎಲ್ಲ 2,22,814 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಬರೆದಿದ್ದಾರೆ. ಮೊದಲ ಹಂತದಲ್ಲಿ 84.3ರಷ್ಟು ಮತದಾನವಾಗಿದ್ದು, ಎರಡನೇ ಹಂತದಲ್ಲಿ ಎಷ್ಟು ಮತದಾನವಾಗಿದೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.

ಚುನಾವಣಾ ಸಿಬ್ಬಂದಿ
ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಒಟ್ಟು 23,625 ಮತಗಟ್ಟೆಗಳನ್ನು ಹಾಗೂ ಎರಡನೇ ಹಂತದಲ್ಲಿ 20,728 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಒಟ್ಟು 44,353 ಮತಗಟ್ಟೆಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಎರಡೂ ಹಂತಗಳು ಸೇರಿದಂತೆ ಒಟ್ಟು 266,118 ಮತಗಟ್ಟೆ ಸಿಬ್ಬಂದಿಯನ್ನು ರಾಜ್ಯ ಚುನಾವಣಾ ಆಯೋಗ ನೇಮಕ ಮಾಡಿತ್ತು.
ವಿವಿಧ ಕಾರಣಗಳಿಂದಾಗಿ ಒಟ್ಟು 648 ಸ್ಥಾನಗಳಿಗೆ ಯಾವುದೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿರಲಿಲ್ಲ. ಹೀಗಾಗಿ ಅಷ್ಟು ಸ್ಥಾನಗಳಿಗೆ ಚುನಾವಣೆ ನಡೆಯದೆ ಖಾಲಿ ಉಳಿದಿವೆ. ಡಿಸೆಂಬರ್ 30 ರಂದು ಮತ ಎಣಿಕೆ ನಡೆಯಲಿದ್ದು ಎಲ್ಲ 2,22,814 ಅಭ್ಯರ್ಥಿಗಳ ಭವಿಷ್ಯ ಅಂದು ಪ್ರಕಟವಾಗಲಿದೆ.
ಮನೆಮನೆ ಮಾತಾದ ಗೋಲ್ಡ್ ವಿನ್ನರ್ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆ