Anywhere Registration System: ಸೆಪ್ಟಂಬರ್‌ನಿಂದ ರಾಜ್ಯದಲ್ಲಿ ಸ್ಥಿರಾಸ್ತಿ ನೋಂದಣಿಗೆ ಹೊಸ ವ್ಯವಸ್ಥೆ ಜಾರಿ
ಧಾರವಾಡ, ಆಗಸ್ಟ್ 29: ಸ್ಥಿರಾಸ್ತಿ ನೋಂದಣಿಗೆ ಇನ್ನು ಮುಂದೆ ಒಂದೇ ಉಪ ನೋಂದಣಾಧಿಕಾರಿ ಕಚೇರಿಗೆ ನೆಚ್ಚಿಕೊಳ್ಳಬೇಕಿಲ್ಲ. ಏಕೆಂದರೆ ಸರ್ಕಾರ ಎಲ್ಲ ಜಿಲ್ಲೆಗಳಲ್ಲಿ ಮುದ್ರಾಂಕ ಇಲಾಖೆಯಿಂದ ಎನಿವೇರ್ (Any Where) ನೋಂದಣಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ವ್ಯವಸ್ಥೆಯು ಸೆಪ್ಟಂಬರ್ 02ರಿಂದ ಜಾರಿಗೆ ಬರಲಿದೆ. ಸದ್ಯ ತುಮಕೂರು, ಬೆಳಗಾವಿ, ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಈಗಾಗಲೇ ಜಾರಿಗೆ ಬಂದಿತ್ತು.
ಈ ಕುರಿತು ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾಹಿತಿ ನೀಡಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಜಾರಿಗೊಳಿಸಿರುವ ಎನಿವೇರ್ (Any Where) ನೋಂದಣಿ ವ್ಯವಸ್ಥೆಯು ಧಾರವಾಡ ಜಿಲ್ಲೆಯಲ್ಲಿ ಸೆಪ್ಟೆಂಬರ್ 02 ರಿಂದ ಜಾರಿಗೆ ಬರಲಿದೆ. ಜನರ ಸ್ಥಿರಾಸ್ತಿ ನೋಂದಣಿಗೆ ಅನುಕೂಲವಾಗುವ ಇದನ್ನು ಸದುಪಯೋಗ ಮಾಡಿಕೊಳ್ಳುವಂತೆ ಅವರು ಕೋರಿದ್ದಾರೆ.

ಮೊದಲು ತಾಲೂಕಿನ ನಿರ್ದಿಷ್ಟ ಉಪ ನೋಂದಣಾಧಿಕಾರಿಗಳ ಕಚೇರಿಗೆ ಆ ತಾಲೂಕಿನ ಪ್ರತಿ ಗ್ರಾಮದ ಜನರು ಸ್ಥರಾಸ್ಥಿ ನೋಂದಣಿಗೆ ಹೋಗಬೇಕಿತ್ತು. ಇದರಿಂದ ಮಧ್ಯವರ್ತಿಗಳ ಹಾವಳಿ, ಅಧಿಕ ಸಮಯ, ಹಣ ವ್ಯರ್ಥವಾಗುತ್ತಿತ್ತು. ಎಲ್ಲರೂ ಒಂದೇ ಕಚೇರಿಗೆ ತೆರಳಿದಾಗ ಸರ್ವರ್ ಇನ್ನಿತರ ತಾಂತ್ರಿಕ ಸಮಸ್ಯೆ ಕಾಡುತ್ತಿತ್ತು. ಆದರೆ ಮುಂದಿನ ದಿನಗಳಲ್ಲಿ ಎಲ್ಲ ಜಿಲ್ಲೆಗಳಲ್ಲಿ ಎನಿವೇರ್ ನೋಂದಣಿ ವ್ಯವಸ್ಥೆ ಜಾರಿಗೆ ತರಲಾಗುತ್ತದೆ. ಇದರಿಂದ ಈ ವ್ಯವಸ್ಥೆ ಹೊಂದಿದ ಕಚೇರಿಗಳಲ್ಲಿ ನೋಂದಣಿಯ ಆಯ್ಕೆ ಜನರಿಗೆ ಸಿಗಲಿದೆ.
ಕೆಲ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿ
2024-25 ನೇ ಸಾಲಿನ ಆಯವ್ಯಯದಲ್ಲಿ ಎನಿವೇರ್ ನೋಂದಣಿ ವ್ಯವಸ್ಥೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗುವುದೆಂದು ಸರ್ಕಾರದಿಂದ ಘೋಷಿಸಲಾಗಿತ್ತು. ಈ ವ್ಯವಸ್ಥೆಯನ್ನು ಬೆಂಗಳೂರು ನಗರ ಜಿಲ್ಲೆಯಲ್ಲಿ 2011 ರಲ್ಲಿ, ತುಮಕೂರು ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಮಾರ್ಚ್ 2024 ರಲ್ಲಿ ನೋಂದಣಿ ಕಾಯ್ದೆ 1908 ರ ಕಲಂ (5) ಹಾಗೂ ಕಲಂ (6) ರ ಅಡಿಯಲ್ಲಿ ಅನುಷ್ಠಾನಗೊಳಿಸಲಾಗಿತ್ತು. ಎನಿವೇರ್ ನೋಂದಣಿ ವ್ಯವಸ್ಥೆಯು ಪ್ರಾಯೋಗಿಕವಾಗಿ ಜಾರಿಯಾದ ಈ ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಾರ್ವಜನಿಕರಿಗೆ ಇದು ಅನಕೂಲಕರವಾಗಿದ್ದು, ಸಾರ್ವಜನಿಕರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿರುವುದರಿಂದ ಈಗ ಧಾರವಾಡ ಜಿಲ್ಲೆಯಲ್ಲಿಯೂ ಸೆ.02 ರಿಂದ ಎನಿವೇರ್ ನೋಂದಣಿ ವ್ಯವಸ್ಥೆಯನ್ನು ಜಾರಿ ಮಾಡಲು ಸರ್ಕಾರ ಆದೇಶಿಸಿದ್ದು, ಜಿಲ್ಲೆಯ ಜನರಿಗೂ ಇದು ಲಭ್ಯವಾಗಲಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿರುವ ಉಪ ನೋಂದಣಿ ಕಚೇರಿಗಳು
ಧಾರವಾಡ ಜಿಲ್ಲೆಯಲ್ಲಿ ಧಾರವಾಡ, ಹುಬ್ಬಳ್ಳಿ (ದಕ್ಷಿಣ), ಹುಬ್ಬಳ್ಳಿ (ಉತ್ತರ), ಅಣ್ಣಿಗೇರಿ, ಕುಂದಗೋಳ, ಕಲಘಟಗಿ ಮತ್ತು ನವಲಗುಂದ ಸೇರಿದಂತೆ ಒಟ್ಟು ಏಳು ಸ್ಥಳಗಳಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಉಪನೋಂದಣಿ ಕಚೇರಿಗಳನ್ನು ಹೊಂದಲಾಗಿದೆ. ಎನಿವೇರ್ ನೋಂದಣಿಯನ್ನು ಧಾರವಾಡ ಜಿಲ್ಲೆಯ ಎಲ್ಲ ಉಪ ನೋಂದಣಿ ಕಛೇರಿಗಳಿಗೂ ವಿಸ್ತರಿಸಲಾಗಿದೆ.
ಜಿಲ್ಲೆಯ ಯಾವುದೇ ಭಾಗದ ಸ್ಥಿರಾಸ್ತಿ ದಸ್ತಾವೇಜುನ್ನು ಮಾಲೀಕರು ತಮಗೆ ಅನುಕೂಲ ಮತ್ತು ಸ್ಲಾಟ್ ಲಭ್ಯವಾಗುವ ನೋಂದಣಿ ಕಚೇರಿಗಳಲ್ಲಿ ನೋಂದಣಿ ಮಾಡಿಸಬಹುದಾಗಿದೆ ಎಂದರು.
ಪ್ರಸ್ತುತದಲ್ಲಿ ಸಾರ್ವಜನಿಕರು ತಮ್ಮ ಸ್ಥಿರಾಸ್ತಿ ಇರುವ ವ್ಯಾಪ್ತಿಯ ಉಪ ನೋಂದಣಿ ಕಛೇರಿಯಲ್ಲಿ ಮಾತ್ರ ದಸ್ತಾವೇಜನ್ನು ನೋಂದಣಿ ಮಾಡಲು ಅವಕಾಶವಿದೆ. ಆದರೆ ಎನಿವೇರ್ ನೋಂದಣಿಯಲ್ಲಿ ದಸ್ತಾವೇಜನ್ನು ಸ್ಥಿರಾಸ್ತಿ ಇರುವ ಜಿಲ್ಲೆಯ ಯಾವುದಾದರೂ ಉಪ ನೋಂದಣಿ ಕಛೇರಿಯಲ್ಲಿ ನೋಂದಾಯಿಸಿಕೊಳ್ಳಬಹುದು.
ಎನಿವೇರ್ ನೋಂದಣಿ ಅನುಕೂಲತೆಗಳು
ಎನಿವೇರ್ (Any Where) ನೋಂದಣಿ ವ್ಯವಸ್ಥೆಯು ಸಾರ್ವಜನಿಕರಿಗೆ ಹಲವಾರು ರೀತಿಯಲ್ಲಿ ಉಪಯುಕ್ತವಾಗಲಿದೆ. ದಸ್ತಾವೇಜಿನ ನೋಂದಣಿಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ. ನೋಂದಣಿಯಲ್ಲಿ ಆಗುವ ವಿಳಂಬವನ್ನು ತಡೆಗಟ್ಟುತ್ತದೆ. ಸಾರ್ವಜನಿಕರಿಗೆ ತಮಗೆ ಸಮೀಪದಲ್ಲಿರುವ ಉಪ ನೋಂದಣಿ ಕಛೇರಿಯಲ್ಲಿ ದಸ್ತಾವೇಜನ್ನು ನೋಂದಾಯಿಸಿಕೊಳ್ಳಲು ಅವಕಾಶ ನೀಡುತ್ತದೆ.
ಇನ್ನೂ ನೋಂದಣಿಗೆ ಸ್ಲಾಟ್ ಲಭ್ಯವಿರುವಂತಹ ಕಛೇರಿಯನ್ನು ನೋಂದಣಿಗೆ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡುತ್ತದೆ. ಮತ್ತು ನೋಂದಣಿ ಪ್ರಕ್ರಿಯೆಯು ಸುಲಭವಾಗುವುದಲ್ಲದೆ, ಸಮಯವು ಸಹ ಉಳಿಯುತ್ತದೆ ಎಂದು ಅವರು ತಿಳಿಸಿದ್ದಾರೆ.
ಎನಿವೇರ್ ವ್ಯವಸ್ಥೆಯಿಂದ ಉಪ ನೋಂದಣಿ ಕಛೇರಿಗಳಲ್ಲಿ ಆಗುವ ಹೆಚ್ಚಿನ ಜನದಟ್ಟಣೆ ಹಾಗೂ ಕಛೇರಿ ಸಿಬ್ಬಂದಿಗಳ ಮೇಲೆ ಉಂಟಾಗುವ ಕೆಲಸದ ಒತ್ತಡ ಕಡಿಮೆಯಾಗುತ್ತದೆ. ಹಾಗೂ ಎಲ್ಲ ಕಛೇರಿಗಳಲ್ಲಿ ನೋಂದಣಿ ಕೆಲಸ ಸಮಾನವಾಗಿ ಹಂಚಿಕೆಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕರು, ಸೆಪ್ಟೆಂಬರ್ 02 ರಿಂದ ಎನಿವೇರ್ ನೋಂದಣಿಯ ಸದುಪಯೋಗಪಡಿಸಿಕೊಂಡು ತಮಗೆ ಹತ್ತಿರದ ಅಥವಾ ನೋಂದಣಿಗೆ ಸ್ಲಾಟ್ ಲಭ್ಯವಿರುವಂತಹ ಕಛೇರಿ ಆಯ್ಕೆ ಮಾಡಿಕೊಂಡು ದಸ್ತಾವೇಜನ್ನು ನೋಂದಾಯಿಸಿಕೊಳ್ಳಲು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.












Click it and Unblock the Notifications