ಸಾಕುಪ್ರಾಣಿಗಳ ಆರೈಕೆ ಮಾರುಕಟ್ಟೆ ಬೆಳವಣಿಗೆಗೆ ಆದ್ಯತೆ, 20 ಸಾವಿರ ಕೋಟಿ ವಹಿವಾಟು ಸಾಧ್ಯತೆ
ಬೆಂಗಳೂರು, ಆಗಸ್ಟ್ 22: ಸಾಕುಪ್ರಾಣಿಗಳ ಆರೈಕೆಗೆ ಸಂಬಂಧಿಸಿದ ಉತ್ಪನ್ನಗಳ ಮಾರುಕಟ್ಟೆಯು ಸದ್ಯಕ್ಕೆ ರಾಜ್ಯದಲ್ಲಿ ವಾರ್ಷಿಕ 8 ಸಾವಿರ ಕೋಟಿ ರೂಪಾಯಿಗಳಷ್ಟಿದೆ. ಇದು 2025ರ ಹೊತ್ತಿಗೆ 20 ಸಾವಿರ ಕೋಟಿ ರೂಪಾಯಿ ತಲುಪುವ ನಿರೀಕ್ಷೆ ಇದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಹೇಳಿದರು.
ಪೆಟ್ ಪ್ರಾಕ್ಟೀಷನರ್ಸ್ ಆಫ್ ಕರ್ನಾಟಕ (PPAK) ಸಂಘಟನೆಯು ಮಂಗಳವಾರ ನಗರದ ಹೊರವಲಯದಲ್ಲಿ ಏರ್ಪಡಿಸಿದ್ದ ವೆಟೋಪಿಯಾ ಸಮಾವೇಶದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಸಾಕುಪ್ರಾಣಿಗಳ ಆಹಾರ ಮತ್ತು ಔಷಧಿಗಳು ಹಾಗೂ ಆಧುನಿಕ ತಂತ್ರಜ್ಞಾನ ವಸ್ತು ಪ್ರದರ್ಶನವನ್ನು ವೀಕ್ಷಿಸಿದರು.

ಕೈಗಾರಿಕಾ ಸಚಿವನಾಗಿ ನಾನು ಈ ಉದ್ಯಮದ ಮಹತ್ವವನ್ನು ತಿಳಿದುಕೊಂಡಿದ್ದೇನೆ. ಸಾಕುಪ್ರಾಣಿಗಳಿಗೆ ಸಂಬಂಧಿಸಿದ ಆರೈಕೆಯು ಈಗ ಕೇವಲ ಚಿಕಿತ್ಸೆಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಅದು ಸಮಗ್ರ ಪೋಷಣೆಯಾಗಿ ಬೆಳೆದಿದೆ ಎಂದು ಅವರು ತಿಳಿಸಿದರು.
ಸಾಕುಪ್ರಾಣಿ ಬಗ್ಗೆ ಗಾಂಧಿ ಹೇಳಿಕೆ
ಮನುಷ್ಯ ಮತ್ತು ಪ್ರಾಣಿಗಳ ಸಂಬಂಧ ಈಗ ಹೊಸ ಅರ್ಥ ಪಡೆದುಕೊಂಡಿದೆ. ಮಹಾತ್ಮ ಗಾಂಧಿಯವರು ಸಾಕುಪ್ರಾಣಿಗಳ ಬಗ್ಗೆ ಇಡೀ ಸಮಾಜವು ಪ್ರೀತಿ ಬೆಳೆಸಿಕೊಳ್ಳಬೇಕು ಎಂದು ಹೇಳುತ್ತಿದ್ದರು. ನಮ್ಮ ಮನೆಯಲ್ಲೂ ತಮ್ಮ ಪತ್ನಿ ಮತ್ತು ಕಿರಿಯ ಪುತ್ರನಿಗೆ ಸಾಕುನಾಯಿಗಳ ಪೋಷಣೆ ಅಚ್ಚುಮೆಚ್ಚಿನ ಹವ್ಯಾಸವಾಗಿದೆ ಎಂದರು.
ಕರ್ನಾಟಕವು ಆರೋಗ್ಯ ತಂತ್ರಜ್ಞಾನದ ತಾಣವಾಗಿದೆ. ಇದರಲ್ಲಿ ನಾವೀನ್ಯತೆ ಮತ್ತು ಸುಸ್ಥಿರತೆಯ ಅಂಶಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಸಚಿವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಪಿಪಿಎಕೆ ಅಧ್ಯಕ್ಷ ಡಾ.ಎಸ್ ಯತಿರಾಜ್, ಉಪಾಧ್ಯಕ್ಷ ಡಾ.ನರೇಂದ್ರ ವೇದಿಕೆಯಲ್ಲಿ ಇದ್ದರು. ದೇಶ-ವಿದೇಶಗಳಿಂದ ಬಂದಿದ್ದ 600ಕ್ಕೂ ಹೆಚ್ಚು ಪಶುವೈದ್ಯರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಬೆಂಗಳೂರು: 40ಎಕರೆ ಜಾಗಕ್ಕೆ ಬೇಡಿಕೆ
ದೇವನಹಳ್ಳಿ ಕೈಗಾರಿಕಾ ಪ್ರದೇಶದ ಎರಡನೇ ಹಂತದಲ್ಲಿ ನಿರ್ಮಾಣವಾಗುತ್ತಿರುವ ತನ್ನ ಲಿಥಿಯಂ ಬ್ಯಾಟರಿ ಸೆಲ್ ಉತ್ಪಾದನಾ ಸಾಮರ್ಥ್ಯವನ್ನು ಎರಡು ಪಟ್ಟು ಹೆಚ್ಚಿಸುವ ಉದ್ದೇಶ ಹೊಂದಿದೆ. ಈ ಸಂಬಂಧ 40 ಎಕರೆ ಜಾಗವನ್ನು ನೀಡುವಂತೆ ಎಕ್ಸೈಡ್ ಎನರ್ಜಿ ಕಂಪನಿಯು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.
ಇತ್ತೀಚೆಗೆ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಡಾ. ಮಂದಾರ್ ವಿ.ದಿಯೋ ಅವರ ನೇತೃತ್ವದ ನಿಯೋಗ ಸಚಿವ ಎಂಬಿ ಪಾಟೀಲ ಅವರನ್ನು ಭೇಟಿ ಮಾಡಿದರು. ಕಂಪನಿಯು ಈಗಾಗಲೇ ದೇವನಹಳ್ಳಿ ಕೈಗಾರಿಕಾ ಪ್ರದೇಶದ ಎರಡನೇ ಹಂತದಲ್ಲಿ 6,000 ಗಿಗಾವಾಟ್ ಸಾಮರ್ಥ್ಯದ ಲೀಥಿಯಂ ಸೆಲ್ ಉತ್ಪಾದನಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದೆ. ಇದು
2024ರಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಲಿದೆ ಎಂದು ಸಚಿವರು ಮಾಹಿತಿ ನೀಡಿದರು.












Click it and Unblock the Notifications