MPM: ಮೈಸೂರು ಕಾಗದ ಕಾರ್ಖಾನೆ ಪುನಶ್ಚೇತನ: ಅಪ್ಡೇಟ್ ಮಾಹಿತಿ
ಬೆಂಗಳೂರು, ಫೆಬ್ರವರಿ 22: ಒಂದು ಕಾಲದಲ್ಲಿ ಕೈಗಾರಿಕಾ ವಲಯದ ಸಂಕೇತದಂತಿದ್ದ ಮೈಸೂರು ಪೇಪರ್ ಮಿಲ್ (MPM) ಕಾರ್ಖಾನೆಗೆ ಮರುಜೀವನ ನೀಡಲು ಹಿಂದಿನಿಂದಲೂ ಪ್ರಯತ್ನಗಳು ನಡೆಯುತ್ತಲೇ ಇವೆ. ಇದರ ಭಾಗವಾಗಿ ಕಾರ್ಖಾನೆ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಸರ್ಕಾರ ಮಹತ್ವದ ಅಪ್ಡೇಟ್ ನೀಡಿದೆ.
ಭದ್ರಾವತಿಯ ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದಿವಾನರಾಗಿದ್ದ ಸರ್. ಎಂ. ವಿಶ್ವೇಶ್ವರಯ್ಯನವರ ಕನಸಿನ ಕೂಸಾದ ಮೈಸೂರು ಪೇಪರ್ ಮಿಲ್ಸ್ ಸದ್ಯಕ್ಕೆ 1,482 ಕೋಟಿ ರೂ. ನಷ್ಟದ ಸುಳಿಯಲ್ಲಿದೆ.

ಈ ಮೈಸೂರು ಕಾಗದ ಕಾರ್ಖಾನೆ (ಎಂಪಿಎಂ) ಪುನಶ್ಚೇತನಕ್ಕೆ ಅತ್ಯಗತ್ಯವಾಗಿರುವ ನೀಲಗಿರಿ ಬೆಳೆಯ ಮೇಲೆ ಹೇರಿರುವ ನಿಷೇಧವನ್ನು ರದ್ದು ಮಾಡಬೇಕೋ ಅಥವಾ ಇದಕ್ಕೆ ಬೇರೆ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕೋ? ಎನ್ನುವ ಕುರಿತು ತೀರ್ಮಾನಿಸಲು ಉನ್ನತ ಮಟ್ಟದ ತಜ್ಞರ ಸಮಿತಿ ರಚಿಸಲು ಬುಧವಾರ ಸರ್ಕಾರ ತೀರ್ಮಾನ ಕೈಗೊಂಡಿದೆ ಎಂದು ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಮಾಹಿತಿ ನೀಡಿದರು.
ಎಂಪಿಎಂ ಪುನಶ್ಚೇತನಕ್ಕೆ ಸಮಿತಿ ರಚನೆಗೆ ನಿರ್ಧಾರ
ಎಂಪಿಎಂ ಪುನಶ್ಚೇತನ ಕುರಿತು ಬುಧವಾರ ವಿಧಾನಸೌಧದಲ್ಲಿ ಕೈಗಾರಿಕಾ ಸಚಿವರ ಸಭೆಯ ನಡೆಯಿತು. ಈ ವೇಳೆ ಸಂಬಂಧಿಸಿದ ಅಧಿಕಾರಿಗಳು, ಸಚಿವರು ಮತ್ತು ಶಾಸಕರು ಚರ್ಚಿಸಿ ಸಮಿತಿ ರಚನೆಯ ನಿರ್ಧಾರ ಕೈಗೊಂಡರು.
ಅರಣ್ಯ ಇಲಾಖೆ ವತಿಯಿಂದ ನಾಳೆಯೇ ತಜ್ಞರ ಸಮಿತಿ ರಚಿಸಲಾಗುವುದು. ಒಂದು ತಿಂಗಳಲ್ಲಿ ವರದಿ ನೀಡುವಂತೆ ಸಮಿತಿಗೆ ಸೂಚಿಸಲಾಗುವುದು ಎಂದು ಸಚಿವ ಈಶ್ವರ ಖಂಡ್ರೆ ಸಭೆಗೆ ತಿಳಿಸಿದರು.
ಕಚ್ಚಾ ಸಾಮಗ್ರಿ ಅತ್ಯವಶ್ಯಕ
ಭದ್ರಾವತಿ ಕಾಗದ ಕಾರ್ಖಾನೆಗೆ 20,005 ಹೆಕ್ಟೇರ್ ಅರಣ್ಯ ಭೂಮಿಯನ್ನು ನೀಲಗಿರಿ ಬೆಳೆಯಲು 2020ರಲ್ಲಿ 40 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿದೆ. ಆದರೆ ಅರಣ್ಯ ಭೂಮಿಯನ್ನು ಕೇಂದ್ರ ಸರ್ಕಾರದ ಅನುಮತಿ ಇಲ್ಲದೆ ನೀಡುವಂತಿಲ್ಲ. ಇನ್ನೊಂದೆಡೆ, ಕಚ್ಚಾ ಸಾಮಗ್ರಿ ಸಿಗದೆ ಕಾರ್ಖಾನೆ ನಡೆಯದು. ಈ ಸಂದಿಗ್ಧವನ್ನು ಈಗ ಬಗೆಹರಿಸಬೇಕಾಗಿದೆ. ಹೀಗಾಗಿ ಸಮಿತಿ ರಚಿಸುವುದು ಸೂಕ್ತ ಎಂದು ಎಂಬಿ ಪಾಟೀಲ್ ಹೇಳಿದರು.
ಈ ಕಾರ್ಖಾನೆಯ ಕಾರ್ಯಾಚರಣೆಗೆ ವಾರ್ಷಿಕವಾಗಿ 10 ಲಕ್ಷ ಟನ್ ಕಚ್ಚಾ ಸಾಮಗ್ರಿಯ ಅಗತ್ಯತೆ ಇದೆ. ಸದ್ಯಕ್ಕೆ ಕಾರ್ಖಾನೆಗೆ ಕೊಟ್ಟಿರುವ ಭೂಮಿಯಿಂದ ಕೇವಲ 2 ಲಕ್ಷ ಟನ್ ಮಾತ್ರ ಸಿಗುತ್ತದೆ. ರಾಜ್ಯದಲ್ಲಿ ನೀಲಗಿರಿ ಬೆಳೆಯುವುದನ್ನು ನಿಷೇಧಿಸಲಾಗಿದೆ. ಹೀಗಾಗಿ ಕಾರ್ಖಾನೆಯ ಪುನಶ್ಚೇತನಕ್ಕೆ ಹೊಸ ದಾರಿ ಕಂಡುಕೊಳ್ಳಬೇಕಾಗಿದೆ ಎಂದು ಅವರು ಸಭೆಗೆ ವಾಸ್ತವ ಸಂಗತಿ ವಿವರಿಸಿದರು.

ನೀಲಗಿರಿ ಬೆಳೆಯಬೇಕೆ?-ಬೇಡವೇ?
ನೀಲಗಿರಿ ಬೆಳೆಯಲು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಅವಕಾಶ ಕೊಡಬೇಕೇ?, ಬೇಡವೇ? ಎನ್ನುವ ಸಾಧ್ಯತೆಯ ಬಗ್ಗೆ ಚಿಂತಿಸಲಾಗುತ್ತಿದೆ. ಈ ಬಗ್ಗೆ ಉನ್ನತ ಸಮಿತಿ ತೀರ್ಮಾನಿಸಲಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೈಗಾರಿಕೆ ಸಚಿವರು ಬಂದ್ ಆಗಿರುವ ಈ ಕಾರ್ಖಾನೆ ತೆರೆಯಲು ಮನಸ್ಸು ಮಾಡಿದರು. ಈಗಾಗಲೇ ಈ ಕುರಿತು ಸಭೆ ಸಹ ನಡೆಸಿದ್ದಾರೆ. ಕಾರ್ಖಾನೆ ಉಳಿಸಿಕೊಂಡಿರುವ ಬಾಕಿ ಮೊತ್ತ, ವಿದ್ಯುತ್ ಬಿಲ್ ಸೇರಿದಂತೆ ಮಿಲ್‌ನ ಮುಂದಿನ ದಾರಿ ಏನು?, ಪುನಃಶ್ಚೇತನ ಕುರಿತು ಕಳೆದ ವರ್ಷ ಸೆಪ್ಟಂಬರ್ ಮೊದಲ ವಾರ ಚರ್ಚೆಯಾಗಿತ್ತು.
ಇದೀಗ ಮತ್ತೊಂದು ಸಭೆ ನಡೆಸಿ ಸಮಿತಿ ರಚನೆ ಮಾಡಲು ತೀರ್ಮಾನಿಸಲಾಗಿದೆ. ಈ ಸಭೆಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಭದ್ರಾವತಿ ಶಾಸಕ ಸಂಗಮೇಶ್ ಚರ್ಚಿಸಿದರು. ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮತ್ತು ಜಿಲ್ಲಾಧಿಕಾರಿಗಳು, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಕೆ.ದೀಕ್ಷಿತ್, ಎಂಎಸ್ಐಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications