Govt Job: ಚಾಮರಾಜನಗರ ಆಕ್ಸಿಜನ್ ದುರಂತ: ಮೃತರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ, ನೇಮಕಾತಿ ಪತ್ರ ವಿತರಣೆ
ಚಾಮರಾಜನಗರ: ಕೋವಿಡ್ 19 ಸಂದರ್ಭದಲ್ಲಿ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ನೀಡಿದ್ದ ಮಹತ್ವದ ಭರವಸೆಯೊಂದನ್ನು ಸರ್ಕಾರ ಇಂದು ಈಡೇರಿಸಿದೆ. ಗುಂಡ್ಲುಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ದುರಂತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಿದರು.
ಕೋವಿಡ್-19 ಎರಡನೇ ಅಲೆಯ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಸಂಭವಿಸಿದ ದುರಂತ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಅಂದು ವಿರೋಧ ಪಕ್ಷದಲ್ಲಿದ್ದಾಗ ಸಂತ್ರಸ್ತ ಕುಟುಂಬಗಳಿಗೆ ಭೇಟಿ ನೀಡಿದ್ದ ಕಾಂಗ್ರೆಸ್ ನಾಯಕರು, ತಮಗೆ ಅಧಿಕಾರ ಬಂದರೆ ಮೃತರ ಕುಟುಂಬದವರಿಗೆ ನ್ಯಾಯ ಒದಗಿಸುವುದಾಗಿ ಮಾತು ಕೊಟ್ಟಿದ್ದರು. ಆ ಮಾತಿನಂತೆ ಈಗ ಸಚಿವ ಸಂಪುಟದಲ್ಲಿ ವಿಶೇಷ ತೀರ್ಮಾನ ಕೈಗೊಂಡು, ಅರ್ಹ 25 ಮಂದಿ ಸಂತ್ರಸ್ತ ಮಹಿಳೆಯರಿಗೆ ಚಾಮರಾಜನಗರದ ಆಸ್ಪತ್ರೆಯಲ್ಲೇ ಉದ್ಯೋಗ ನೀಡುವ ಮೂಲಕ ಸರ್ಕಾರ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ.

ಕಹಿ ಘಟನೆ ನೆನೆದ ಡಿಕೆಶಿ
ಆಕ್ಸಿಜನ್ ದುರಂತದ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ ಡಿ.ಕೆ.ಶಿವಕುಮಾರ್, "ಅಂದು ಬಿಜೆಪಿ ಸರ್ಕಾರದ ಅವಧಿಯಲ್ಲಿ 33 ಮಂದಿ ಸಾವನ್ನಪ್ಪಿದ್ದರೂ, ಮಂತ್ರಿಗಳು ಕೇವಲ ಮೂವರು ಮಾತ್ರ ಮೃತಪಟ್ಟಿದ್ದಾರೆ ಎಂದು ಸುಳ್ಳು ಹೇಳಿದ್ದರು. ನಾನು ಹಾಗೂ ಸಿದ್ದರಾಮಯ್ಯನವರು ಚಾಮರಾಜನಗರಕ್ಕೆ ಬಂದು ಬಿಜೆಪಿ ಸರ್ಕಾರದಲ್ಲಿ ನಡೆದ 33 ಮಂದಿಯ ದುರ್ಮರಣವನ್ನು ನಾವು ಪರಿಶೀಲನೆ ಮಾಡಿದ್ದೆವು. ಮೃತಪಟ್ಟವರ ಕುಟುಂಬದ ಪ್ರತಿ ಮನೆಗೂ ನಾನು ಹಾಗೂ ಸಿದ್ದರಾಮಯ್ಯ, ಧ್ರುವನಾರಾಯಣ, ಕೃಷ್ಣಮೂರ್ತಿ, ಪುಟ್ಟರಂಗಶೆಟ್ಟಿ ಅವರು ಭೇಟಿ ನೀಡಿ ಕುಟುಂಬದವರ ನೋವು ಆಲಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿ, ತನಿಖೆ ನಡೆಸಿ ನಿಮಗೆ ನ್ಯಾಯ ಕೊಡಿಸುತ್ತೇವೆ ಎಂದು ಮಾತು ಕೊಟ್ಟಿದ್ದೆವು ಎಂದರು.
ಚಾಮರಾಜನಗರದ ದುರ್ಘಟನೆಗೆ ನ್ಯಾಯವನ್ನು ಒದಗಿಸಲು ಸಚಿವ ಸಂಪುಟದಲ್ಲಿ ವಿಶೇಷವಾದ ತೀರ್ಮಾನವನ್ನು ತೆಗೆದುಕೊಂಡಿದ್ದೇವೆ. 25 ಸಹೋದರಿಯರ ಕುಟುಂಬಗಳಿಗೆ ಇದೇ ಚಾಮರಾಜನಗರ ಆಸ್ಪತ್ರೆಯಲ್ಲಿ ಅವರಿಗೆ ಸರ್ಕಾರಿ ಉದ್ಯೋಗವನ್ನು ನೀಡುವ ಕೆಲಸವನ್ನು ನಾವು ಮಾಡಿದ್ದೇವೆ. ಈ ಆಕ್ಸಿಜನ್ ದುರಂತ ಹಾಗೂ ಕೋವಿಡ್‌ನಿಂದಾಗಿ ಮೃತಪಟ್ಟಿರುವ ಎಲ್ಲರಿಗೂ ನ್ಯಾಯ ಒದಗಿಸಲು ಆಗದೇ ಇರಬಹುದು. ಆದರೆ ನಾನು, ಧ್ರುವನಾರಾಯಣ ನಮ್ಮೆಲ್ಲರ ಶಾಸಕರು ಬೆಳಗಿನ ಜಾವ 6 ಗಂಟೆವರೆಗೆ ಮನೆ ಮನೆಗೂ ಭೇಟಿ ಕೊಟ್ಟು, ಮೃತರ ಕುಟುಂಬಸ್ಥರಿಗೆ ಧೈರ್ಯ ತುಂಬಿ, ನಮ್ಮ ಪಕ್ಷದಿಂದ ಪರಿಹಾರವನ್ನು ಕೊಟ್ಟು ಮೃತರ ಕುಟುಂಬದವರಿಗೆ ಆತ್ಮಸ್ಥೈರ್ಯವನ್ನು ಮೂಡಿಸಿದ್ದೆವು ಎಂದು ನೆನೆದರು.

ಜೀವನದಲ್ಲಿ ನೆಮ್ಮದಿ, ನಂಬಿಕೆ ಮತ್ತು ಆತ್ಮವಿಶ್ವಾಸದ ಮಹತ್ವವನ್ನು ಸಾರಿದ ಡಿಸಿಎಂ, ಮೃತರ ಕುಟುಂಬದವರ ಮುಖದಲ್ಲಿ ಅರಳಿದ ನಗುವೇ ನಮ್ಮ ಸೇವೆಗೆ ಸಂದ ಪ್ರತಿಫಲ ಎಂದಿದ್ದಾರೆ. ಅಂದು ಬೆಳಗಿನ ಜಾವದವರೆಗೆ ಪ್ರತಿ ಮನೆಗೂ ಭೇಟಿ ನೀಡಿ ಧೈರ್ಯ ತುಂಬಿದ್ದನ್ನು ಸ್ಮರಿಸಿದ ಅವರು, ದಿವಂಗತ ಆರ್. ಧ್ರುವನಾರಾಯಣ್ ಅವರ ಶ್ರಮವನ್ನೂ ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಈ ನೇಮಕಾತಿಯು ದುರಂತದಲ್ಲಿ ನೊಂದ ಕುಟುಂಬಗಳಿಗೆ ಆರ್ಥಿಕ ಭದ್ರತೆ ನೀಡುವುದಲ್ಲದೆ, ಸರ್ಕಾರದ ಮೇಲಿನ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ.












Click it and Unblock the Notifications