ಸರ್ಕಾರ ಏಳು ಗಂಟೆ ವಿದ್ಯುತ್ ಪೂರೈಸದಿದ್ದರೆ ಕಚೇರಿಗಳಿಗೆ ಬೀಗ ಹಾಕಿ ಪ್ರತಿಭಟನೆ
ಚಿಕ್ಕಬಳ್ಳಾಪುರ, ಅಕ್ಟೋಬರ್ 11: ಸರ್ಕಾರ ರೈತರಿಗೆ ಏಳು ಗಂಟೆ ಥ್ರಿಫೆಸ್ ವಿದ್ಯುತ್ ನೀಡದಿದ್ದರೆ, ವಿದ್ಯುತ್ ಕಚೇರಿಗಳಿಗೆ ಬೀಗ ಹಾಕಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಬುಧವಾರ ಚಿಕ್ಕಬಳ್ಳಾಪುರದಲ್ಲಿ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಮಾಜಿ ಸಚಿವ ಡಾ. ಸುಧಾಕರ್ ನೇತೃತ್ವದಲ್ಲಿ ಬಿಜೆಪಿ ವತಿಯಿಂದ ನಡೆದ 'ರೈತರ ಬೃಹತ್ ಪ್ರತಿಭಟನಾ' ಮೆರವಣಿಗೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಿದ್ಯುತ್ ಪಡೆಯುವುದು ನಮ್ಮ ಹಕ್ಕು, ಅಕ್ಕಿ ಪಡೆಯುವುದು ನಮ್ಮ ಹಕ್ಕು. ಕಾಂಗ್ರೆಸ್ ಸರ್ಕಾರ ನಮ್ಮ ಹಕ್ಕುಗಳನ್ನು ಕಿತ್ತು ಕೊಳ್ಳುತ್ತಿದೆ. ವಿದ್ಯುತ್ ಪೂರೈಕೆ ಮಾಡುವುದು ರಾಜ್ಯ ಸರ್ಕಾರದ ಕರ್ತವ್ಯ. ಅದು ಅವರದೇನು ಉಪಕಾರ ಅಲ್ಲ. ಈಗ ಇಂಧನ ಇಲಾಖೆ ಯಾವ ರೀತಿ ಕೆಲಸ ಮಾಡುತ್ತಿದೆ ಎಂದು ಅಧಿಕಾರಿಗಳನ್ನು ಕೇಳಿ ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು.
3 ತಿಂಗಳಲ್ಲಿ 2 ಬಾರಿ ವಿದ್ಯುತ್ ದರ ಏರಿಕೆ
ನಾವು ಅಧಿಕಾರದಲ್ಲಿದ್ದಾಗ ವಿದ್ಯುತ್ ಇಲಾಖೆಗೆ ಹತ್ತು ಸಾವಿರ ಕೊಟಿ ರೂಪಾಯಿ ಹಂಚಿಕೆ ಮಾಡಲಾಗಿತ್ತು. ಸದ್ಯ ಕಾಂಗ್ರೆಸ್ ಯಾವುದೇ ಅನುದಾನ ಹಂಚಿಕೆ ಮಾಡಿಲ್ಲ. ಅನುದಾನ ನೀಡಲು ಸರ್ಕಾರದ ಬಳಿ ಹಣವೇ ಇಲ್ಲ. ಕಲ್ಲಿದ್ದಲು ಖರೀದಿಸಲು ಹಣ ಇಲ್ಲ. ಇತ್ತ ರಾಜ್ಯದ ರೈತರಿಗೆ ಕೇವಲ ಎರಡು ಗಂಟೆಗಳ ಕಾಲ ವಿದ್ಯುತ್ ನೀಡುತ್ತಿದ್ದರು. ಮೂರು ತಿಂಗಳಲ್ಲಿ ಎರಡು ಬಾರಿ ವಿದ್ಯುತ್ ಬಿಲ್ ಹೆಚ್ಚಿಸಲಾಗಿದೆ. ಇದು ರೈತ ವಿರೊಧಿ ಸರ್ಕಾರ ಎಂದು ಅವರು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿಗಳು ಹತ್ತು ಕೇಜಿ ಅಕ್ಕಿ ಕೊಡುವುದಾಗಿ ತಿಳಿಸಿದ್ದರು. ಈಗ ರಾಜ್ಯ ಸರ್ಕಾರ ಮೂರು ಕೇಜಿ ಕೊಡುತ್ತಿದೆ. ಜನರಿಗೆ ಕಾಂಗ್ರೆಸ್‌ನವರು ಸುಳ್ಳು ಹೇಳುವ ಮೂಲಕ ಮೋಸ ಮಾಡಿದ್ದಾರೆ. ಡಿಸೆಂಬರ್ ವರೆಗೆ 10 ಕೆಜಿ ಅಕ್ಕಿ ಕೊಟ್ಟಿಟ್ಟ ನಮಗೆ ಆಶೀರ್ವಾದ ಮಾಡಲಿಲ್ಲ. ಮೂರು ಕೆಜಿ ಕೊಡುವ ಇವರನ್ನು ಏನು ಮಾಡಬೇಕು.ಗೃಹ ಲಕ್ಷ್ಮೀ ಯೋಜನೆಯಡಿ 2000 ರೂ.ಕೊಡುವುದಾಗಿ ಹೇಳಿದ್ದರು. ಆದರೆ ಎಷ್ಟೋ ಮಂದಿಗೆ ಆ ಹಣ ಬಂದಿಲ್ಲ ಎಂದರು.

7 ಗಂಟೆ ವಿದ್ಯುತ್ ನೀಡದಿದ್ದರೆ ಕಚೇರಿಗೆ ಬೀಗ
ಸರ್ಕಾರ ರೈತರಿಗೆ ನಿರಂತರವಾಗಿ ಏಳು ತಾಸು ಕರೆಂಟ್ ಕೊಡದಿದ್ದರೆ, ವಿದ್ಯುತ್ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡುತ್ತೇವೆ. ನೀವು ಎಷ್ಟು ಜನರ ಮೇಲೆ ಕೇಸ್ ಹಾಕುತ್ತೀರಿ, ಎಷ್ಟು ಜನರನ್ನು ಜೈಲಿಗೆ ಹಾಕುತ್ತಿರಿ ನೀವೇ ಬಿಟ್ಟು ಕಳುಹಿಸಬೇಕು ಅಷ್ಟು ಜನ ಜೈಲಿಗೆ ಹೋಗುತ್ತೇವೆ ಎಂದು ಬೊಮ್ಮಾಯಿ ಗುಡುಗಿದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 1.50 ಲಕ್ಷ ಪಂಪ್ ಸೆಟ್ ಗಳಿದ್ದು, ಅವುಗಳಿಗೆ ಅಗತ್ಯ ವಿದ್ಯುತ್ ಇಲ್ಲದಿರುವುದರಿಂದ ಎಲ್ಲ ಬೆಳೆ ಒಣಗುತ್ತಿದೆ. ಡಾ. ಸುಧಾಕರ್ ಅವರು ಹೊರಾಟ ಮಾಡಿ ಚಿಕ್ಕಬಳ್ಳಾಪುರಕ್ಕೆ ಹಾಲು ಉತ್ಪಾದಕರ ಒಕ್ಕೂಟ ತಂದಿದ್ದಾರೆ. ಅದನ್ನು ರಾಜಕೀಯ ಕಾರಣಕ್ಕೆ ಸ್ಥಗಿತಗೊಳಿಸಲಾಗಿದೆ. ಮೆಡಿಕಲ್ ಕಾಲೇಜ್ ತಂದಿದ್ದಾರೆ. ಅಂತಾರಾಷ್ಟ್ರೀಯ ಹೂವಿನ ಮಾರುಕಟ್ಟೆ ತಂದಿದ್ದಾರೆ ಎಂದು ತಮ್ಮ ಸರ್ಕಾರ ಮತ್ತು ಬಿಜೆಪಿ ನಾಯಕರನ್ನು ಕಾರ್ಯ ಶ್ಲಾಘಿಸಿದರು.
ಡಾ.ಕೆ.ಸಧಾಕರ್ ಅವರು ಚುನಾವಣೆಯಲ್ಲಿ ಮೋಸಕ್ಕೆ ಬಲಿಯಾಗಿದ್ದಾರೆ. ಸೋಲಾಗಲಿ ಗೆಲುವಾಗಲಿ ಎರಡು ಶಾಸ್ವತ ಅಲ್ಲ. ಚಿಕ್ಕಬಳ್ಳಾಪುರಕ್ಕೆ ಶಾಸಕರು ಇದ್ದರೂ ಅನಾಥವಾಗಿದೆ. ಈಗಲೇ ಚುನಾವಣೆ ನಡೆದರೆ ಸುಧಾಕರ್ ಅವರು ಒಂದು ಲಕ್ಷ ಅಂತರದಿಂದ ಗೆಲುವು ಸಾಧಿಸುತ್ತಾರೆ. ಈ ಜನ ವಿರೋಧಿ ಸರ್ಕಾರ ಕಿತ್ತೊಗೆಯಲು ನಿರಂತರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಪ್ರತಿಭಟನೆ ವೇಳೆ ಜಿ.ಸಚಿವರಾದ ಆರ್. ಅಶೋಕ್, ಡಾ. ಸುಧಾಕರ್, ಸಂಸದ ಮುನಿಸ್ವಾಮಿ ಮತ್ತು ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.












Click it and Unblock the Notifications