ಗೂಗಲ್ ಪೇ ಮೂಲಕ ಲಂಚ ಸ್ವೀಕರಿಸಿ ಜೈಲು ಸೇರಿದ ಸರ್ಕಾರಿ ಸರ್ಜನ್
ಬೆಂಗಳೂರು, ಡಿ. 10: ರೈತರಿಗೆ ಈಗಲೂ ಸರ್ಕಾರಿ ಸೇವೆ ಲಂಚ ಕೊಡದೇ ಸಿಗಲ್ಲ. ಅಧಿಕಾರಿಗಳ ಕೈ ಬಿಸಿ ಮಾಡದೇ ಕೆಲಸ ಆಗಲ್ಲ. ರಾಷ್ಟ್ರೀಯ ಹೆದ್ದಾರಿಗೆ ಸ್ವಾಧೀನ ಪಡಿಸಿಕೊಂಡಿದ್ದ ಜಮೀನಿಗೆ ಪರಿಹಾರ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟು ವಿಶೇಷ ಭೂ ಸ್ವಾಧೀನ ಅಧಿಕಾರಿಗಳ ಕಚೇರಿಯ ಪ್ರಥಮ ದರ್ಜೆ ಸಹಾಯಕ ಬೆಂಗಳೂರಿನಲ್ಲಿ ಜೈಲು ಪಾಲಾಗಿದ್ದಾನೆ. ಮಂಡ್ಯದಲ್ಲಿ ರೈತರೊಬ್ಬರ ಭೂಮಿಗೆ ಇ ಸ್ವತ್ತು ಮಾಡಿಕೊಡಲು ಮೂರು ಸಾವಿರ ಲಂಚ ಸ್ವೀಕರಿಸಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಜೈಲು ಸೇರಿದ್ದಾನೆ. ಇನ್ನು ಅಪೆಂಡಿಕ್ಸ್ ಗೆ ಚಿಕಿತ್ಸೆ ಪಡೆದ ರೋಗಿಯ ಹೊಲಿಗೆ ಬಿಚ್ಚಲು ಲಂಚ ಸ್ವೀಕರಿಸಿ ಕೊಡಗಿನಲ್ಲಿ ಸರ್ಜನ್ ಜೈಲು ಪಾಲಾಗಿದ್ದಾನೆ.
ಶುಕ್ರವಾರ ಭ್ರಷ್ಟಾಚಾರ ನಿಗ್ರಹ ದಳ ನಡೆಸಿದ ಲಂಚ ಸ್ವೀಕಾರ ವಿರುದ್ಧ ಕಾರ್ಯಾಚರಣೆಯ ಕಥೆಯಿದು. ಎರಡು ಪ್ರಕರಣದಲ್ಲಿ ರೈತರ ಬಳಿ ವಸೂಲಿ ಮಾಡಲು ಹೋಗಿ ಜೈಲು ಪಾಲಾಗಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಸರ್ಕಾರಿ ಆಸ್ಪತ್ರೆಯ ಸರ್ಜನ್ ಲಂಚ ಸ್ವೀಕರಿಸಿ ಸಿಕ್ಕಿಬಿದ್ದಿದ್ದಾನೆ. ರೈತರ ರಕ್ತ ಹೀರದೇ ಕೆಲಸ ಮಾಡಿಕೊಡಲ್ಲ ಎಂಬುದು ಭ್ರಷ್ಟಾಚಾರ ಪ್ರಕರಣಗಳಲ್ಲಿ ಪದೇ ಪದೇ ಸಾಬೀತಾಗುತ್ತಿವೆ.
ರೈತನಿಗೆ ಪರಿಹಾರ ನೀಡಲು ಲಂಚ:
ಚೆನ್ನೈ ಮತ್ತು ಬೆಂಗಳೂರು ನಡುವಿನ ರಾಷ್ಟ್ರಿಯ ಹೆದ್ದಾರಿ ನಿರ್ಮಾಣಕ್ಕೆ ಸ್ವಾಧೀನ ಪಡಿಸಿಕೊಂಡಿದ್ದ ಭೂಮಿಗೆ ಪರಿಹಾರ ನೀಡುವಂತೆ ಕ್ಯಾಸಂಬಳ್ಳಿ ನಿವಾಸಿ ವಿಶೇಷ ಭೂ ಸ್ವಾಧೀನ ಅಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಸದರಿ ಜಮೀನಿನಲ್ಲಿದ್ದ ಕೊಳವೆಬಾವಿ, ಮರಗಳಿಗೆ ಪರಿಹಾರ ಮೊತ್ತ ಮಂಜೂರು ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂ ಸ್ವಾಧೀನ ಅಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಹೆಬ್ಬಾಳದಲ್ಲಿರುವ ಕಚೇರಿಗೆ ಅರ್ಜಿ ಸಲ್ಲಿಸಿದ ಅಲೆದರೂ ಕಡತ ವಿಲೇವಾರಿಯಾಗಿರಲಿಲ್ಲ. ಪರಿಹಾರ ಮೊತ್ತ ಮಂಜೂರು ಮಾಡಲು 25 ಸಾವಿರ ರೂ. ಲಂಚ ನೀಡುವಂತೆ ಪ್ರಥಮ ದರ್ಜೆ ಸಹಾಯಕ ರಮೇಶ್ ಎಂಬಾತ ಬೇಡಿಕೆ ಇಟ್ಟಿದ್ದ. ಈ ಕುರಿತು ಕ್ಯಾಸಂಬಳ್ಳಿ ನಿವಾಸಿ ಎಸಿಬಿ ಬೆಂಗಳೂರು ನಗರಕ್ಕೆ ದೂರು ನೀಡಿದ್ದರು.

ಶುಕ್ರವಾರ ಲಂಚ ಸ್ವೀಕರಿಸುವಾಗ ವಿಶೇಷ ಭೂ ಸ್ವಾಧೀನ ಪ್ರಾಧಿಕಾರ ಕಚೇರಿಯ ಪ್ರಥಮ ದರ್ಜೆ ಸಹಾಯಕ ರಮೇಶ್ ನನ್ನು ಬಂಧಿಸಿದ್ದಾರೆ. ಬಂಧಿತನ ಬಳಿ ಲಂಚದ ಹಣ ವಶಪಡಿಸಿಕೊಂಡಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ರೈತನೊಬ್ಬ ರಾಷ್ಟ್ರೀಯ ಹೆದ್ದಾರಿಗೆ ಭೂಮಿ ಕಳೆದುಕೊಂಡಿದ್ದಾನೆ. ಆ ಜಮೀನಲ್ಲಿರುವ ಕೊಳವೆ ಬಾವಿ, ಮರಗಳಿಗೆ ಪರಿಹಾರ ಪಡೆಯಲು ಅರ್ಹ. ಆದರೆ ರೈತನಿಂದಲೂ ಎತ್ತುವಳಿ ಮಾಡೋಕೆ ಹೋಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ.
ಮಂಡ್ಯದಲ್ಲಿ ರೈತನಿಗೆ ಇ ಸ್ವತ್ತು ನೀಡಲು ಹೋಗಿ ಜೈಲು:
ಇನ್ನು ಮಂಡ್ಯ ಜಿಲ್ಲೆಯ ನಾಗಲಮಂಗಲ ತಾಲೂಕಿನ ಬೆಳ್ಳೂರು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಯದ್ದು ಅದೇ ಕಥೆ. ಬೆಳ್ಳೂರು ಪಟ್ಟಣ ಪಂಚಾಯಿತಿ ಬೊಮ್ಮೇನಹಳ್ಳಿ ಕ್ರಾಸ್ ನಿವಾಸಿ ತನ್ನ ಜಮೀನನ್ನು ವಸತಿ ಉದ್ದೇಶಕ್ಕಾಗಿ ಇ- ಸ್ವತ್ತು ನೀಡುವಂತೆ ಬೆಳ್ಳೂರು ಟೌನ್ ಪಟ್ಟಣ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು. ರೈತನ ಜಮೀನಿಗೆ ಇ ಸ್ವತ್ತು ನೀಡಲು 20 ಸಾವಿರ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ ಮೂರು ಸಾವಿರ ರೂ. ಲಂಚ ಹಣವನ್ನು ಬಿಲ್ ಕಲೆಕ್ಟರ್ ಮೂಲಕ ಸ್ವೀಕರಿಸಿದ್ದು, ಮಂಡ್ಯ ಎಸಿಬಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಿಲ್ ಕಲೆಕ್ಟರ್ ದೇವರಾಜ್ ಮತ್ತು ಮುಖ್ಯಾಧಿಕಾರಿ ಆರ್. ವಿ. ಮಂಜುನಾಥ್ ಅವರಿಂದ ಲಂಚ ಹಣವನ್ನು ವಶಪಡಿಸಿಕೊಂಡಿದ್ದಾರೆ. ಮಂಡ್ಯ ಎಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಲಂಚವನ್ನು ಗೂಗಲ್ ಪೇ ಮಾಡಿಸಿಕೊಂಡು ಸಿಕ್ಕಿಬಿದ್ದ ವೈದ್ಯ:
ಕೊಡಗಿನ ವಿರಾಜಪೇಟೆಯ ಸರ್ಕಾರಿ ನೌಕರರೊಬ್ಬರ ಪತಿಗೆ ಅಪೆಂಡಿಕ್ಸ್ ಆಗಿತ್ತು. ವಿರಾಜಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಶಸ್ತ್ರ ಚಿಕಿತ್ಸೆ ಮಾಡಲು ಸರ್ಕಾರಿ ಸರ್ಜನ್ ಡಾ. ವಿಶ್ವನಾಥ್ ಸಿಂಪ್ಲಿ ಐದು ಸಾವಿರ ರೂ. ಲಂಚ ಸ್ವೀಕರಿಸಿದ್ದ. ಆ ಬಳಿಕ ಡಿಶ್ಚಾರ್ಜ್ ಮಾಡಲು ಮೂರು ಸಾವಿರ ರೂ.ಗೆ ಬೇಡಿಕೆ ಇಟ್ಟು, ಗೂಗಲ್ ಪೇ ಮೂಲಕ ತನ್ನ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿಕೊಂಡಿದ್ದ. ಆ ಬಳಿಕ ಅಪೆಂಡಿಕ್ಸ್ ಶಸ್ತ್ರ ಚಿಕಿತ್ಸೆ ಹೊಲಿಗೆ ಬಿಚ್ಚಲು ಎರಡು ಸಾವಿರ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಎರಡು ಸಾವಿರ ರೂ. ಲಂಚ ಸ್ವೀಕರಿಸುವಾಗ ಕೊಡಗು ಎಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಸರ್ಜನ್ ವಿಶ್ವನಾ್ ಸಿಂಪ್ಲಿ ಅವರನ್ನು ಬಂಧಿಸಿ ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮೂರು ಲಂಚ ಪ್ರಕರಣಗಳ ವಿವರವಿದು.












Click it and Unblock the Notifications