ದೋಸ್ತಿಗಳ ಪಾದಯಾತ್ರೆಗೆ ಅನುಮತಿ ಕೊಡಲ್ಲ: ಮಹತ್ವ ವಿಚಾರಗಳಿಗೆ ಜಿ.ಪರಮೇಶ್ವರ್ ರಿಯಾಕ್ಷನ್
ಬೆಂಗಳೂರು, ಜುಲೈ 29: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ನಿವೇಶನ ಹಂಚಿಕೆ ಹಗರಣವು ಸಿಎಂ ಸಿದ್ದರಾಮಯ್ಯ ಅವರ ಸುತ್ತ ಸುತ್ತುತ್ತಿದೆ. ಇದರ ವಿರುದ್ಧ ಮೈತ್ರಿ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ದೋಸ್ತಿ ಪಕ್ಷಗಳು ಮೈಸೂರುವರೆಗೆ ಪಾದಾಯಾತ್ರೆ ನಡೆಸುವುದಾಗಿ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಜಿ.ಪರಮೇಶ್ವರ್ ಅವರು, ಪಾದಯಾತ್ರೆಗೆ ಅನುಮತಿ ಕೊಡಲ್ಲ ಎಂದು ಹೇಳಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಸೋಮವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಜಿ.ಪರಮೇಶ್ವರ್ ಅವರು,ದೋಸ್ತಿಗಳ ಪಾದಯಾತ್ರೆಗೆ ರಾಜ್ಯ ಸರ್ಕಾರ ಅನುಮತಿ ಕೊಡುವುದಿಲ್ಲ. ಅವರು ಪಾದಯಾತ್ರೆ ಮಾಡಿದರೆ ಮಾಡಲಿ. ಅನುಮತಿ ಕೊಟ್ಟಿದ್ದೆ ಆದಲ್ಲಿ ಕಾನೂನು ಸಮಸ್ಯೆಗಳು ಎದುರಾಗುತ್ತವೆ ಎಂದು ಅವರು ತಿಳಿಸಿದ್ದಾರೆ.

ಜೆಡಿಎಸ್ ಮತ್ತು ಬಿಜೆಪಿ ಪಾದಯಾತ್ರೆಗೆ ಅಧಿಕೃತವಾಗಿ ನಮ್ಮ ಪೊಲೀಸ್ ಇಲಾಖೆ ಅನುಮತಿ ಕೊಡುವುದಿಲ್ಲ. ನಮ್ಮಿಂದ ಅಧಿಕೃತ ಇಲ್ಲ. ಒಂದು ವೇಳೆ ಯಾರಿಗೂ ತೊಂದರೆ ಆಗದಂತೆ ಪಾದಯಾತ್ರೆ ಮಾಡುವುದಾದರೆ ಮಾಡಲಿ. ಬಿಜೆಪಿಯವರು ಕಾಂಗ್ರೆಸ್ ಪಾದಯಾತ್ರೆಗೂ ಅನುಮತಿ ನೀಡಿರಲಿಲ್ಲ. ಆದರೂ ನಾವು ಮಾಡಿದಂತೆ ಅವರು ಪಾದಯಾತ್ರೆ ಮಾಡಿಕೊಳ್ಳಲಿ ಎಂದರು.
ನಿರ್ಮಲಾ ಸೀತಾರಾಮನ್ ಬಜೆಟ್ ಮೇಲಿನ ಹೇಳಿಕೆಗೆ ಪ್ರತಿಕ್ರಿಯೆ
ಕೇಂದ್ರ ಬಜೆಟ್ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ ಎಂದು ಬೆಂಗಳೂರಿನಲ್ಲಿ ಭಾನುವಾರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಸ್ಪಷ್ಟನೆ ವಿಚಾರಕ್ಕೆ ಗೃಹ ಸಚಿವರು ಪ್ರತಿಕ್ರಿಯಿಸಿದರು.
ಅಂದಿನ ಬಜೆಟ್ ಎಷ್ಟಿತ್ತು. ಈಗ ಎಷ್ಟಾಗಿದೆ ಎನ್ನುವುದನ್ನು ನೋಡಬೇಕು. ಚಂದ್ರಬಾಬು ನಾಯ್ಡುಗೆ 15 ಸಾವಿರ ಕೋಟಿ ಕೊಟ್ಟಿದ್ದಾರೆ. ಅನುದಾನ ನೀಡಲು ಬೇಡ ಎಂದು ಹೇಳುವುದಿಲ್ಲ. ಬದಲಾಗಿ ಸರಿ ಸಮಾನವಾಗಿ ಹಂಚಿಕೆ ಮಾಡಬೇಕು.

ನಮ್ಮ ಪಾಲನ್ನು ನಮಗೆ ಕೊಡಿ ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೇವೆ. ಆದರೆ ಬಿಜೆಪಿಯವರು ಸೂಕ್ತ ಅನುದಾನ ಕೊಟ್ಟಿದ್ದಾಗಿ ಹೇಳಿದ್ದಾರೆ.
ಕೇಂದ್ರದಿಂದ ಮಲತಾಯಿ ಧೋರಣೆ ಆರೋಪ
ಭದ್ರಾ ಯೋಜನೆಗೆ ಹಣಕೊಡಬೇಕಿತ್ತು ಕೊಡದೇ, ಕೇಂದ್ರವು ಮಲತಾಯಿ ಧೋರಣೆ ಅನುಸರಿಸಿದೆ. ಇಲ್ಲಿಗೆ ಬಂದು ರಾಜ್ಯಕ್ಕೆ ಅಲ್ಲಾ ಸೌಕರ್ಯ, ಅನುದಾನ ಕೊಟ್ಟಿದ್ದೇವೆ, ಅನ್ಯಾಯವಾಗಿಲ್ಲ ಎಂದು ಹೇಳಿದ್ದಾರೆ ಎಂದು ಅವರು ವಿವರಿಸಿದರು.
ನೀತಿ ಆಯೋಗಕ್ಕೆ ಮಮತಾ ಹೋಗಿ ವಾಕ್ ಔಟ್ ಮಾಡಿ ಬಂದಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರವು ವಾಕ್ ಔಟ್ ಮಾಡಬೇಕಿತ್ತಾ? ಎಂದು ಅವರು ಪ್ರಶ್ನಿಸಿದರು. ಒಂದು ರಾಜ್ಯ ಮತ್ತು ಕೇಂದ್ರದ ನಡುವಿನ ಸಂಬಂಧ ಚೆನ್ನಾಗಿರಬೇಕು. ಅದಕ್ಕಾಗಿ ಕೇಂದ್ರವು ರಾಜ್ಯವನ್ನು ಸರಿಯಾಗಿ ನೋಡಿಕೊಳ್ಳಬೇಕಲ್ಲವೇ? ಎಂದು ಕೇಂದ್ರ ಬಜೆಟ್ ವಿಚಾರವಾಗಿ ಸಚಿವರು ತಮ್ಮ ಅಸಮಾಧಾನ ಹೊರ ಹಾಕಿದರು.
ಇದು ನಾಯಿ ಮಾಂಸ ಅಲ್ಲ: ವರದಿಯಲ್ಲೇನಿದೆ?
ಬೆಂಗಳೂರಿಗೆ ಹೊರ ರಾಜ್ಯದಿಂದ ಮಾಂಸದಲ್ಲಿ ನಾಯಿ ಮಾಂಸ ಸೇರಿಸಿ ತರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಜಿ.ಪರಮೇಶ್ವರ್ ಅವರು, ಈ ಕುರಿತು ಈಗಾಗಲೇ ಅಧಿಕೃತವಾಗಿ ಮಾತನಾಡಿದ್ದೇನೆ. ರೈಲು ನಿಲ್ದಾಣದಲ್ಲಿ ಗಲಾಟೆ ನಂತರ ಮಾಂಸದ ಸ್ಯಾಂಪಲ್ ಪಡೆದು ವರದಿ ತರಿಸಿದ್ದೇವು. ಅದು ನಾಯಿ ಮಾಂಸ ಅಲ್ಲ ಎಂದು ವರದಿ ಬಂದಿದೆ.
ಆಮದಾಗಿದ್ದು, ನಾಯಿ ಮಾಂಸ ಅಲ್ಲಾ, ಮೇಕೆ ಮಾಂಸ ಎಂದು ವರದಿ ತಿಳಿಸಿದೆ. ಇನ್ನೂ ಸುಳ್ಳು ಆರೋಪ ಮಾಡಿದ ಪುನೀತ್ ಕೆರೆಹಳ್ಳಿ ಸೇರಿ ಕೆಲವರ ಮೇಲೆ ಎಫ್ಐಆರ್ ಹಾಕಲಾಗಿದೆ. ಮಾಂಸ ತರುವವರು ತಪ್ಪು ಮಾಡಿದ್ದು ಸಾಬೀತಾದರೆ ಅವರ ಮೇಲೂ ಕ್ರಮ ಕೈಗೊಳ್ತೇವೆ ಎಂದು ಸ್ಪಷ್ಟಪಡಿಸಿದರು.












Click it and Unblock the Notifications