ಇಂದು ವೈದ್ಯರ ಸಾಮೂಹಿಕ ರಾಜೀನಾಮೆ
ಬೆಂಗಳೂರು, ಅ.27 : ವಿವಿಧ ಬೇಡಿಕೆಗಳನ್ನು ಈಡೇರಿಕೆಗಾಗಿ ಒತ್ತಾಯಿಸಿ ಸರ್ಕಾರಿ ಆಸ್ಪತ್ರೆಗಳ 4,500 ವೈದ್ಯರು ಇಂದು ರಾಜೀನಾಮೆ ನೀಡಲಿದ್ದಾರೆ. ಹುದ್ದೆಗೆ ರಾಜೀನಾಮೆ ನೀಡಿದರೂ, ಸಾರ್ವಜನಿಕರಿಗೆ ತೊಂದರೆ ಆಗದಂತೆ ಒಂದು ತಿಂಗಳ ಕಾಲ ಸೇವೆ ಸಲ್ಲಿಸುತ್ತೇವೆ, ಜನರು ಆತಂಕಪಡುವ ಅಗತ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಭಾನುವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸರ್ಕಾರಿ ವೈದ್ಯರ ಸಂಘದ ಅಧ್ಯಕ್ಷ ಡಾ. ಟಿ. ವೀರಭದ್ರಯ್ಯ ಅವರು, ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರಕ್ಕೆ ಸಾಕಷ್ಟು ಸಮಯ ನೀಡಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಬೇಡಿಕೆಗಳ ಈಡೇರಿಕೆ ಕುರಿತು ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ದೂರಿದರು.

ಈಗಾಗಲೇ ಹಲವು ಭಾರಿ ಪ್ರತಿಭಟನೆಯನ್ನು ಮುಂದೂಡಲಾಗಿದೆ. ಪ್ರತಿ ಬಾರಿಯೂ ಕೇವಲ ಭರವಸೆಗಳನ್ನು ಸರ್ಕಾರ ನೀಡುತ್ತಿದೆಯೇ ಹೊರತು, ಯಾವೊಂದು ಬೇಡಿಕೆಯನ್ನು ಈಡೇರಿಸಿಲ್ಲ ಎಂದು ಆರೋಪಿಸಿದರು. ಪ್ರತಿಭಟನೆ ಹಿಂಪಡೆದರೆ ಅ.28ರಂದು ಸಭೆ ನಡೆಸುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ, ಈ ಬಾರಿ ಭರವಸೆಯ ಮಾತಿಗೆ ಜಗ್ಗುವುದಿಲ್ಲ ಎಂದು ಹೇಳಿದರು. [ವೈದ್ಯರ ಸಮಸ್ಯೆಗಳಿಗೆ ರಾಜೀನಾಮೆ ಪರಿಹಾರವಲ್ಲ]
ಒಂದು ತಿಂಗಳು ಸೇವೆ ಸಲ್ಲಿಸುತ್ತೇವೆ : 4,500 ವೈದ್ಯರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರೂ, ಸಾರ್ವಜನಿಕರಿಗೆ ತೊಂದರೆ ಆಗದಂತೆ ಒಂದು ತಿಂಗಳ ಕಾಲ ಸೇವೆ ಸಲ್ಲಿಸುತ್ತೇವೆ. ಆದ್ದರಿಂದ ಜನರು ಆತಂಕ ಪಡುವ ಅಗತ್ಯವಿಲ್ಲ. ಜತೆಗೆ ತುರ್ತು ಸೇವೆ ಸಲ್ಲಿಸುವ ವೈದ್ಯರು ಎಂದಿನಂತೆ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ ಆನಂದ್‌ರಾವ್ ವೃತ್ತದಲ್ಲಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೇಂದ್ರ ಕಚೇರಿ ಆವರಣದಲ್ಲಿ ವೈದ್ಯಾಧಿಕಾರಿಗಳ ಸಾಮಾನ್ಯ ಸಭೆ ನಡೆಯಲಿದ್ದು, ನಂತರ ರಾಜೀನಾಮೆ ನೀಡುವುದಾಗಿ ಹೇಳಿದರು. ಆನಂದ್ ರಾವ್ ವೃತ್ತದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
10 ಗಂಟೆಗೆ ಸಭೆ : ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಇಂದು ಬೆಳಗ್ಗೆ 10ಕ್ಕೆ ಇಲಾಖೆ ಅಧಿಕಾರಿಗಳು, ಸರ್ಕಾರಿ ವೈದ್ಯರ ಸಭೆಯನ್ನು ಕರೆದಿದ್ದಾರೆ. ಸಭೆಯಲ್ಲಿ ಸಮಸ್ಯೆ ಬಗೆಹರಿಸಯುವ ವಿಶ್ವಾಸವಿದೆ ಎಂದು ಆರೋಗ್ಯ ಇಲಾಖೆ ನಿರ್ದೇಶಕ ಡಾ.ಎಚ್.ಸಿ.ರಮೇಶ್ ತಿಳಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಉಂಟಾದರೆ, ಆಯುಷ್ ವೈದ್ಯರನ್ನು ಸೇವೆಗೆ ಬಳಸಿಕೊಳ್ಳಲು ಸರ್ಕಾರ ಮುಂದಾಗಿದೆ.
ವೈದ್ಯರ ಪ್ರಮುಖ ಬೇಡಿಕೆಗಳು
* ಜಿಲ್ಲಾ ಆಸ್ಪತ್ರೆಯನ್ನು ಆರೋಗ್ಯ ಇಲಾಖೆಯಲ್ಲೇ ಉಳಿಸಿಕೊಳ್ಳಬೇಕು. ವೈದ್ಯಕೀಯ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಬಾರದು
* ಗುತ್ತಿಗೆ ವೈದ್ಯರ ಸೇವೆ ಕಾಯಂಗೊಳಿಸಬೇಕು
* ವೇತನ, ಪಿಂಚಣಿಗೆ ಗುತ್ತಿಗೆ ಸೇವಾವಧಿ ಪರಿಗಣಿಸಬೇಕು
* ವೈದ್ಯಕೀಯ ಕಾಲೇಜು ಅಧ್ಯಾಪಕರು ಮತ್ತು ಸರ್ಕಾರಿ ವೈದ್ಯರ ವೇತನ ತಾರತಮ್ಯ ನಿವಾರಣೆ ಮಾಡಬೇಕು












Click it and Unblock the Notifications