ಕಾಡುಕುರುಬ ಜನಾಂಗಕ್ಕೆ ಪರಿಶಿಷ್ಟ ಪಂಗಡ ಸಿಂಧುತ್ವ ಪ್ರಮಾಣ ಪತ್ರ; ಸುತ್ತೋಲೆ
ಬೆಂಗಳೂರು, ಜನವರಿ 03: ಕರ್ನಾಟಕ ಸರ್ಕಾರ ಕಾಡುಕುರುಬ ಜನಾಂಗಕ್ಕೆ ಪರಿಶಿಷ್ಟ ಜಾತಿ ಸಿಂಧುತ್ವ ಪ್ರಮಾಣ ಪತ್ರವನ್ನು ನೀಡುವ ಕುರಿತು ಸುತ್ತೋಲೆಯನ್ನು ಹೊರಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಈ ಕುರಿತು ಸುತ್ತೋಲೆಯನ್ನು ಹೊರಡಿಸಲಾಗಿದೆ.
ಎಂ. ಎಸ್. ಜ್ಯೋತಿ ಸರ್ಕಾರದ ಉಪ ಕಾರ್ಯದರ್ಶಿ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಈ ಕುರಿತು ಸುತ್ತೋಲೆಯನ್ನು ಹೊರಡಿಸಿದ್ದಾರೆ. ಈ ಸುತ್ತೋಲೆ ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಯ ಗೊಂಡ, ರಾಜಗೊಂಡ, ಕಾಡುಕುರುಬ ಹಾಗೂ ಕೊಡಗು ಜಿಲ್ಲೆಯ ಕುರುಬ ಜನಾಂಗಕ್ಕೆ ಸೇರಿದವರಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಮತ್ತು ಸಿಂಧುತ್ವ ಪ್ರಮಾಣ ಪತ್ರ ಪಡೆಯುವ ಕುರಿತು ಎಂಬ ವಿಷಯ ಒಳಗೊಂಡಿದೆ.

ದಿನಾಂಕ 25/8/2023ರಂದು ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಯ ಗೊಂಡ, ರಾಜಗೊಂಡ, ಕಾಡುಕುರುಬ ಹಾಗೂ ಕೊಡಗು ಜಿಲ್ಲೆಯ ಕುರುಬ ಜಾತಿಗಳ ಜನಾಂಗ ಜಾತಿ ಪ್ರಮಾಣ ಪತ್ರ/ ಸಿಂಧುತ್ವ ಪ್ರಮಾಣ ಪತ್ರ ಪಡೆಯಲು ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ ಚರ್ಚಿಸಿ ತೆಗೆದುಕೊಂಡ ನಿರ್ಣಯಗಳ ಸಭಾ ನಡವಳಿಯನ್ನಯ ಸಂಬಂಧಿಸಿದ ಜಿಲ್ಲಾಧಿಕಾರಿಗಳು ಇತರ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈ ಕೆಳಕಂಡಂತೆ ಕ್ರಮವಹಿಸುವುದು ಎಂದು ಸುತ್ತೋಲೆ ಹೇಳಿದೆ.
ಸುತ್ತೋಲೆಯಲ್ಲಿನ ಕ್ರಮಗಳು
* ಕರ್ನಾಟಕ ರಾಜ್ಯದಲ್ಲಿ ಜಾತಿ ಮತ್ತು ಸಿಂಧುತ್ವ ಪ್ರಮಾಣ ಪತ್ರಗಳನ್ನು ನೀಡಲು ಅನುಸರಿಸಬೇಕಾದ ವಿಧಿ ವಿಧಾನಗಳ ಬಗ್ಗೆ ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಹಾಗೂ ಇತರ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) ಅಧಿನಿಯಮ 1990 ನಿಯಮಗಳು 1992 ರಡಿ ವಿಸ್ಕೃತವಾಗಿ ವಿವರಿಸಲಾಗಿದೆ.
* ಜಾತಿ ಮತ್ತು ಸಿಂಧುತ್ವ ಪ್ರಮಾಣ ಪತ್ರಗಳ ಬಗ್ಗೆ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೋಮೋಟೋ ಪ್ರಕರಣಗಳನ್ನು ಕೈಗೆತ್ತಿಕೊಂಡು ವಿಚಾರಣೆ ಮಾಡಬಾರದು. ಜಿಲ್ಲಾ ಜಾತಿ, ಪರಿಶೀಲನಾ ಸಮಿತಿಯು ವಹಿಸಿದ ಪ್ರಕರಣಗಳನ್ನು ಹಾಗೂ ದೂರು ಬಂದಲ್ಲಿ ವಿಚಾರಣೆ ಮಾಡತಕ್ಕದು.
* ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯಲ್ಲಿ ಬಾಕಿ ಇರುವ ಜಾತಿ/ ಸಿಂಧುತ್ವ ಪ್ರಮಾಣ ಪತ್ರ ಪ್ರಕರಣಗಳನ್ನು ಎಸ್.ಸಿ/ ಎಸ್.ಟಿ/ ಒ.ಬಿ.ಸಿ ಮೀಸಲಾತಿ ಕಾಯ್ದೆ 1990 ಕಲಂ 4 (ಸಿ) (3) ರನ್ನಯ ನಿಗದಿಪಡಿಸಿದ ಅವಧಿಯೊಳಗೆ ವಿಲೇವಾರಿ ಮಾಡತಕ್ಕದ್ದು.
* ಗೊಂಡ, ರಾಜಗೊಂಡ, ಕಾಡುಕುರುಬ ಮತ್ತು ಕೊಡಗು ಜಿಲ್ಲೆಯ ಕುರುಬ ಜಾತಿಗಳಿಗೆ ಸೇರಿದ ವ್ಯಕ್ತಿಗಳಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ/ ಸಿಂಧುತ್ವ ಪ್ರಮಾಣ ಪತ್ರಗಳನ್ನು ನೀಡುವ ಬಗ್ಗೆ ಸರ್ಕಾರದಿಂದ ಈಗಾಗಲೇ ಸುತ್ತೋಲೆ/ ಅಧಿಸೂಚನಗಳ ಪ್ರಕಾರ ಅಭ್ಯರ್ಥಿಗಳು ಸಲ್ಲಿಸುವ ದಾಖಲೆಗಳನ್ನು ಪರಿಶೀಲಿಸಿ. ಸ್ಥಳೀಯ ವಿಚಾರಣೆ/ ಮಹಜರ್ ಮಾಡಿ ಶಾಲಾ ದಾಖಲಾತಿಗಳಲ್ಲಿ ಜಾತಿಗಳ ಬಗ್ಗೆ ನಮೂದಾಗಿದ್ದರೆ ಅದನ್ನು ಒಂದು ಸಾಕ್ಷವೆಂದು ಪರಿಗಣಿಸತಕ್ಕದು.
* ಗೊಂಡ, ರಾಜ ಗೊಂಡ, ಕಾಡುಕುರುಬ ಮತ್ತು ಕೊಡಗು ಜಿಲ್ಲೆಯ ಕುರುಬ ಜನಾಂಗದವರಿಗೆ ಜಾತಿ/ ಸಿಂಧುತ್ವ ಪ್ರಮಾಣ ಪತ್ರ ನೀಡುವ ಬಗ್ಗೆ ಸರ್ಕಾರದಿಂದ ಈಗಾಗಲೇ ಹಲವಾರು ಸುತ್ತೋಲೆ ಹಾಗೂ ಆದೇಶಗಳನ್ನು ನೀಡಿದಾಗೂ ಸದರಿ ಜನಾಂದವರಿಗೆ ಜಾತಿ/ ಸಿಂಧುತ್ವ ಪ್ರಮಾಣ ಪತ್ರಗಳನ್ನು ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಗಂಭೀರವಾಗಿ ವರಿಗಣಿಸಿದ್ದು, ಸಕಾಲದಲ್ಲಿ ಪ್ರಮಾಣ ಪತ್ರಗಳನ್ನು ನೀಡಲು ಕ್ರಮತೆಗೆದುಕೊಳ್ಳುವುದು.
* ಸರ್ಕಾರಿ ಉದ್ಯೋಗಗಳಿಗೆ ಜಾತಿ ಮತ್ತು ಆದಾಯ ಸಿಂಧುತ್ವ ಪ್ರಮಾಣ ಪತ್ರ ನೀಡುವಾಗ ತಹಶೀಲ್ದಾರರು ನೀಡಿದ ಜಾತಿ ಮತ್ತು ಜಾತಿ ಆದಾಯ ಪ್ರಮಾಣ ಪತ್ರದ ನೈಜತ ಪರಿಶೀಲನೆಗಾಗಿ ಸರ್ಕಾರವು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಿರುವ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯಲ್ಲಿ ಮಂಡಿಸಿ ನಿಯಮಾನುಸಾರ ಇತ್ಯರ್ಥಪಡಿಸಬೇಕು.
* ಒಂದು ವೇಳೆ ತಕರಾರು ಇದ್ದಲ್ಲಿ ನಿಯಮಾನುಸಾರ ವಿಚಾರಣೆ ಮಾಡಿ ಅರ್ಹರಿಗೆ ಜಾತಿ ಸಿಂಧುತ್ವ ಪ್ರಮಾಣ ಪತ್ರ ನೀಡಬೇಕು ಅರ್ಹರಿಲ್ಲದಿದ್ದಲ್ಲಿ ಯಾವ ಕಾರಣದ ಮೇಲೆ ತಿರಸ್ಕರಿಸಲಾಗುತ್ತಿದೆ ಎಂಬ ಬಗ್ಗೆ ವಿವರವಾದ ಆದೇಶವನ್ನು (Speaking Order) ಹೊರಡಿಸತಕ್ಕದು.
* ನಾಗರೀಕ ಹಕ್ಕು, ಜಾರಿ ನಿರ್ದೇಶನಾಲಯ ರವರು ಕೆಲವು ಪ್ರಕರಣಗಳನ್ನು ವಿಚಾರಣೆ ಮಾಡಿ ಅರ್ಹರೆಂದು ವರದಿ ಸಲ್ಲಿಸಿದ ಪ್ರಕರಣಗಳನ್ನು ನಿಯಮಾನುಸಾರ ಇತ್ಯರ್ಥಪಡಿಸತಕ್ಕದು.
* ಶಾಲಾ ದಾಖಲಾತಿಗಳಲ್ಲಿ ಈ ಮೊದಲೇ ಜೇನು ಕುರುಬ, ಕಾಡುಕುರುಬ, ಗೊಂಡ, ರಾಜಗೊಂಡ ಎಂದು ನಮೂದಾಗಿದ್ದರೆ ಅಂತಹ ವಿಷಯವನ್ನು ಅವರು ಪಡೆಯಲಿಚ್ಛಿಸುವ ಜಾತಿಗೆ ಸೇರಿದವರು ಎಂಬ ಬಗ್ಗೆ ಸಾಕ್ಷವೆಂದು ಪರಿಗಣಿಸತಕ್ಕದು.
ಮೇಲ್ಕಂಡ ಅಂಶಗಳನ್ನು ಅನುಸರಿಸಿ ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಯ ಗೊಂಡ, ರಾಜಗೊಂಡ, ಕಾಡುಕುರುಬ ಹಾಗೂ ಕೊಡಗು ಜಿಲ್ಲೆಯ ಕುರುಬ ಜಾತಿಗಳಿಗೆ ಸೇರಿದ ವ್ಯಕ್ತಿಗಳಿಗೆ ಜಾತಿ ಪ್ರಮಾಣ ಪತ್ರ/ ಸಿಂಧುತ್ವ ಪ್ರಮಾಣ ಪತ್ರಗಳನ್ನು ನೀಡಲು ಕ್ರಮವಹಿಸಲು ಸೂಚಿಸಿದೆ ಎಂದು ಸುತ್ತೋಲೆ ಹೇಳಿದೆ.












Click it and Unblock the Notifications