ಸರ್ಕಾರ ತೌಡು ಕುಟ್ಟುವ ಕೆಲಸ ಮಾಡಿದೆ, ಭತ್ತ ಕುಟ್ಟಿದರೆ ಅಕ್ಕಿ ಬರುತ್ತದೆ, ತೌಡು ಕುಟ್ಟಿದರೆ ಏನು ಫಲ?: ಸಿದ್ದರಾಮಯ್ಯ
ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ಸುಳ್ಳನ್ನೇ ಜಾಸ್ತಿ ಹೇಳುವುದು, ಆಗಾಗ ಸತ್ಯ ಹೇಳುತ್ತಾರೆ ಅಷ್ಟೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು,ಫೆಬ್ರವರಿ14: ರಾಜ್ಯಪಾಲರ ಭಾಷಣದಲ್ಲಿ ಹಿನ್ನೋಟ ಬರೀ ಸುಳ್ಳುಗಳಿಂದ ಕೂಡಿತ್ತು, ಮುನ್ನೋಟ ಇರಲೇ ಇಲ್ಲ. ಸರ್ಕಾರ ತೌಡು ಕುಟ್ಟುವ ಕೆಲಸ ಮಾಡಿದೆ, ಭತ್ತ ಕುಟ್ಟಿದರೆ ಅಕ್ಕಿ ಬರುತ್ತದೆ, ತೌಡು ಕುಟ್ಟಿದರೆ ಏನು ಫಲ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಕುರಿತು ಮಂಗಳವಾರ ಮಾತನಾಡಿದ ಅವರು, ನನ್ನ ರಾಜಕೀಯ ಜೀವನದ 40 ವರ್ಷಗಳಲ್ಲಿ ಇಷ್ಟೊಂದು ಕೆಟ್ಟ ಭಾಷಣವನ್ನು ನಾನು ಈ ಹಿಂದೆ ಕೇಳಿರಲಿಲ್ಲ. ಅವರ ಇಡೀ ಭಾಷಣದಲ್ಲಿ ಸರ್ಕಾರ ಸುಳ್ಳನ್ನು ಹೇಳಿಸಿದೆ. ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ಸುಳ್ಳನ್ನೇ ಜಾಸ್ತಿ ಹೇಳುವುದು, ಆಗಾಗ ಸತ್ಯ ಹೇಳುತ್ತಾರೆ ಅಷ್ಟೆ. ವಸ್ತುಸ್ಥಿತಿ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡುವುದಿಲ್ಲ. ರಾಜ್ಯಪಾಲರ ಭಾಷಣದಲ್ಲಿ ಹಿನ್ನೋಟ ಇರಬೇಕು, ಕಳೆದ 4 ವರ್ಷಗಳ ಸಾಧನೆಗಳನ್ನು, ರಾಜ್ಯದ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯನ್ನು ರಾಜ್ಯಪಾಲದ ಭಾಷಣದಲ್ಲಿ ಹೇಳಿಸಬೇಕಿತ್ತು ಎಂದರು.
ರಾಜ್ಯಪಾಲರ ಭಾಷಣದಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಏನು ಹೇಳಿತ್ತು, ಅದರಲ್ಲಿ ಎಷ್ಟು ಈಡೇರಿಸಿದೆ ಎಂಬುದನ್ನು ಹೇಳಬೇಕಿತ್ತು. 2018ರಲ್ಲಿ ಬಿಜೆಪಿ ರಾಜ್ಯದ ಜನರಿಗೆ 600 ಭರವಸೆಗಳನ್ನು ನೀಡಿತ್ತು, ಅದರಲ್ಲಿ ಈ ವರೆಗೆ 50 ರಿಂದ 60 ಭರವಸೆಗಳನ್ನು ಕೂಡ ಪೂರ್ಣ ಈಡೇರಿಸಿಲ್ಲ. ರಾಜ್ಯಪಾಲರ ಭಾಷಣದಲ್ಲಿ ಬಡವರ, ರೈತರ, ಅವಕಾಶ ವಂಚಿತರ ಧ್ವನಿಯಾಗಿ ಕೆಲಸ ಮಾಡಿದೆ ಎಂದು ಹೇಳಿಸಲಾಗಿದೆ, ವಾಸ್ತವದಲ್ಲಿ ಈ ವರ್ಗದ ಜನರ ಪರವಾಗಿ ಸರ್ಕಾರ ಕೆಲಸ ಮಾಡಿಲ್ಲ ಎಂಬುದು ನನ್ನ ಅನಿಸಿಕೆ ಎಂದರು.

ರೈತರ ಬಗ್ಗೆ ಭಾಷಣದಲ್ಲಿ ಹೇಳಲಾಗಿದೆ, ಬಿಜೆಪಿ ಪ್ರಣಾಳಿಕೆಯ ಕೆಲವು ಮುಖ್ಯ ಭರವಸೆಗಳನ್ನು ನಾನು ನೆನಪು ಮಾಡಲು ಬಯಸುತ್ತೇನೆ ಎಂದು ಬಿಜೆಪಿ ಭರವಸೆಗಳನ್ನ ಪ್ರಶ್ನೆಸಿದ್ದಾರೆ.
1. ನಮ್ಮ ಸರ್ಕಾರದ ಸಚಿವ ಸಂಪುಟದ ಮೊದಲ ಸಭೆಯಲ್ಲಿಯೇ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕುಗಳಲ್ಲಿ ಇರುವ 1 ಲಕ್ಷದವರೆಗಿನ ಬೆಳೆ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಹೇಳಿದ್ದರು, ಇದರ ಈಡೇರಿಕೆ ಆಗಿದೆಯಾ?
2. 20 ಲಕ್ಷ ಸಣ್ಣ ಮತ್ತು ಅತಿ ಸಣ್ಣ ಒಣಭೂಮಿ ರೈತರಿಗೆ ತಲಾ 10,000 ರೂ. ಆರ್ಥಿಕ ನೆರವು ನೀಡಲಿದ್ದೇವೆ ಎಂದಿದ್ದರು, ಇದನ್ನೂ ಈಡೇರಿಸಿಲ್ಲ.
3. ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರ ಬೆಳೆಯ ಒಂದೂವರೆ ಪಟ್ಟು ಆದಾಯ ನೀಡಲಾಗುವುದು.

4. ಬೆಳೆ ವ್ಯತ್ಯಯದ ಸಂದರ್ಭದಲ್ಲಿ ರೈತರ ಬೆಂಬಲಕ್ಕಾಗಿ 5,000 ಕೋಟಿ ರೂ. ರೈತಬಂಧು ಆವರ್ತನಿಧಿಯನ್ನು ಸ್ಥಾಪನೆ ಮಾಡಲಾಗುವುದು ಎಂದಿದ್ದರು.
5. ರೈತ ಸ್ನೇಹಿ ಯೋಜನೆಗಳ ಅನುಷ್ಠಾನದ ಸೂಕ್ತ ಮೇಲ್ವಿಚಾರಣೆಗಾಗಿ ಮುಖ್ಯಮಂತ್ರಿಗಳ ಕಚೇರಿಯಲ್ಲಿ ರೈತಬಂಧು ವಿಭಾಗ ಸ್ಥಾಪನೆ ಮಾಡಲಾಗುವುದು ಎಂದಿದ್ದರು.
6. ಭೂರಹಿತ ಕೃಷಿ ಕಾರ್ಮಿಕರಿಗೆ ಮುಖ್ಯಮಂತ್ರಿ ರೈತ ಸುರಕ್ಷಾ ವಿಮೆ ಯೋಜನೆಯಡಿ ಉಚಿತ 2 ಲಕ್ಷ ರೂ. ಅಪಘಾತ ವಿಮಾ ಸೌಲಭ್ಯ ನೀಡಲಾಗುವುದು ಎಂದಿದ್ದರು.
7. ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳನ್ನು 2023ರ ಒಳಗೆ ಪೂರ್ಣಗೊಳಿಸಲು ಒಂದೂವರೆ ಲಕ್ಷ ಕೋಟಿಯ "ಸುಜಲಾಂ ಸುಫಲಾಂ ಕರ್ನಾಟಕ" ಕಾರ್ಯಕ್ರಮ ಜಾರಿ ಮಾಡುತ್ತೇವೆ ಎಂದಿದ್ದರು. ಈ ವರೆಗೆ ನೀರಾವರಿ ಉದ್ದೇಶಕ್ಕೆ 45,000 ಕೋಟಿ ರೂ. ಖರ್ಚು ಮಾಡಿರಬಹುದು. ತಮ್ಮಿಂದ ಇದನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ತಿಳಿದಿದ್ದ ಮೇಲೆ ಈ ಭರವಸೆ ನೀಡಿದ್ದು ಯಾಕೆ? ಅನೈತಿಕ ಮಾರ್ಗದಲ್ಲಿ ಅಧಿಕಾರ ಹಿಡಿದಿದ್ದನ್ನು ಕೂಡ ಭಾಷಣದಲ್ಲಿ ಹೇಳಬೇಕಾಗಿತ್ತು.
8. ರಾಜ್ಯದಲ್ಲಿರುವ ಎಲ್ಲಾ ಕೆರೆಗಳ ಪುನಶ್ಚೇತನಕ್ಕಾಗಿ ಮಿಷನ್ ಕಲ್ಯಾಣಿ ಯೋಜನೆ ಜಾರಿ ಮಾಡುತ್ತೇವೆ ಎಂದಿದ್ದರು.
9. ರೈತರ ಪಂಪ್ ಸೆಟ್ ಗೆ ಪ್ರತಿದಿನ 10 ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡುತ್ತೇವೆ ಎಂದಿದ್ದರು.
10. ಮುಖ್ಯಮಂತ್ರಿಗಳ ಕೃಷಿ ಫೆಲೋಶಿಪ್ ಅಡಿ ಅತ್ಯುತ್ತಮ ಕೃಷಿ ವಿಧಾನ ಅರಿಯಲು ಪ್ರತೀ ವರ್ಷ 1000 ರೈತರ ಇಸ್ರೇಲ್ ಮತ್ತು ಚೀನಾ ಭೇಟಿಗೆ ವ್ಯವಸ್ಥೆ ವ್ಯವಸ್ಥೆ ಮಾಡಲಾಗುವುದು ಎಂದಿದ್ದರು.
11. ಭತ್ತ, ಕಬ್ಬು, ತೆಂಗು ಸೇರಿದಂತೆ ರಾಜ್ಯದಲ್ಲಿ ಬೆಳೆಯುವ ಎಲ್ಲಾ ಬೆಳೆಗಳಿಗೆ ನಿರ್ಧಿಷ್ಟ ಕಾರ್ಯತಂತ್ರ ರಚಿಸಲಾಗುವುದು ಎಂದಿದ್ದರು.
12. ಪಶುಸಂಗೋಪನೆ, ಹೈನುಗಾರಿಕೆಗೆ ಬೇಕಾಗಿರುವ ಮೂಲಸೌಕರ್ಯ ಅಭಿವೃದ್ಧಿಗೆ 3000 ಕೋಟಿ ರೂ. ಗಳ ಕಾಮಧೇನು ಅನುದಾನ ನೀಡುವುದಾಗಿ ಹೇಳಿದ್ದರು.
13. ಕೃಷಿ ಸಂಬಂಧಿತ ತರಬೇತಿ ಪಡೆಯುವ ರೈತ ಮಕ್ಕಳಿಗಾಗಿ 100 ಕೋಟಿ ಮೊತ್ತದ ರೈತಬಂಧು ವಿದ್ಯಾರ್ಥಿ ವೇತನ ನೀಡುವುದಾಗಿ ಭರವಸೆ ನೀಡಿದ್ದರು.
ಈ ರೀತಿ ರೈತರಿಗೆ ಹಲವು ಭರವಸೆಗಳನ್ನು ನೀಡಿದ್ದರು, ಆದರೆ ಯಾವೊಂದು ಭರವಸೆಯನ್ನು ಈಡೇರಿಸಲಿಲ್ಲ. ಹೀಗಾದರೆ ರೈತರ ಆದಾಯ ದುಪ್ಪಟ್ಟು ಆಗುವುದು ಹೇಗೆ? ಇದನ್ನೇ ನಾನು ಸುಳ್ಳು ಭಾಷಣ ಎಂದು ದೂರಿರುವುದು. ಇದು ಸಂಸದೀಯ ಪದವೂ ಹೌದು. ರೈತರ ಸಾಲವನ್ನು ಒಂದು ರೂಪಾಯಿ ಕೂಡ ಮನ್ನಾ ಮಾಡುವ ಕೆಲಸ ಮಾಡಿಲ್ಲ. ಹಿಂದೆ ಸಾಲ ಮನ್ನಾ ಮಾಡಿದ್ದು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ, ಅದರಲ್ಲಿ ದಾಖಲೆ ನೀಡದೆ ಉಳಿದುಕೊಂಡ ಕೆಲವು ರೈತರ ಸಾಲಮನ್ನಾವನ್ನು ಈ ಸರ್ಕಾರ ಪೂರ್ಣಗೊಳಿಸುವ ಕೆಲಸ ಮಾಡಿದೆ ಎಂದರು.












Click it and Unblock the Notifications