ಪಂಚಾಯಿತಿ ಚುನಾವಣೆಗಳಲ್ಲಿ ಮತದಾನ ಕಡ್ಡಾಯ
ಬೆಂಗಳೂರು, ಏ. 30 : ಪಂಚಾಯಿತಿ ಚುನಾವಣೆಯಲ್ಲಿ ಮತದಾನ ಕಡ್ಡಾಯಗೊಳಿಸುವ 'ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ'ಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಅಂಕಿತ ಹಾಕಿದ್ದಾರೆ. ನೂತನ ಕಾಯ್ದೆಯ ಅನ್ವಯ ಪಂಚಾಯಿತಿ ಚುನಾವಣೆಗಳಲ್ಲೂ ನೋಟಾ ವ್ಯವಸ್ಥೆ ಜಾರಿಗೆ ಬರಲಿದೆ.
ವಿಧಾನಸೌಧದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಈ ಕುರಿತು ಮಾಹಿತಿ ನೀಡಿದರು. ತಿದ್ದುಪಡಿ ವಿಧೇಯಕಕ್ಕೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದು, ಹೊಸದಾಗಿ ರಚನೆಯಾಗಿರುವ 454 ಗ್ರಾಮ ಪಂಚಾಯಿತಿಗಳು ಮತ್ತು ಮುಂದೆ ನಡೆಯುವ ಎಲ್ಲ ಪಂಚಾಯಿತಿಗಳ ಚುನಾವಣೆಯಲ್ಲಿಯೂ ಮತದಾನ ಕಡ್ಡಾಯವಾಗಲಿದೆ ಎಂದರು. [ನೀರು ಕೊಡದಿದ್ದರೆ ಚುನಾವಣೆ ಬಹಿಷ್ಕಾರ, ಹಳ್ಳಿಗರ ಪ್ರತಿಜ್ಞೆ]

ಈ ಕಾಯ್ದೆಯ ಅನ್ವಯ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಧಿ 5 ವರ್ಷಗಳಿಗೆ ಏರಿಕೆಯಾಗಲಿದೆ. ಶೇ.50 ಕ್ಕೆ ಮೀರದಂತೆ ಮಹಿಳೆಯರಿಗೆ ಮೀಸಲಾತಿ ನಿಗದಿಯಾಗಲಿದೆ. ಪಂಚಾಯಿತಿ ಚುನಾವಣೆಗಳಲ್ಲೂ ನೋಟಾ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಸಚಿವರು ವಿವರಣೆ ನೀಡಿದರು.[ವಿಧೇಯಕದಲ್ಲೇನಿದೆ?]
ಉಭಯ ಸದನಗಳಲ್ಲಿ ಅಂಗೀಕೃತವಾಗಿದ್ದ ವಿಧೇಯಕದ ಕಡ್ಡಾಯ ಮತದಾನ ಸೇರಿದಂತೆ ಕೆಲವು ಅಂಶಗಳ ಬಗ್ಗೆ ರಾಜ್ಯಪಾಲರು ವಿವರಣೆ ಕೇಳಿದ್ದರು. ಇದೆಲ್ಲವನ್ನೂ ಸಂಪೂರ್ಣವಾಗಿ ವಿವರಿಸಿದ ಮೇಲೆ ಈ ವಿಧೇಯಕಕ್ಕೆ ಮಂಗಳವಾರ ಅಂಕಿತ ಹಾಕಿದ್ದಾರೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಶಿಕ್ಷೆ ಬಗ್ಗೆ ಶೀಘ್ರದಲ್ಲೇ ತೀರ್ಮಾನ : ಪಂಚಾಯಿತಿ ಚುನಾವಣೆಗಳಲ್ಲಿ ಮತದಾನ ಮಾಡದವರ ಮೇಲೆ ಏನು ಕ್ರಮ ಕೈಗೊಳ್ಳಬೇಕು. ದಂಡ ಎಷ್ಟು ವಿಧಿಸಬೇಕು? ಮುಂತಾದ ವಿಚಾರಗಳ ಕುರಿತು ಶೀಘ್ರದಲ್ಲಿಯೇ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು.


Click it and Unblock the Notifications
