Belagavi Session: ರಾಜ್ಯದ ಈ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಹೆಚ್ಚಾಯ್ತು ಬೇಡಿಕೆ
ಬೆಂಗಳೂರು, ಡಿಸೆಂಬರ್ 04: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸೋಮವಾರದಿಂದ 16ನೇ ವಿಧಾನಸಭೆಯ ವಿಧಾನಮಂಡಲಗಳ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಇದರಲ್ಲಿ ರಾಜ್ಯದ ಬರ ಪರಿಸ್ಥಿತಿ ಮತ್ತು ರೈತರ ಕಷ್ಟನಷ್ಟಗಳ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಚರ್ಚೆಗೆ ಹೆಚ್ಚು ಮಹತ್ವವನ್ನು ನೀಡಬೇಕು ಎಂಬ ಒತ್ತಾಯ ಹೆಚ್ಚಾಗಿದೆ.
ಬರಪೀಡಿತ ಪ್ರದೇಶದ ರೈತರಿಗೆ ಎಕರೆಗೆ 25,000ರೂ. ಪರಿಹಾರ ಕೊಡಬೇಕು. ಪಶು ಸಂಗೋಪನೆಯಲ್ಲಿ ತೊಡಗಿರುವ ಹಾಗು ಜಾನುವಾರುಗಳನ್ನು ಹೊಂದಿರುವ ರೈತರಿಗೆ ಪ್ರತಿ ಜಾನುವಾರಿಗೆ 5,000 ರೂಪಾಯಿ ಪರಿಹಾರ ಕೊಡಬೇಕು. ಬೆಲೆ ಏರಿಕೆ ನೀಗಿಸಿ ಕುಟುಂಬ ನಿರ್ವಹಿಸಲು ಪ್ರತಿ ಕುಟುಂಬಕ್ಕೆ ಉಚಿತ ರೇಷನ್ ಒದಗಿಸಬೇಕು ಎಂದು ಆಮ್ ಆದ್ಮಿ ಪಕ್ಷ ಪತ್ರದ ಮುಖೇನ ಸರ್ಕಾರಕ್ಕೆ ಆಗ್ರಹಿಸಿದೆ.

ನರೇಗಾ ಅಥವಾ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗ್ರಾಮೀಣ ಭಾಗದ ಜನರಿಗೆ ಆದಾಯ ವ್ಯವಸ್ಥೆ ಕಲ್ಪಿಸಬೇಕು. ಸಾಂಕ್ರಾಮಿಕ ರೋಗಗಳು ಹರಡದಂತೆ ನೋಡಿಕೊಂಡು ಸರ್ಕಾರಿ ಆಸ್ಪತ್ರೆಗಳ ವ್ಯವಸ್ಥೆ ಸುಧಾರಿಸಬೇಕು. ಬರ ಪೀಡಿತ ಪ್ರದೇಶಗಳ ಸರಿಯಾದ ವೈಜ್ಞಾನಿಕ ಸಮೀಕ್ಷೆ ನಡೆಸಬೇಕು ಎಂದು ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಪತ್ರ
ಕೇಂದ್ರದ ಮೇಲೆ ಒತ್ತಡ ತನ್ನಿ
ಸರ್ವ ಪಕ್ಷಗಳ ನಿಯೋಗ ದೆಹಲಿಗೆ ತೆರಳಿ, ತುರ್ತು ಪರಿಸ್ಥಿತಿಗೆ ಸ್ಪಂದಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕು. ರೈತರಿಗೆ ಬೆಳೆ ವಿಮೆಯ ತುರ್ತು ಪಾವತಿ ಮಾಡಬೇಕು. ಈ ನಿಟ್ಟಿನಲ್ಲಿ ಕಲಾಪದ ವೇಳೆ ತುರ್ತಾಗಿ ಚರ್ಚಿಸಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಚಂದ್ರು ಅವರು ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಬರೆದ ಪತ್ರ ಆಗ್ರಹಿಸಿದ್ದಾರೆ.

ಪ್ರಸ್ತುತದಲ್ಲಿನ ಬೇಡಿಕೆಗಳನ್ನು ತುರ್ತಾಗಿ ಚರ್ಚಿಸಿ ಪರಿಹಾರ ಒದಗಿಸದೇ ರೈತರುಗಳು ಆತ್ಮಹತ್ಯೆಯ ದಾರಿಯನ್ನು ಹಿಡಿದರೆ, ಅದಕ್ಕೆ ಜವಾಬ್ದಾರಿ ನಿಮ್ಮ ಸದನ ಹಾಗು ಅದರ ಸದಸ್ಯರಾಗಲಿದ್ದಾರೆ. ಒಂದು ರಾಷ್ಟ್ರೀಯ ಪಕ್ಷವಾಗಿ ಆಮ್ ಆದ್ಮಿ ಪಕ್ಷವು ಸಾಮಾನ್ಯ ಜನರ ಹಕ್ಕುಗಳು ಮತ್ತು ಯೋಗಕ್ಷೇಮಕ್ಕಾಗಿ ಹೋರಾಡಲು ಬದ್ಧವಾಗಿದೆ.
ಹೋರಾಟದ ಎಚ್ಚರಿಕೆ ನೀಡಿದ ಎಎಪಿ
ಸದನದಲ್ಲಿ ಸರಿಯಾಗಿ ಚರ್ಚೆಯಾಗಿ ಪರಿಹಾರಗಳು ಸಿಗದಿದ್ದರೆ ಸದನದಾಚೆ ನಾವು ಜನಪರ ಹೋರಾಟಕ್ಕಿಳಿಯುವುದು ಅನಿವಾರ್ಯವಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇವಲ 800 ಕೋಟಿ ರೂ. ಗಳನ್ನು ಕುಡಿಯುವ ನೀರು ಹಾಗೂ ಮೇವು ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳ ಖಾತೆಗೆ ಜಮಾ ಮಾಡಿ ಕೈ ತೊಳೆದು ಕೊಂಡಿದ್ದಾರೆ. ಈ ತುರ್ತು ಪರಸ್ಥಿತಿ ನೀಗಿಸಲು ರಾಜ್ಯದ ಹಣಕಾಸು ನಿರ್ವಹಿಸುವಲ್ಲಾಗಲಿ, ಕೇಂದ್ರದಿಂದ ಹೆಚ್ಚಿನ ಅನುದಾನ ತರುವುದರಲ್ಲಾಗಲಿ ವಿಫಲರಾಗಿದ್ದಾರೆ.
ನಮ್ಮ ರಾಜ್ಯದ ಸಂಸದರಿಗಾಗಲಿ, ಪ್ರಧಾನಿ ನರೇಂದ್ರ ಮೋದಿಯವರ ಬಿಜೆಪಿಯ ಕೇಂದ್ರ ಸರ್ಕಾರಕ್ಕಾಗಲಿ ನಮ್ಮ ರೈತರು ಮತ್ತು ಗ್ರಾಮೀಣ ಸಮುದಾಯಗಳು ಎದುರಿಸುತ್ತಿರುವ ಸವಾಲುಗಳನ್ನು ನಿವಾರಿಸುವ ಬದ್ಧತೆ ಇದೆಯೇ ಎಂಬ ಅವರು ಪ್ರಶ್ನಿಸಿದರು.












Click it and Unblock the Notifications