Congress: 'ಜನಾಕ್ರೋಶದ ಸಹನೆ ಕಟ್ಟೆಯೊಡೆದರೆ ಕಾಂಗ್ರೆಸ್ ಸರ್ಕಾರ ಕೊಚ್ಚಿ ಹೋಗುತ್ತದೆ'
ಬೆಂಗಳೂರು, ಅಕ್ಟೋಬರ್ 24: ಚಂಡಮಾರುತದ ಪರಿಣಾಮ ರಾಜ್ಯದಲ್ಲಿ ಹಿಂಗಾರು ಮಳೆಯ ಅಬ್ಬರ ಜೋರಾಗಿದೆ. ಇಂದು (ಅಕ್ಟೋಬರ್ 24) ಗುರುವಾರ ಕೂಡ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಈಗಾಗಲೇ ತಿಳಿಸಿದೆ. ಹಿಂಗಾರು ಮಳೆಯ ಆರ್ಭಟಕ್ಕೆ ರಾಜ್ಯದ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಧಾರಾಕಾರ ಮಳೆಗೆ ಅಪಾರ ಬೆಳೆ ನಾಶ, ಮನೆಗಳಿಗೆ ನುಗ್ಗಿದ ನೀರು, ಕಟ್ಟಡ ಕುಸಿತ, ಮನೆ ಕುಸಿತ, ಗುಂಡಿ ಬಿದ್ದ ರಸ್ತೆಗಳಿಂದ ಅಪಘಾತ ಈ ರೀತಿ ಸಾಲು ಸಾಲು ಅನೇಕ ಅವಘಡಗಳು ಸಂಭವಿಸುತ್ತಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರ ಕೂಡಲೇ ಜನರ ಕಷ್ಟಕ್ಕೆ ಸ್ಪಂದಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತೀವ್ರವಾಗಿ ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಅಭಿವೃದ್ಧಿ ಎಂಬುವುದೇ ಮರೀಚಿಕೆಯಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸುರಿಯುತ್ತಿರುವ ಮಳೆಯ ಅವಾಂತರದಿಂದ ರಕ್ಷಿಸಲು ಸಾಮರ್ಥ್ಯವಿಲ್ಲದ ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಭ್ರಷ್ಟಾಚಾರದಲ್ಲಿ ಮುಳುಗಿ ತನ್ನ ಬೊಕ್ಕಸ ಬರಿದಾಗಿಸಿಕೊಂಡು ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ, ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಸದೇ ಈ ಸರ್ಕಾರದ ಮೇಲೆ ನಂಬಿಕೆ ಕಳೆದುಕೊಂಡು ಬಹುತೇಕ ಕಾಮಗಾರಿಗಳು ಅರ್ಧಕ್ಕೇ ನಿಂತು ಹೋಗಿವೆ, ರೈತರ ಜಮೀನುಗಳಿಗೆ ನೀರು ನುಗ್ಗಿ ಕೈ ಸೇರಬೇಕಿದ್ದ ಬೆಳೆಗಳು ನಾಶವಾಗಿದೆ.

ಗುಂಡಿಬಿದ್ದ ರಸ್ತೆಗಳು, ಟ್ರಾಫಿಕ್ ಸಮಸ್ಯೆಗಳು, ಮನೆಗಳಿಗೆ ನುಗ್ಗುತ್ತಿರುವ ಚರಂಡಿ ನೀರು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯ ನಡುವೆ ಮಳೆಯ ತತ್ತರಕ್ಕೆ ಸಿಲುಕಿ ನಲುಗುತ್ತಿರುವ ನಾಡಿನ ರೈತರು ಹಾಗೂ ಸಾರ್ವಜನಿಕರ ಸ್ಥಿತಿಯನ್ನು ಕಂಡು ಅತ್ಯಂತ ವ್ಯಥೆಯಾಗುತ್ತಿದೆ ಎಂದರು.
ಕಾಂಗ್ರೆಸ್ ಸರ್ಕಾರಕ್ಕೆ ವಿಜಯೇಂದ್ರ ಎಚ್ಚರಿಕೆ
ರಾಜ್ಯ ಸರ್ಕಾರ ಈ ಕೂಡಲೇ ಸಂಕಷ್ಟಿತ ಜನರಿಗೆ ಪರಿಹಾರ ಕಾರ್ಯ ಚುರುಕುಗೊಳಿಸಿ, ಬೆಳೆ ಹಾನಿಯಾಗಿ ಚಿಂತೆಗೀಡಾಗಿರುವ ರೈತ ಸಮುದಾಯಕ್ಕೆ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಸೂಕ್ತ ಕ್ರಮಕ್ಕೆ ಮುಂದಾಗಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಗ್ರಹಿಸಿದರು. ಅಲ್ಲದೇ ಮಳೆಯ ಅವಾಂತರದ ಸ್ಥಿತಿಯನ್ನು ನಿಭಾಯಿಸುವಲ್ಲಿ ಉಡಾಫೆತನ ಮುಂದುವರಿಸಿದಲ್ಲಿ ಇದರ ಪರಿಣಾಮದ ಜನಾಕ್ರೋಶದ ಸಹನೆಯ ಕಟ್ಟೆಯೊಡೆದರೆ ಕಾಂಗ್ರೆಸ್ ಸರ್ಕಾರ ಅದರಲ್ಲಿ ಕೊಚ್ಚಿ ಹೋಗಲಿದೆ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.












Click it and Unblock the Notifications