S.Nijalingappa House: ಕೊನೆಗೂ ಮಾಜಿ ಸಿಎಂ ನಿಜಲಿಂಗಪ್ಪ ಮನೆ ಖರೀದಿಸಿದ ಸರ್ಕಾರ-ಎಷ್ಟು ಕೋಟಿಗೆ ಗೊತ್ತಾ?
S.Nijalingappa House: ನಾಲ್ಕು ಬಾರಿ ಸಿಎಂ ಆಗಿದ್ದ ಚಿತ್ರದುರ್ಗದ ದಿವಂಗತ ಎಸ್.ನಿಜಲಿಂಗಪ್ಪ ಅವರ ಮನೆಯನ್ನು ಇಂದು (ನವೆಂಬರ್ 13) ಕೊನೆಗೂ ರಾಜ್ಯ ಸರ್ಕಾರ ಖರೀಸಿದೆ ಎಂದು ತಿಳಿದುಬಂದಿದೆ. ಹಾಗಾದರೆ ಎಷ್ಟು ರೂಪಾಯಿಗೆ ಮಾರಾಟ ಆಗಿದೆ ಹಾಗೂ ಎಷ್ಟು ಹೆಕ್ಟೇರ್‌ನಲ್ಲಿ ಮನೆ ಇದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಮಾಜಿ ಮುಖ್ಯಮಂತ್ರಿ, ರಾಷ್ಟ್ರನಾಯಕ ದಿ.ಎಸ್ ನಿಜಲಿಂಗಪ್ಪ ಅವರ ಮನೆಯನ್ನು ಇಂದು (ನವೆಂಬರ್ 13) ರಾಜ್ಯ ಸರ್ಕಾರ 5,00,00,000 ರೂಪಾಯಿಗೆ ಖರೀದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ನಿಜಲಿಂಗಪ್ಪ ಅವರ ಮನೆ ಖರೀದಿಸಿ, ಸಂರಕ್ಷಿಸಿ ಅಭಿವೃದ್ಧಿಪಡಿಸಲು ಸರ್ಕಾರ ಸಜ್ಜಾಗಿದೆ. ಈ ಉದ್ದೇಶದಿಂದ 5,00,00,000 ರೂಪಾಯಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. 2 ಕೋಟಿ ಹಣವನ್ನು ಚಿತ್ರದುರ್ಗ ಜಿಲ್ಲಾಧಿಕಾರಿ ಖಾತೆಗೆ ಸರ್ಕಾರ ಬಿಡುಗಡೆ ಮಾಡಿದೆ. ಪುತ್ರ ಕಿರಣ್ ಶಂಕರ್ ನಿಜಲಿಂಗಪ್ಪ ಮನೆ ಮಾರಾಟಕ್ಕಿದೆ ಎಂದು ಜಾಹೀರಾತು ನೀಡಿದ್ದ ಹಿನ್ನೆಲೆ ಚಿತ್ರದುರ್ಗದ ಜಿಲ್ಲಾಧಿಕಾರಿ ನಿವಾಸದ ಬಳಿಯಿರುವ ಎಸ್.ನಿಜಲಿಂಗಪ್ಪ ನಿವಾಸವನ್ನು ಸರ್ಕಾರ ಇದೀಗ ಖರೀದಿ ಮಾಡಿದೆ.

ಹಿಂದೆ ಕೆಪಿಸಿಸಿಯಿಂದ ನಿಜಲಿಂಗಪ್ಪನವರ ಮನೆ ಖರೀದಿ ಬಗ್ಗೆ ಕಾಂಗ್ರೆಸ್ ಚಿಂತನೆ ಮಾಡಿತ್ತು. ಇದೇ ವಿಚಾರಕ್ಕೆ ಸೆಪ್ಟೆಂಬರ್ 2ರಂದು ನಿಜಲಿಂಗಪ್ಪ ನಿವಾಸಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಗಮಿಸಿದ್ದು, ಪುತ್ರ ಕಿರಣ್ ಜೊತೆ ಚರ್ಚೆ ನಡೆಸಿದ್ದರು. ನಿಜಲಿಂಗಪ್ಪ ನಿವಾಸ ಖರೀದಿಸಿ ಕಾಂಗ್ರೆಸ್ ಕಚೇರಿ ತೆರೆಯುವ ಯೋಜನೆಯನ್ನು ಕೆಪಿಸಿಸಿ ಹಾಕಿಕೊಂಡಿತ್ತು.
ಆದರೆ, ಕಾಂಗ್ರೆಸ್‌ನಿಂದ ಯಾವುದೇ ಪ್ರತಿಕ್ರಿಯೆ ಬರದ ಹಿನ್ನೆಲೆ ಮನೆ ಮಾರಾಟಕ್ಕಿದೆ ಎಂದು ಕಿರಣ್ ಜಾಹೀರಾತು ನೀಡಿದ್ದರು. ಸದ್ಯ ನಿಜಲಿಂಗಪ್ಪ ಪುತ್ರ ಕಿರಣ್ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮನೆ ಮಾರಾಟಕ್ಕಿದೆ ಎನ್ನುವ ಜಾಹೀರಾತು: ಕರ್ನಾಟಕ ಏಕೀಕರಣದ ಮುಂಚೂಣಿ ನಾಯಕರು ಹಾಗೂ ನಾಲ್ಕು ಬಾರಿ ಸಿಎಂ ಆಗಿದ್ದ ಚಿತ್ರದುರ್ಗದ ದಿವಂಗತ ಎಸ್.ನಿಜಲಿಂಗಪ್ಪ ಅವರ ನಿವಾಸ ಮಾರಾಟಕ್ಕಿದೆ ಎಂದು ಇತ್ತೀಚೆಗಷ್ಟೇ ಜಾಹಿರಾತಿನ ಬ್ಯಾನರ್‌ವೊಂದನ್ನು ಹಾಕಿದ್ದರು.
ಕೋಟೆ ನಾಡು ಚಿತ್ರದುರ್ಗ ನಗರದ ವಾರ್ಡ್ ನಂಬರ್.32 ವಿ.ಪಿ ಬಡಾವಣೆಯಲ್ಲಿರುವ ಡಿ.ಸಿ ಬಂಗಲೆಯ ಸಮೀಪವಿರುವ 117 X 130 ಅಡಿ ಅಳತೆಯ ಸೈಟಿನಲ್ಲಿ ಇರುವ ನಿವಾಸವನ್ನು ಮಾರಾಟಕ್ಕೆ ಇಡಲಾಗಿತ್ತು.
ಆಧುನಿಕ ಕರ್ನಾಟಕದ ಶಿಲ್ಪಿಗಳಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಕೂಡ ಒಬ್ಬರಾಗಿದ್ದಾರೆ.
ನವ ಕರ್ನಾಟಕದ ನಿರ್ಮಾತೃ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅವರು ಬೃಹತ್ ನೀರಾವರಿ ಯೋಜನೆಗಳು, ಹಲವು ಕೈಗಾರಿಕೆಗಳು ಸೇರಿದಂತೆ ಕರ್ನಾಟಕವನ್ನು ಕಟ್ಟುವ ಮಹತ್ವ ಕಾರ್ಯಗಳ ಮೂಲಕ ರಾಜ್ಯದ ಅಭಿವೃದ್ಧಿ ಹಾಗೂ ಜನತೆಗೆ ದೊಡ್ಡ ಕೊಡುಗೆ ನೀಡಿದ್ದರು.
ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಲ್ಲದೆ, ಕರ್ನಾಟಕದ ಏಕೀಕರಣದ ಹೋರಾಟದ ಮುಂಚೂಣಿ ನಾಯಕರಾಗಿದ್ದರು. ನಾಡಿಗಾಗಿ ಬದುಕನ್ನೇ ಮುಡಿಪಾಗಿಟ್ಟ ಹಿರಿಯ ಮುತ್ಸದ್ದಿ ಬಾಳಿ ಬದುಕಿದ ಮನೆಯನ್ನು ಸ್ಮಾರಕ ಮಾಡಬೇಕೆಂಬ ಅವರ ಕುಟುಂಬ ಸದಸ್ಯರು ಹಾಗೂ ಹಿತೈಷಿಗಳು ಪ್ರಯತ್ನಗಳಿಗೆ ಸರ್ಕಾರದ ಕಡೆಯಿಂದ ಸರಿಯಾದ ಸ್ಪಂದನೆ ಸಿಕ್ಕಿರಲಿಲ್ಲ. ಈ ಪ್ರಯತ್ನ ಫಲಿಸದೆ ಇರುವುದರಿಂದ ಕುಟುಂಬದ ಸದಸ್ಯರು ಮನೆಯನ್ನ ಮಾರಾಟ ನಿರ್ಧರಿಸಿದ್ದರು.
ಮನೆಯ ಪೋಟೋ ಹಾಗೂ ಮಾರಾಟದ ಜಾಹೀರಾತು ಪೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಬಂಗಲೆ ಬಳಿ ಇರುವ ಪಾರಂಪರಿಕ ಕಟ್ಟಡವಾದ ಮಾಜಿ ಮುಖ್ಯಮಂತ್ರಿ ಹಾಗೂ ಎಐಸಿಐ ಅಧ್ಯಕ್ಷ ಲಿಂಗಪ್ಪನ ಅವರ ಮನೆ ಮಾರಾಟಕ್ಕಿದೆ. ಈ ಮನೆಯ ಮೌಲ್ಯ ಈಗ 10,00,00,000 ಕೋಟಿ ರೂಪಾಯಿ ಎಂಬ ಜಾಹೀರಾತು ನೀಡಲಾಗಿತ್ತು. ಇದೀಗ ಕೊನೆಗೂ ಸರ್ಕಾರವೇ ಮನೆ ಖರೀದಿ ಮಾಡಿದೆ.












Click it and Unblock the Notifications