ಹೈಕೋರ್ಟ್‌ಗಾಗಿ 10 ಮಹಡಿ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ
ಬೆಂಗಳೂರು, ಸೆಪ್ಟೆಂಬರ್ 22; ಹಾಲಿ ಕರ್ನಾಟಕ ಹೈಕೋರ್ಟ್‌ನಲ್ಲಿ ಎದುರಾಗಿರುವ ಸ್ಥಳಾವಕಾಶದ ಕೊರತೆಯನ್ನು ನೀಗಿಸಲು ಸರ್ಕಾರ 10 ಮಹಡಿಗಳ ಕಟ್ಟಡ ನಿರ್ಮಾಣ ಸೇರಿದಂತೆ ಹೈಕೋರ್ಟ್ ವಿಸ್ತರಣೆ ಸಂಬಂಧ 4 ಪ್ರಸ್ತಾವನೆಗಳನ್ನು ರಾಜ್ಯ ಸರ್ಕಾರ ಸಿದ್ದಪಡಿಸಿದೆ.
ಕಬ್ಬನ್ ಪಾರ್ಕ್‌ನಲ್ಲಿರುವ ಚುನಾವಣೆ ಆಯೋಗದ ಹಳೆಯ ಕಟ್ಟಡವನ್ನು ನೆಲಸಮಗೊಳಿಸಿ, ಅಲ್ಲಿಯೇ ಹೈಕೋರ್ಟ್ ಆಡಳಿತ ವ್ಯವಹಾರಗಳ ನಿರ್ವಹಣೆಗಾಗಿ 10 ಮಹಡಿ ಮತ್ತು 3 ಮಹಡಿಯ ಪ್ರತ್ಯೇಕ ಕಟ್ಟಡ ನಿರ್ಮಾಣ ಮಾಡುವುದು, ಹೈಕೋರ್ಟ್ ಆವರಣದಲ್ಲಿರುವ ಕ್ಯಾಂಟೀನ್ ಕಟ್ಟಡದ ಮೇಲೆ ಕಟ್ಟಡವೊಂದನ್ನು ನಿರ್ಮಾಣ ಮಾಡಲು ಸರ್ಕಾರ ಉದ್ದೇಶಿಸಿದೆ.

ಈ ಕುರಿತು ಹೈಕೋರ್ಟ್‌ಗೆ ಗುರುವಾರ ಮಾಹಿತಿ ನೀಡಲಾಗಿದೆ. ಬೆಂಗಳೂರಿನ ಹೈಕೋರ್ಟ್ ಕಟ್ಟಡದ ನೆಲಮಹಡಿಯಲ್ಲಿ ಇರುವ ಕಛೇರಿಗಳನ್ನು ಸ್ಥಳಾಂತರಿಸಲು ಸೂಕ್ತ ಆದೇಶ ಹೊರಡಿಸುವಂತೆ ಕೋರಿ ವಕೀಲ ಎಲ್. ರಮೇಶ್ ನಾಯಕ್ ಮತ್ತು ಹೈಕೋರ್ಟ್ ಕಟ್ಟಡ ಸಂಕೀರ್ಣಕ್ಕೆ ಬೆಂಗಳೂರಿನ ಕೇಂದ್ರ ಭಾಗದಲ್ಲಿ 30ಕ್ಕೂ ಅಧಿಕ ಎಕರೆ ಜಮೀನು ಮಂಜೂರು ಮಾಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಕೋರಿ ಶರಣ ದೇಸಾಯಿ ಎಂಬುವವರು ಸಲ್ಲಿಸಿದ್ದ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು, ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಳೆ ನೇತೃತ್ವದ ವಿಭಾಗೀಯ ಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿದ್ದವು.
ಪ್ರಸ್ತಾವನೆಗಳು ಏನು?; ಹೈಕೋರ್ಟ್ ಆಡಳಿತ ವಿಭಾಗದ ಪರ ಹಾಜರಾದ ಹಿರಿಯ ವಕೀಲರು, ಹೈಕೋರ್ಟ್ ವಿಸ್ತರಣೆಗೆ ಸ್ಥಳಾವಕಾಶ ಒದಗಿಸುವ ಸಂಬಂಧ ಮೂರು ಪ್ರಸ್ತಾವನೆಗಳು ಸರ್ಕಾರ ಸಲ್ಲಿಸಿದೆ. ಅವುಗಳನ್ನು ಹೈಕೋರ್ಟ್ ಕಟ್ಟಡ ಸಮಿತಿ ಪರಿಶೀಲನೆ ನಡೆಸಲಿದೆ. ಆ ಮೂರು ಪ್ರಸ್ತಾವನೆಗಳನ್ನು ಹೈಕೋರ್ಟ್ ಕಟ್ಟಡ ಸಮಿತಿ ಪರಿಶೀಲಿಸಿ, ತನ್ನ ಅಭಿಪ್ರಾಯಗಳೊಂದಿಗೆ ಮುಖ್ಯಮಂತ್ರಿಗಳಿಗೆ ಸಲ್ಲಿಸಬೇಕಿದೆ. ನಂತರ ಮುಖ್ಯಮಂತ್ರಿಗಳು ಅಂತಿಮ ತೀರ್ಮಾನ ತೆಗೆದುಕೊಂಡು, ಅದನ್ನು ಹೈಕೋರ್ಟ್ ಮುಂದಿಡಲಿದ್ದಾರೆಂದು ವಿವರಿಸಿದರು.
ಸರ್ಕಾರಿ ವಕೀಲರು ಹಾಜರಾಗಿ, ಈ ಮೂರು ಪ್ರಸ್ತಾವನೆಯಲ್ಲದೇ ಹೆಚ್ಚುವರಿಯಾಗಿ 4ನೇ ಪ್ರಸ್ತಾವನೆ ಸಹ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಕೆಯಾಗಿದೆ. 10 ಮಹಡಿಗಳ ಕಟ್ಟಡಗಳನ್ನು ನಿರ್ಮಿಸುವುದೇ 4ನೇ ಪ್ರಸ್ತಾವನೆಯಾಗಿದೆ. ಮೊದಲಿಗೆ ಆರು ಮಹಡಿಗಳ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಇತ್ತು. ಆದರೆ, ಖುದ್ದು ಮುಖ್ಯ ಕಾರ್ಯದರ್ಶಿಗಳೇ ಲಂಬವಾಗಿ 10 ಮಹಡಿಗಳ ಕಟ್ಟಡವನ್ನು ಏಕೆ ನಿರ್ಮಾಣ ಮಾಡಬಾರದು ಎಂಬುದಾಗಿ ಕೇಳಿದ್ದಾರೆ. ಅದರಂತೆ ಹೊಸದಾಗಿ ಹತ್ತು ಮಹಡಿಗಳ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆಯನ್ನು ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಈ ಹೇಳಿಕೆ ದಾಖಲಿಸಿಕೊಂಡ ಹೈಕೋರ್ಟ್, ಒಂದು ವಾರದಲ್ಲಿ ರಾಜ್ಯ ಸರ್ಕಾರವು ಈ 4 ಪ್ರಸ್ತಾವನೆಗಳನ್ನು ಹೈಕೋರ್ಟ್ ರಿಜಿಸ್ಟ್ರಿಗೆ ಸಲ್ಲಿಸಬೇಕು. ಪ್ರಸ್ತಾವನೆಗಳನ್ನು ಸ್ವೀಕರಿಸಿದರೆ, ಅದನ್ನು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರು ಹೈಕೋರ್ಟ್ ಕಟ್ಟಡದ ಸಮಿತಿ ಮುಂದೆ ಮಂಡಿಸಬೇಕು. ನಂತರ ಹೈಕೋರ್ಟ್ ಆಗಸ್ಟ್ 14ರಂದು ನೀಡಿರುವ ನಿರ್ದೇಶನದಂತೆ ಮುಂದಿನ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಒಂದು ತಿಂಗಳ ನಂತರಕ್ಕೆ ಮುಂದೂಡಿತು.












Click it and Unblock the Notifications