Government Employee: ಯುಪಿಎಸ್ ಇಂದಿನಿಂದ ಜಾರಿ, ಭರವಸೆಯಲ್ಲೇ ಉಳಿದ ಒಪಿಎಸ್ ಬೇಡಿಕೆ
ಬೆಂಗಳೂರು, ಏಪ್ರಿಲ್ 01: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ 2024ರ ಆಗಸ್ಟ್‌ನಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಜಾರಿಗೊಳಿಸಲು ಅನುಮೋದನೆ ನೀಡಲಾಗಿತ್ತು. ಕೇಂದ್ರ ಸರ್ಕಾರಿ ನೌಕರರಿಗೆ ಅನ್ವಯವಾಗುವಂತೆ ಏಪ್ರಿಲ್ 1ರ ಮಂಗಳವಾರದಿಂದ ಯುಪಿಎಸ್ ಜಾರಿಗೆ ಬಂದಿದೆ. ಸರ್ಕಾರಿ ನೌಕರರು ಇದನ್ನು ಆಯ್ಕೆ ಮಾಡಲು ಜೂನ್ ತನಕ ಅವಕಾಶ ನೀಡಲಾಗಿದೆ.
ಕರ್ನಾಟಕದ ಸರ್ಕಾರಿ ನೌಕರರು ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ (ಒಪಿಎಸ್) ಮರು ಜಾರಿಗೊಳಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಕರ್ನಾಟಕದ ಸರ್ಕಾರ ಈ ಕುರಿತು ನೀಡುತ್ತಿರುವ ಭರವಸೆಗಳು ಹಾಗೆಯೇ ಇದೆ. ನೌಕರರ ಒತ್ತಾಯವೂ ಮುಂದುವರೆದಿದೆ.

ಈಗಾಗಲೇ ಕರ್ನಾಟಕ ಸರ್ಕಾರ 2006ರ ಏಪ್ರಿಲ್‌ಗೂ ಮೊದಲು ನೇಮಕಾತಿ ಅಧಿಸೂಚನೆ ಮೂಲಕ ನೇಮಕಗೊಂಡ 13,500 ನೌಕರರನ್ನು ಎನ್‌ಪಿಎಸ್‌ನಿಂದ ಒಪಿಎಸ್ ವ್ಯಾಪ್ತಿಗೆ ಒಳಪಡಲು ಆದೇಶವನ್ನು ಹೊರಡಿಸಿದೆ. ಆದರೆ ಎಲ್ಲಾ ಸರ್ಕಾರಿ ನೌಕರರನ್ನು ಒಪಿಎಸ್ ವ್ಯಾಪ್ತಿಗೆ ತರಬೇಕು ಎಂಬುದು ರಾಜ್ಯ ಸರ್ಕಾರಿ ನೌಕರರ ಸಂಘ, ಎನ್‌ಪಿಎಸ್ ಉದ್ಯೋಗಿಗಳ ಸಂಘದ ಬೇಡಿಕೆಯಾಗಿದೆ. ಇದಕ್ಕೆ ಇನ್ನೂ ರಾಜ್ಯ ಸರ್ಕಾರ ಒಪ್ಪಿಗೆ ನೀಡಿಲ್ಲ.
ಸಮಿತಿ ರಚನೆ ಮಾಡಿರುವ ಸರ್ಕಾರ: ಈಗಾಗಲೇ ರಾಜಸ್ಥಾನ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಛತ್ತೀಸ್‌ಗಢ ರಾಜ್ಯಗಳು ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಮರು ಜಾರಿಗೊಳಿಸಿವೆ. ಕರ್ನಾಟಕದ ಕಾಂಗ್ರೆಸ್ 2023ರ ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿಯೇ ಎನ್‌ಪಿಎಸ್ ರದ್ದುಗೊಳಿಸುವ ಭರವಸೆಯನ್ನು ನೀಡಿತ್ತು. ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಸಮೀಪಿಸುತ್ತಿದೆ. ಆದರೆ ಇನ್ನೂ ಸಹ ಒಪಿಎಸ್ ಮರು ಜಾರಿ ಬೇಡಿಕೆ ಈಡೇರಿಲ್ಲ.
(ಎನ್‌ಪಿಎಸ್) ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಮರು ಜಾರಿಗೊಳಿಸಿರುವ ರಾಜ್ಯಗಳಲ್ಲಿ ಹೇಗೆ ಇದನ್ನು ಜಾರಿ ಮಾಡಲಾಗಿದೆ ಎಂದು ಅಧ್ಯಯನ ನಡೆಸಿ ವರದಿ ನೀಡಲು ಕರ್ನಾಟಕ ಸರ್ಕಾರ ಸಮಿತಿಯನ್ನು ರಚನೆ ಮಾಡಿದೆ. ಅಪರ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಜ್ ನೇತೃತ್ವದ ಸಮಿತಿ ಇನ್ನೂ ಸಹ ಸರ್ಕಾರಕ್ಕೆ ವರದಿ ನೀಡಬೇಕಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನೂತನ ಪದಾಧಿಕಾರಿಗಳ ಸಮಾವೇಶ ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿತ್ತು. ಈ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹಳೆ ಪಿಂಚಣಿ ಯೋಜನೆ ಮರು ಜಾರಿಗೊಳಿಸುವ ಭರವಸೆಯನ್ನು ಮತ್ತೆ ಕೊಟ್ಟಿದ್ದಾರೆ.
ಮಾಹಿತಿಗಳ ಪ್ರಕಾರ ಅಂಜುಮ್ ಪರ್ವೇಜ್ ನೇತೃತ್ವದ ಸಮಿತಿ ವಿವಿಧ ರಾಜ್ಯಗಳಲ್ಲಿ ಅಧ್ಯಯನ ಪೂರ್ಣಗೊಳಿಸಿದೆ. ಸರ್ಕಾರಕ್ಕೆ ವರದಿ ನೀಡುವುದು ಬಾಕಿ ಇದೆ. ಸರ್ಕಾರ ವರದಿಯನ್ನು ಸ್ವೀಕಾರ ಮಾಡಿ, ಸಚಿವ ಸಂಪುಟ ಸಭೆಯಲ್ಲಿ ಆ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನವನ್ನು ಕೈಗೊಳ್ಳಬೇಕಿದೆ.
2.45 ಲಕ್ಷ ನೌಕರರ ಎನ್‌ಪಿಎಸ್ ಹಣ ಕೇಂದ್ರದ ಪಿಎಫ್‌ಆರ್‌ಡಿಗೆ ಪಾವತಿಯಾಗಿದೆ. ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ಮರು ಜಾರಿಯಾದರೆ ಈ ಹಣವನ್ನು ವಾಪಸ್ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಬೇಕು. ಕೇಂದ್ರ ಒಪ್ಪಿದ ಬಳಿಕ ಹಣ ವಾಪಸ್ ಆಗಬೇಕು. ಆದರೆ ಅಷ್ಟು ಸುಲಭವಾಗಿ ಹಣ ವಾಪಸ್ ಬರುವುದಿಲ್ಲ ಎಂಬುದು ಒಪಿಎಸ್ ಮರುಜಾರಿಯಾದ ರಾಜ್ಯಗಳ ಅಭಿಪ್ರಾಯವಾಗಿದೆ.












Click it and Unblock the Notifications