Government employee: ಫೆ. 27ರ ಸಮ್ಮೇಳನ, ಈ ಮಾಹಿತಿ ತಿಳಿಯಿರಿ
ಬೆಂಗಳೂರು, ಫೆಬ್ರವರಿ 26; ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ಮತ್ತು ಆಡಳಿತದಲ್ಲಿ ಕಾರ್ಯಕ್ಷಮತೆ ಕಾರ್ಯಾಗಾರವನ್ನು ಫೆಬ್ರವರಿ 27ರಂದು ಆಯೋಜನೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಮಹಾ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.
ಸುಮಾರು 2 ಲಕ್ಷ ಸರ್ಕಾರಿ ನೌಕರರು ಈ ಮಹಾ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಸರ್ಕಾರಿ ನೌಕರರಿಗೆ ರಜೆಯನ್ನು ಸಹ ಘೋಷಣೆ ಮಾಡಲಾಗಿದೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಈ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಸರ್ಕಾರಿ ನೌಕರರಿಗೆ ಮಾಹಿತಿಯನ್ನು ನೀಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ನೌಕರರು ಆಗಮಿಸಿ ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದೆ.
ದಿನಾಂಕ 27/02/2024ರ ಮಂಗಳವಾರ ಬೆಳಗ್ಗೆ 10.30ಕ್ಕೆ ಕೃಷ್ಣ ವಿಹಾರ, ಗೇಟ್ ನಂ.1, ಮೇಕ್ರಿ ಸರ್ಕಲ್ ಹತ್ತಿರ, ಅರಮನೆ ಮೈದಾನ, ಬೆಂಗಳೂರು ಇಲ್ಲಿ ಮಹಾ ಸಮ್ಮೇಳನ ನಡೆಯಲಿದೆ. ಇದರಲ್ಲಿ ಪಾಲ್ಗೊಳ್ಳುವ ರಾಜ್ಯದ ಎಲ್ಲಾ ಅಧಿಕಾರಿ/ ನೌಕರರ ಆದ್ಯ ಗಮನಕ್ಕೆ ಎಂದು ಪ್ರಕಟಣೆ ಹೊರಡಿಸಲಾಗಿದೆ.
ಸರ್ಕಾರಿ ನೌಕರರಿಗೆ ಮಾಹಿತಿ
* ದಿನಾಂಕ 27/02/2024ರ ಮಂಗಳವಾರ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನದಲ್ಲಿ ಹಾಜರಾಗುವ ಎಲ್ಲಾ ನೌಕರರು ಬೆಳಗ್ಗೆ 10ರ ಒಳಗಾಗಿ ಉಪಹಾರ ಮುಗಿಸಿಕೊಂಡು ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಹಾಜರಿರಬೇಕು.
* ಬೆಳಗ್ಗೆ 10.30ಕ್ಕೆ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್ ಮತ್ತು ಖ್ಯಾತ ಹೃದ್ರೋಗ ತಜ್ಞ ಡಾ. ಸಿ. ಎನ್. ಮಂಜುನಾಥ್ ಅವರು ಕಾರ್ಯಾಗಾರದಲ್ಲಿ 'ವಿಶೇಷ ಉಪನ್ಯಾಸ ನೀಡಲಿದ್ದಾರೆ.
* ಬೆಳಗ್ಗೆ 11.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
* ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಕಾರ್ಯಕ್ರಮದಲ್ಲಿ ನೌಕರರಿಗೆ ಆಶಯ ನುಡಿಗಳನ್ನಾಡಲಿದ್ದಾರೆ.
* ಮಧ್ಯಾಹ್ನ 1.30ರ ನಂತರ ಲಘು ಭೋಜನ ವ್ಯವಸ್ಥೆ ಮಾಡಲಾಗಿದೆ.
* ಕಾರ್ಯಕ್ರಮ ಮುಗಿದ ನಂತರ ಭಾಗವಹಿಸಿದ ಸರ್ಕಾರಿ ನೌಕರರಿಗೆ ಮಾತ್ರ ಸ್ಥಳದಲ್ಲಿಯೇ ಹಾಜರಾತಿ ಪ್ರಮಾಣ ಪತ್ರವನ್ನು ನೀಡಲಾಗುವುದು. ಯಾವುದೇ ಕಾರಣಕ್ಕೂ ಹಾಜರಾತಿ ಪ್ರಮಾಣ ಪತ್ರಗಳನ್ನು ಕಾರ್ಯಕ್ರಮದಲ್ಲಿ ಭಾಗವಹಿಸದೇ ಇರುವವರಿಗೆ ನೀಡಲಾಗುವುದಿಲ್ಲ.
* ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಬಸ್‌ಗಳಿಗೆ ಪ್ರತ್ಯೇಕವಾಗಿ ಸರ್ಕಸ್ ಮೈದಾನ, ಜಯಮಹಲ್ ರಸ್ತೆ, ಟಿ.ವಿ. ಟವರ್ ಎದುರು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
* ದ್ವಿಚಕ್ರ ವಾಹನಗಳು ಮತ್ತು ಲಘು ವಾಹನಗಳಿಗೆ ತ್ರಿಪುರವಾಸಿನಿ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಸಾಂದರ್ಭಿಕ ರಜೆ ಮಾಹಿತಿ: ಅರಮನೆ ಆವರಣದಲ್ಲಿ ನಡೆಯಲಿರುವ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನದಲ್ಲಿ ಭಾಗವಹಿಸಲು ಇಚ್ಛಿಸುವ ಅಧಿಕಾರಿ/ ಸಿಬ್ಬಂದಿಗಳಿಗೆ ಸುತ್ತೋಲೆ ದಿನಾಂಕ 14/02/2024ರಂತೆ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲಾಗಿದೆ.
ನಿಗಮ-ಮಂಡಳಿ, ನಗರ ಪಾಲಿಕೆಗಳು, ಪ್ರಾಧಿಕಾರಗಳು, ಸ್ವಾಯತ್ತ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಸಮ ಸಂಖ್ಯೆಯ ಸುತ್ತೋಲೆ ದಿನಾಂಕ 14/02/2024ರಲ್ಲಿ ತಿಳಿಸಿರುವ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುವ ಕುರಿತು ಆಯಾಯ ಸಂಸ್ಥೆಯು ತಮ್ಮ ಹಂತದಲ್ಲಿ ಪರಿಶೀಲಿಸಿ, ಸೂಕ್ತ ನಿರ್ಧಾರ ತೆಗೆದುಕೊಳ್ಳತಕ್ಕದ್ದು.
ಸರ್ಕಾರಿ ನೌಕರರು ಮೂರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಸಮ್ಮೇಳನವನ್ನು ನಡೆಸುತ್ತಿದ್ದಾರೆ. ಇವುಗಳಲ್ಲಿ ಪ್ರಮುಖ ಬೇಡಿಕೆ ರಾಜ್ಯ 7ನೇ ವೇತನ ಆಯೋಗದಿಂದ ಶೀಘ್ರ ವರದಿ ಪಡೆದು ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳನ್ನು ಪೂರ್ಣ ಪ್ರಮಾಣದಲ್ಲಿ ಪರಿಷ್ಕರಿಸಿ ಆದೇಶ ಹೊರಡಿಸುವುದು. ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೂ ಮೊದಲೇ ಆದೇಶ ಪ್ರಕಟಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ.
ಉಳಿದಂತೆ ಹೊಸ ಪಿಂಚಣಿ ಯೋಜನೆ ರದ್ದು ಮಾಡಿ ದಿನಾಂಕ 1/4/2006ಕ್ಕಿಂತ ಮೊದಲು ಜಾರಿಯಲ್ಲಿದ್ದ ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಬೇಕು. ಪಂಜಾಬ್, ರಾಜಸ್ಥಾನ, ಛತ್ತೀಸ್‌ಗಢ್, ಜಾರ್ಖಂಡ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಹಳೆ ಪಿಂಚಣಿ ಯೋಜನೆ ಮರು ಜಾರಿಗೆ ತಂದಿರುವಂತೆ ಕರ್ನಾಟಕದಲ್ಲಿಯೂ ತರಬೇಕು ಎಂಬುದು ಬೇಡಿಕೆಯಾಗಿದೆ.
ಮೂರನೇ ಬೇಡಿಕೆ ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸಬೇಕು ಎಂಬುದಾಗಿದೆ. ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ನಗದು ರಹಿತ ಚಿಕಿತ್ಸೆ ನೀಡುವ ಯೋಜನೆ ಇದಾಗಿದೆ.












Click it and Unblock the Notifications