Government Employee; ಹಾಜರಾತಿ ಪ್ರಮಾಣ ಪತ್ರದ ಮಾಹಿತಿ
ಬೆಂಗಳೂರು, ಫೆಬ್ರವರಿ 28; ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ಮತ್ತು ಆಡಳಿತದಲ್ಲಿ ಕಾರ್ಯಕ್ಷಮತೆ ಕಾರ್ಯಾಗಾರವನ್ನು ಆಯೋಜನೆ ಮಾಡಿತ್ತು.
ಫೆಬ್ರವರಿ 27ರ ಮಂಗಳವಾರ ಅರಮನೆ ಮೈದಾನದಲ್ಲಿ ನಡೆದ ಮಹಾ ಸಮ್ಮೇಳನ ಯಶಸ್ವಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಮಹಾ ಸಮ್ಮೇಳನದಲ್ಲಿ ಪಾಲ್ಗೊಂಡು 7ನೇ ವೇತನ ಆಯೋಗದ ವರದಿ ಜಾರಿ ಕುರಿತು ಭರವಸೆ ನೀಡಿದ್ದಾರೆ.

ಈ ಸಮ್ಮೇಳನದ ಬಳಿಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ಪ್ರಕಟಣೆಯೊಂದನ್ನು ಹೊರಡಿಸಿದ್ದು, ಗೌರವಾನ್ವಿತ ತಾಲ್ಲೂಕು, ಯೋಜನಾ ಶಾಖೆಗಳ ಅಧ್ಯಕ್ಷರುಗಳು ಮತ್ತು ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರುಗಳ ಆದ್ಯ ಗಮನಕ್ಕೆ ಮಾಹಿತಿಯೊಂದನ್ನು ನೀಡಿದ್ದಾರೆ.
ಹಾಜರಾತಿ ಪ್ರಮಾಣ ಪತ್ರ: ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ಹಾಗೂ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಜಿಲ್ಲೆ, ತಾಲ್ಲೂಕು ಮತ್ತು ಯೋಜನಾ ಶಾಖೆಗಳ ಅಧಿಕಾರಿ/ ನೌಕರರಿಗೆ ಹಾಜರಾತಿ ಪ್ರಮಾಣ ಪತ್ರಗಳನ್ನು ಸಂಬಂಧಿಸಿದ ಜಿಲ್ಲಾಧ್ಯಕ್ಷರುಗಳಿಗೆ ನೀಡಲಾಗಿದೆ.
ತಾಲ್ಲೂಕು ಮತ್ತು ಯೋಜನಾ ಶಾಖೆಗಳ ಅಧ್ಯಕ್ಷರುಗಳು ತಮ್ಮ ಜಿಲ್ಲಾಧ್ಯಕ್ಷರ ಬಳಿ ಇರುವ ಹಾಜರಾತಿ ಪ್ರಮಾಣ ಪತ್ರಗಳನ್ನು ಪಡೆದುಕೊಂಡು ತಾವು ಕರೆತಂದಿದ್ದ ನೌಕರರಿಗೆ ವಿತರಿಸುವುದು ಎಂದು ತಿಳಿಸಲಾಗಿದೆ.
ಬೆಂಗಳೂರು ನಗರದಿಂದ ಭಾಗವಹಿಸಿದ್ದ ಅಧಿಕಾರಿ/ ನೌಕರರಿಗೆ ಹಾಜರಾತಿ ಪ್ರಮಾಣ ಪತ್ರಗಳನ್ನು ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರುಗಳು ಸಂಘದಿಂದ ಪಡೆದುಕೊಂಡು ತಮ್ಮ ಇಲಾಖೆಯ ಅಧಿಕಾರಿ ನೌಕರರಿಗೆ ವಿತರಿಸುವುದು ಎಂದು ಪ್ರಕಟಣೆ ಹೇಳಿದೆ.
ಸಮ್ಮೇಳನದಲ್ಲಿ ಭಾಗವಹಿಸಿದ್ದ ಯಾವುದೇ ಅಧಿಕಾರಿ/ ನೌಕರರು ಹಾಜರಾತಿ ಪ್ರಮಾಣ ಪತ್ರದಿಂದ ವಂಚಿತರಾಗದಂತೆ ಗಮನಹರಿಸುವುದು ಮತ್ತು ಅಂತಹ ಯಾವುದೇ ದೂರುಗಳಿಗೆ ಅವಕಾಶವಿಲ್ಲದಂತೆ ಎಲ್ಲರಿಗೂ ಹಾಜರಾತಿ ಪ್ರಮಾಣ ಪತ್ರಗಳನ್ನು ತಲುಪಿಸುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸರ್ಕಾರಿ ನೌಕರರು ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಿ ಆದೇಶಿಸಲಾಗಿತ್ತು. ಈ ಕುರಿತು ವಿಮಲಾಕ್ಷಿ. ಬಿ ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಆಸು-ತಪಾಸಣೆ-ಸ್ವೀಮರ) ಸುತ್ತೋಲೆ ಹೊರಡಿಸಿದ್ದರು.
ಈ ಸುತ್ತೋಲೆಯಲ್ಲಿ ಸಮ್ಮೇಳನದಲ್ಲಿ ಭಾಗವಹಿಸುವ ರಾಜ್ಯ ಸರ್ಕಾರಿ ನೌಕರರಿಗೆ ಮಾತ್ರ ಸೀಮಿತಗೊಳಿಸಿ ಬೆಂಗಳೂರು ನಗರ ಜಿಲ್ಲೆಯ ಅಧಿಕಾರಿ/ ನೌಕರರಿಗೆ ದಿನಾಂಕ 27/02/2024ರಂದು ಒಂದು ದಿನ ಹಾಗೂ ಇತರ ಜಿಲ್ಲೆಗಳ ಅಧಿಕಾರಿ/ ನೌಕರರಿಗೆ ಪ್ರಯಾಣ ದಿನಗಳೂ ಸೇರಿದಂತೆ ದಿನಾಂಕ 27/02/2024 ಮತ್ತು 28/02/2024 ರಂದು 2 ದಿನಗಳ ವಿಶೇಷ ಸಾಂದರ್ಭಿಕ ರಜೆಯನ್ನು ಷರತ್ತಿಗೊಳಪಟ್ಟು ಮಂಜೂರು ಮಾಡಲಾಗಿದೆ ಎಂದು ಸ್ಪಷ್ಟಪಡಿಸಲಾಗಿತ್ತು.
ಅಲ್ಲದೇ ಸಮ್ಮೇಳನದಲ್ಲಿ ಭಾಗವಹಿಸಲು ಇಚ್ಛಿಸುವ ಸರ್ಕಾರಿ ನೌಕರರು ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು. ಸದರಿ ಸಮ್ಮೇಳನದಲ್ಲಿ ಭಾಗವಹಿಸಿದ ಬಗ್ಗೆ ಅಧಿಕೃತ ಹಾಜರಾತಿ ಪತ್ರವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಅಥವಾ ಇವರಿಂದ ನಾಮನಿರ್ದೇಶನ ಹೊಂದಿದ ಅಧಿಕಾರಿಗಳಿಂದ ಪಡೆದು ಒದಗಿಸಬೇಕು ಎಂದ ಷರತ್ತು ಹಾಕಲಾಗಿತ್ತು.
ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ಮತ್ತು ಆಡಳಿತದಲ್ಲಿ ಕಾರ್ಯಕ್ಷಮತೆ ಕಾರ್ಯಾಗಾರ ಸಂಪೂರ್ಣ ಯಶಸ್ವಿಯಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ಪ್ರಕಟಣೆಯಲ್ಲಿ ಹೇಳಿದ್ದಾರೆ. ಈ ಕರಿತು ಪ್ರಕಟಣೆ ಹೊರಡಿಸಿರುವ ಅವರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನವನ್ನು 2 ಲಕ್ಷ ನೌಕರರು ಸೇರಿ ಅತ್ಯಂತ ಅದ್ಭುತವಾಗಿ ಯಶಸ್ವಿಗೊಳಿಸಿದ ರಾಜ್ಯದ ಎಲ್ಲಾ ಸರ್ಕಾರಿ ನೌಕರರಿಗೆ, ನಿಗಮ ಮಂಡಳಿ, ಪ್ರಾಧಿಕಾರದ ಸ್ವಾಯತ್ತ ಸಂಸ್ಥೆ, ನಗರ-ಸ್ಥಳೀಯ ಸಂಸ್ಥೆಗಳು, ಅನುದಾನಿತ, ವಿಶ್ವವಿದ್ಯಾಲಯದ ಸಮಸ್ತ ನೌಕರರಿಗೆ ತುಂಬುಹೃದಯದ ಧನ್ಯವಾದಗಳು ಎಂದು ಹೇಳಿದ್ದಾರೆ.
ಸಮ್ಮೇಳನದ ಯಶಸ್ಸು ತಮ್ಮದಾಗಿದ್ದು, ಮುಂದಿನ ದಿನಗಳಲ್ಲಿಯೂ ಸಹ ತಾವು ಇದೇ ರೀತಿ ಸಂಘಟನೆಯೊಂದಿಗೆ ಇರುವ ಸೌಭಾಗ್ಯ ತಮ್ಮದಾಗಲಿ. ಇಂದಿನ ಸಂಘದ ಬೇಡಿಕೆಗಳಿಗೆ ಸರ್ಕಾರ ನಿಗದಿತ ಅವಧಿಯಲ್ಲಿ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳದೆ ಇದ್ದಲ್ಲಿ ಸಂಘಟನೆ ಮುಂದಿನ ತೀರ್ಮಾನವನ್ನು ತೆಗೆದುಕೊಳ್ಳಲಿದೆ.
ಈ ಸಮ್ಮೇಳನದ ಯಶಸ್ಸಿಗೆ ಅಹರ್ನಶಿ ದುಡಿದ ಜಿಲ್ಲಾಧ್ಯಕ್ಷರಿಗೆ, ತಾಲ್ಲೂಕು ಅಧ್ಯಕ್ಷರಿಗೆ, ರಾಜ್ಯ ಮತ್ತು ಜಿಲ್ಲಾ ಸಂಘದ ಪದಾಧಿಕಾರಿಗಳಿಗೆ, ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರಿಗೆ, ವೃಂದ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಮ್ಮೇಳನದ ಯಶಸ್ಸಿಗೆ ಕೈಜೋಡಿಸಿದ ಎಲ್ಲರಿಗೂ ತುಂಬುಹೃದಯದ ಧನ್ಯವಾದಗಳನ್ನು ತಿಳಿಸಿದ್ದಾರೆ.











Click it and Unblock the Notifications