ಪೋಷಕರೇ ಎಚ್ಚರ.. ಎಚ್ಚರ.. ರಾಜ್ಯದಲ್ಲಿನ 1695 ಅನಧಿಕೃತ ಶಾಲೆಗಳಿಗೆ ಬೀಗ ಹಾಕಲು ಸರ್ಕಾರ ನಿರ್ಧಾರ
ಇತ್ತೀಚಿನ ದಿನಗಳಲ್ಲಿ ವಿದ್ಯೆ ಅನ್ನೋದು ಕಮರ್ಷಿಯಲ್ ಆಗುತ್ತಿದೆ. ಹೀಗಾಗಿ ನಗರದ ಯಾವುದೇ ಭಾಗದಲ್ಲಿ ನೋಡಿದರೂ ಸರ್ಕಾರಿ ಶಾಲೆಗಳಿಗಿಂತ ಖಾಸಗಿ ಶಾಲೆಗಳೇ ಹೆಚ್ಚಾಗಿ ಕಾಣುತ್ತಿವೆ. ಇದರಲ್ಲಿ ಅಧಿಕೃತವಾಗಿ ನಡೆಸುತ್ತಿರುವುದು ಒಂದು ಕಡೆಯಾದರೆ, ಶಿಕ್ಷಣ ಇಲಾಖೆಯ ಅನುಮತಿಯನ್ನೇ ಪಡೆಯದೇ ಶಿಕ್ಷಣ ನೀಡುತ್ತಿರುವ ಶಾಲೆಗಳು ಮತ್ತೊಂದು ಕಡೆಯಿವೆ.
ಹೀಗೆ ಇಲಾಖೆ ಅನುಮತಿ ಇಲ್ಲದೆ ಸದ್ಯ ರಾಜ್ಯದಲ್ಲಿ 1695 ಶಾಲೆಗಳು ನಡೆಯುತ್ತಿದ್ದು, ಇದಕ್ಕೆ ಬ್ರೇಕ್ ಹಾಕಬೇಕು ಅಂತಾ ಪೋಷಕರು ಒತ್ತಾಯ ಮಾಡುತ್ತಿದ್ದಾರೆ. ಇದಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಮುಂದಾಗಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಖಾಸಗಿ ಶಾಲಾ ಆಡಳಿತ ಮಂಡಳಿಗಳ ಜೊತೆ ಸಭೆ ನಡೆಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯಾದ್ಯಂತ ಖಾಸಗಿ ಶಾಲೆಗಳ ಪ್ರತಿನಿಧಿಗಳು ಭಾಗವಹಿಸಿದ್ದು, ಹತ್ತಾರು ವಿಚಾರಗಳ ಕುರಿತು ಚರ್ಚೆ ನಡೆಯಿತು. ಆದರೂ ಅನಧಿಕೃತ ಶಾಲೆಗಳ ವಿಚಾರವೇ ಹೆಚ್ಚು ಚರ್ಚೆಯಾಯಿತು.

ಇಲಾಖೆ ಅನುಮತಿಯಿಲ್ಲದೆ ನಡೆಯುತ್ತಿರುವ ಶಾಲೆಗಳು
1. ರಾಜ್ಯದಲ್ಲಿ ಇರುವ ಅನಧಿಕೃತ ಶಾಲೆಗಳು - 1695
2. ಅನುಮತಿ ಇಲ್ಲದೆ ಉನ್ನತೀಕರಣ ಮಾಡಿರುವ ಶಾಲೆಗಳು - 72
3. ಇತರೆ ಪಠ್ಯ ಬೋಧನೆ ಮಾಡುತ್ತಿರುವ ಶಾಲೆಗಳು - 143
4. ವಿಭಾಗ ಬದಲಾವಣೆ ಮಾಡಿರುವ ಶಾಲೆಗಳು - 631
5. ಅನುಮತಿ ಇಲ್ಲದೆ ಸ್ಥಳಾಂತರ ಮಾಡಿರುವ ಶಾಲೆಗಳು - 190
6. ಅನುಮತಿ ಪಡೆಯದೇ ಹಸ್ತಾಂತರ ಮಾಡಿರುವ ಶಾಲೆಗಳು -15
7. ಕೇಂದ್ರ ಪಠ್ಯದ ಬದಲು ರಾಜ್ಯಪಠ್ಯ ಬೋಧನೆ ಮಾಡುತ್ತಿರುವ ಶಾಲೆಗಳು - 68
8. ರಾಜ್ಯ ಪಠ್ಯ ಅನುಮತಿ ಪಡೆದು ಇತರೆ ಪಠ್ಯ ಬೋಧನೆ ಮಾಡುತ್ತಿರುವ ಶಾಲೆಗಳು - 494
ಸದ್ಯಕ್ಕೆ ಶಾಲೆಗಳು ಆರಂಭಗೊಂಡಿವೆ, ಹೀಗಾಗಿ ತಕ್ಷಣದಲ್ಲಿ ಇಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ. ಹಂತ ಹಂತವಾಗಿ ಇದರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಅಂತಾ ಹೇಳಿರುವ ಶಿಕ್ಷಣ ಸಚಿವರು, ಮುಂದಿನ ದಿನಗಳಲ್ಲಿ ಹೊಸದಾಗಿ ಅನಧಿಕೃತ ಶಾಲೆಗಳು ಕಂಡು ಬಂದರೆ ಅದಕ್ಕೆ ಬಿಇಓಗಳೇ ನೇರ ಹೊಣೆ ಅಂತಾ ಎಚ್ಚರಿಕೆ ಕೊಟ್ಟರು.
ಖಾಸಗಿ ಶಾಲೆ ಆಡಳಿತ ಮಂಡಳಿಗಳು ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಅನುದಾನ ಹೆಚ್ಚಳ ನೀಡುವ ವಿಚಾರವನ್ನು ಪ್ರಸ್ತಾಪ ಮಾಡಿದ್ದು, ಶೀಘ್ರದಲ್ಲೇ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದರು.












Click it and Unblock the Notifications