ಬಯಸಿದ ನಿವಾಸ ನೀಡದ ಸರಕಾರ, ನೋ ಎಂದ ಯಡಿಯೂರಪ್ಪ
ಬೆಂಗಳೂರು, ಜುಲೈ 1: ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ಸುಮಾರು ಒಂದು ತಿಂಗಳ ನಂತರ, ಸಚಿವರಿಗೆ ಮತ್ತು ವಿರೋಧ ಪಕ್ಷದ ನಾಯಕರಿಗೆ ನಿವಾಸ ಮಂಜೂರು ಮಾಡಿ, ಸರಕಾರ ಆದೇಶ ಹೊರಡಿಸಿದೆ.
ವಿಧಾನಸಭಾ ಪ್ರತಿಪಕ್ಷದ ನಾಯಕ ಮತ್ತು ಮಾಜಿ ಸಿಎಂ ಯಡಿಯೂರಪ್ಪನವರು ಬಯಸಿದ್ದ ಬಂಗಲೆಯನ್ನು ಸರಕಾರ ನೀಡದೇ, ಪಕ್ಕದ ನಿವಾಸವನ್ನು ಅವರಿಗೆ ನೀಡಲಾಗಿದೆ. ಹಾಗಾಗಿ, ತಾನು ಸ್ವಂತ ಮನೆಯಲ್ಲೇ ಉಳಿಯುವುದಾಗಿ ಯಡಿಯೂರಪ್ಪ ಹೇಳಿದ್ದಾರೆ.
ರೇಸ್ ಕೋರ್ಸ್ ರಸ್ತೆಯಲ್ಲಿರುವ ಎರಡನೇ ನಂಬರ್ ಮನೆಯನ್ನು ಯಡಿಯೂರಪ್ಪ ಬಯಸಿದ್ದರು, ಆದರೆ ಸರಕಾರ ಅದೇ ರಸ್ತೆಯ ನಾಲ್ಕನೇ ನಂಬರ್ ಮನೆಯನ್ನು ನೀಡಿದೆ. ಯಡಿಯೂರಪ್ಪ ಎರಡನೇ ನಂಬರ್ ಮನೆಯಿಂದ ಕಾರ್ಯನಿರ್ವಹಿಸಲು ಬಯಸಿದ್ದರು.

ಇನ್ನು ಯು ಟಿ ಖಾದರ್, ಜಮೀರ್ ಅಹಮದ್, ಪುಟ್ಟರಂಗ ಶೆಟ್ಟಿ ಮತ್ತು ಶಿವಾನಂದ ಪಾಟೀಲ್ ಅವರಿಗೆ ಜಯಮಹಲ್ ಬಡಾವಣೆಯಲ್ಲಿ ವಸತಿಯನ್ನು ನೀಡಲಾಗಿದೆ. ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ ಮತ್ತು ಸಾರಿಗೆ ಸಚಿವ ಡಿ ಸಿ ತಮ್ಮಣ್ಣಗೆ ಸ್ಯಾಂಕಿ ರಸ್ತೆಯಲ್ಲಿನ ಸರಕಾರೀ ಬಂಗಲೆ ನೀಡಲಾಗಿದೆ.
ಡಿ ಕೆ ಶಿವಕುಮಾರ್ ಗೆ ಕ್ರೆಸೆಂಟ್ ರಸ್ತೆಯಲ್ಲಿ, ಕೆ ಜೆ ಜಾರ್ಜ್ ಮತ್ತು ರೇವಣ್ಣಗೆ ಕುಮಾರಕೃಪ ಲೇಔಟ್ ನಲ್ಲಿ ವಸತಿಯನ್ನು ನೀಡಲಾಗಿದೆ. ಆರ್ ವಿ ದೇಶಪಾಂಡೆ, ಸಾ.ರಾ. ಮಹೇಶ್, ರಮೇಶ್ ಜಾರಕಿಹೊಳಿ, ಬಂಡೆಪ್ಪ ಕಾಶೆಂಪುರ ಸೇರಿದಂತೆ ಹಲವು ಸಚಿವರಿಗೆ ನಿವಾಸ ಮಂಜೂರು ಮಾಡಿ ಸರಕಾರ ಶನಿವಾರ (ಜೂ 30) ಆದೇಶ ಹೊರಡಿಸಿದೆ.












Click it and Unblock the Notifications