Get Updates
Get notified of breaking news, exclusive insights, and must-see stories!

KSRTC: ಸಾರಿಗೆ ನಿಗಮಗಳಿಗೆ 2 ಸಾವಿರ ಕೋಟಿ ಸಾಲ ಮಾಡಲು ಒಪ್ಪಿಗೆ, ಯಾವ ನಿಗಮಕ್ಕೆ ಎಷ್ಟು

ಬೆಂಗಳೂರು, ಜನವರಿ, 01 : ಕರ್ನಾಟಕದ ನಾಲ್ಕೂ ಸಾರಿಗೆ ನಿಗಮಗಳ ನೌಕರರು ಡಿಸೆಂಬರ್ 31ರಿಂದ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಘೋಷಣೆ ಮಾಡಿದ್ದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮುಷ್ಕರಕ್ಕೆ ಕರೆ ನೀಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಜೊತೆಗಿನ ಮಾತುಕತೆ ಬಳಿಕ ಮುಷ್ಕರದ ಕರೆಯನ್ನು ಮುಂದೂಡಿಕೆ ಮಾಡಲಾಗಿದೆ. ಈಗ ಸರ್ಕಾರ ನೌಕರರ ಬೇಡಿಕೆ ಈಡೇರಿಸಲು ಮುಂದಾಗಿದೆ.

ನೌಕರರ ಬೇಡಿಕೆ ಈಡೇರಿಸಲು ಕರ್ನಾಟಕ ಸರ್ಕಾರ ಸಾಲದ ಮೊರೆ ಹೋಗಿದೆ. ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ (ಪುಷ್ಪ ವಿ. ಎಸ್. ಸರ್ಕಾರದ ಅಧೀನ ಕಾರ್ಯದರ್ಶಿ, ಸಾರಿಗೆ ಇಲಾಖೆ ಆದೇಶವನ್ನು ಹೊರಡಿಸಿದ್ದಾರೆ. 2000 ಕೋಟಿ ರೂ. ಸಾಲ ಮಾಡಲು ಒಪ್ಪಿಗೆ ನೀಡಲಾಗಿದೆ. ಈ ಆದೇಶ ನಾಲ್ಕು ಸಾರಿಗೆ ಸಂಸ್ಥೆಗಳಿಗೆ ಭವಿಷ್ಯನಿಧಿ ಬಾಕಿ ಹಾಗೂ ಇಂಧನ ಬಾಕಿ ಹೊಣೆಗಾರಿಕೆಯನ್ನು ಪಾವತಿಸಲು ಸರ್ಕಾರದ ಖಾತರಿ/ ಗ್ಯಾರಂಟಿಯೊಂದಿಗೆ ಹಣಕಾಸು ಸಂಸ್ಥೆಗಳಿಂದ ಸಾಲವನ್ನು ಪಡೆಯಲು ಅನುಮೋದನೆ ನೀಡುವ ಕುರಿತು ಎಂಬ ವಿಷಯ ಒಳಗೊಂಡಿದೆ. ವಿವಿಧ ಪತ್ರಗಳನ್ನು ಉಲ್ಲೇಖಿಸಲಾಗಿದೆ.

Government Approved For 2000 Crore Loan For Transport Corporations

ಆದೇಶ ಪ್ರಸ್ತಾವನೆಯನ್ನು ಪರಿಶೀಲಿಸಿ ಸರ್ಕಾರವು ಷರತ್ತುಬದ್ಧವಾಗಿ ಈ ಆದೇಶ ಹೊರಡಿಸಿದೆ ಎಂದು ಹೇಳಿದೆ. ಆದೇಶದಲ್ಲಿ ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳು ನವೆಂಬರ್- 2024ರ ಅಂತ್ಯಕ್ಕೆ ಬಾಕಿ ಉಳಿಸಿಕೊಂಡಿರುವ ಶಾಸನಬದ್ಧ ಪಾವತಿಯಾದ ಭವಿಷ್ಯ ನಿಧಿ ಹಾಗೂ ಇಂಧನದ ಬಾಕಿ ಮೊತ್ತ ಪಾವತಿಸಲು ಒಟ್ಟು ರೂ. 2000 ಕೋಟಿ ಮೊತ್ತದ ಸಾಲವನ್ನು ಸರ್ಕಾರದ ಖಾತರಿ/ ಗ್ಯಾರಂಟಿಯೊಂದಿಗೆ ಹಣಕಾಸು ಸಂಸ್ಥೆಗಳಿಂದ ಪಡೆಯಲು ಷರತ್ತುಗಳಿಗೊಳಪಟ್ಟು ಅನುಮೋದನೆ ನೀಡಿ ಆದೇಶಿಸಲಾಗಿದೆ ಎಂದು ಹೇಳಿದೆ.

ಈ 2 ಸಾವಿರ ಕೋಟಿ ರೂ.ಗಳಲ್ಲಿ ಕ.ರಾ.ರ.ಸಾ.ನಿಗಮ 623.80 ಕೋಟಿ, ಬೆಂ.ಮ.ಸಾ.ಸಂಸ್ಥೆ 589.20 ಕೋಟಿ, ವಾ.ಕ.ರ.ಸಾ.ಸಂಸ್ಥೆ 646 ಕೋಟಿ ಮತ್ತು ಕ.ಕ.ರ.ಸಾ.ನಿಗಮಕ್ಕೆ 141 ಕೋಟಿ ರೂ. ಸಾಲ ಮಾಡಲು ಅನುಮತಿ ನೀಡಲಾಗಿದೆ. ಸದರಿ ಸಾಲದ ಮೊತ್ತವನ್ನು ಸಾರಿಗೆ ಸಂಸ್ಥೆಗಳಿಂದ ಮರುಪಾವತಿಸತಕ್ಕದ್ದು ಎಂದು ಷರತ್ತು ಹೇಳಿದೆ. ಸದರಿ ಮೊತ್ತವನ್ನು ಆದ್ಯತೆಯ ಮೇರೆಗೆ ಇಂಧನ ಬಾಕಿ ಪಾವತಿಸಲು ಬಳಸಿಕೊಳ್ಳತಕ್ಕದ್ದು. ನಾಲ್ಕು ಸಾರಿಗೆ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಕ್ರೋಢೀಕೃತ ಟೆಂಡರ್‌ ಅನ್ನು ಕರೆಯತಕ್ಕದ್ದು. ಈ ಕುರಿತು ಬಳಕೆ ಪ್ರಮಾಣ ಪತ್ರ ಮತ್ತು ಸಂಬಂಧಪಟ್ಟ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸತಕ್ಕದ್ದು ಎಂದು ಷರತ್ತಿನಲ್ಲಿ ತಿಳಿಸಲಾಗಿದೆ.

ಪ್ರಸ್ತಾವನೆ ಏನಿತ್ತು?: ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಇವರು ನಾಲ್ಕು ಸಾರಿಗೆ ನಿಗಮಗಳು ರಾಜ್ಯದ ಜನತೆಗೆ ಉತ್ತಮ ಗುಣಮಟ್ಟದ, ವ್ಯವಸ್ಥಿತ, ಸುರಕ್ಷಿತ ಹಾಗೂ ಮಿತವ್ಯಯದಲ್ಲಿ ಸಾರಿಗೆ ಸೇವೆಯನ್ನು ನೀಡುವಲ್ಲಿ ಸತತ ಪರಿಶ್ರಮವನ್ನು ವಹಿಸುತ್ತಿದ್ದು, ಸಂಸ್ಥೆಗಳ ಕಾರ್ಯಚರಣೆಯ ಸಮರ್ಪಕ ನಿರ್ವಹಣೆ ಹಾಗೂ 'ಶಕ್ತಿ' ಯೋಜನೆಯ ಅನುಷ್ಠಾನದಿಂದಾಗಿ ಸಂಸ್ಥೆಗಳ ಆದಾಯ ಗಳಿಕೆಯಲ್ಲಿ ಹೆಚ್ಚಳ ಉಂಟಾಗಿದ್ದರೂ ಸಹ, ನಿಗಮಗಳ ನಗದು ಒಳಹರಿವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ನಿಗಮಗಳು ಕಳೆದ ಹಲವಾರು ವರ್ಷಗಳಿಂದ ನಷ್ಟವನ್ನು ಅನುಭವಿಸುತ್ತಿರುತ್ತದೆ ಹಾಗೂ ನಗದು ಹರಿವಿನಲ್ಲಿ ಕೊರತೆ ಉಂಟಾಗಿರುತ್ತದೆ ಎಂದು ಪ್ರಸ್ತಾವನೆ ಹೇಳಿತ್ತು.

ನವೆಂಬರ್-2024 ಮಾಹೆಯ ಅಂತ್ಯದಲ್ಲಿದಂತೆ, ನಾಲ್ಕು ನಿಗಮಗಳಲ್ಲಿ ಭವಿಷ್ಯ ನಿಧಿ, ನಿವೃತ್ತಿ ನೌಕರರ ಉಪಧನ/ ರಜೆ ನಗದೀಕರಣ, ಸಿಬ್ಬಂದಿಗಳ ಬಾಕಿ (ತುಟ್ಟಿ ಭತ್ಯ ರಜೆ ನಗದೀಕರಣ), ಇಂಧನ, ಸರಬುರಾಜುದಾರರ ಬಾಕಿ, ಅಪಘಾತ ಪರಿಹಾರ ಪ್ರಕರಣಗಳು, ಇತರೆ ಹಾಗೂ ನಿವೃತ್ತರಿಗೆ ಪರಿಷ್ಕೃತ ಉಪಧನ, ರಜೆ ನಗದೀಕರಣ ಬಾಕಿ ಹಾಗೂ ಸಾಲದ ಹೊಣೆಗಾರಿಕೆಗಳು ಸೇರಿದಂತೆ ಒಟ್ಟು ರೂ. 6330.25 ಕೋಟೆಗಳ ಹೊಣೆಗಾರಿಕೆ ಬಾಕಿ ಕ್ರೋಡೀಕೃತವಾಗಿರುತ್ತದೆ. ಇದಕ್ಕೆ ಕಾರಣಗಳು

* ಇಂಧನ ವೆಚ್ಚ ಹಾಗೂ ಕಾಲಿಕವಾಗಿ ಹೆಚ್ಚಳವಾಗುತ್ತಿರುವ ತುಟ್ಟಿ ಭತ್ಯೆ ಹೆಚ್ಚಳದಿಂದಾಗಿ ಕಾರ್ಯಾಚರಣೆ ವೆಚ್ಚದಲ್ಲಿ ಏರಿಕೆ ಉಂಟಾಗಿದ್ದು ಇದಕ್ಕೆ ಅನುಗುಣವಾಗಿ ಪ್ರಯಾಣಿಕರ ದರದಲ್ಲಿ 2020 ರಿಂದ (ಬೆಮನಸಾ ಸಂಸ್ಥೆಯಲ್ಲಿ 2015 ರಿಂದ) ಹಾಗೂ ವಿಧ್ಯಾರ್ಥಿ ರಿಯಾಯಿತಿ ಪಾಸ್‌ಗಳ ದರದಲ್ಲಿ 2012 ಪರಿಷ್ಕರಣೆಯಾಗದೇ ಇರುವುದು.

* ದರ ಪರಿಷ್ಕರಣೆ ಹಿಂದೆ ಪ್ರತಿದಿನದ ಸರಾಸರಿ ಇಂಧನ ವೆಚ್ಚ ರೂ. 9.16ಕೋಟಿಗಳಿದ್ದು, ಪ್ರಸ್ತುತ ಪ್ರತಿದಿನದ ಸರಾಸರಿ ಇಂಧನ ವೆಚ್ಚ ರೂ. 13.21 ಕೋಟಿಗಳಾಗಿದ್ದು, ಪ್ರತಿದಿನದ ಇಂಧನ ವೆಚ್ಚದಲ್ಲಿ ರೂ. 4.05 ಕೋಟಿಗಳ ಹೆಚ್ಚಳವಾಗಿರುತ್ತದೆ.

* ದಿನಾಂಕ 01-03-2023 ರಿಂದ ಜಾರಿಗೊಳಿಸಿರುವ ಸಿಬ್ಬಂದಿಗಳ ವೇತನ ಪರಿಷ್ಕರಣೆಯಿಂದಾಗಿ ಉಂಟಾಗಿರುವ ಮಾಹೆಯಾನ ಹೆಚ್ಚುವರಿ ವೆಚ್ಚ ರೂ. 54.23 ಕೋಟಿಯನ್ನು ನಿಭಾಯಿಸಲು ವಿಶೇಷ ಅನುದಾನ ಬಿಡುಗಡೆಯಾಗದೇ ಇರುವುದು.

* ಕೋವಿಡ್ ಸಂದರ್ಭದಲ್ಲಿ ಸರ್ಕಾರವು ನಿವ್ವಳ ವೇತನ ಪಾವತಿಗಾಗಿ ಮಾತ್ರ ಅನುದಾನವನ್ನು ಬಿಡುಗಡೆ ಮಾಡಿದ್ದು, ಇದರಿಂದ ಒಟ್ಟು ವೇತನ ಹಾಗೂ ನಿವ್ವಳ ವೇತನದ ವ್ಯತ್ಯಾಸದ ಮೊತ್ತವು ಕ್ರೋಡೀಕರಣವಾಗಿದೆ.

ಈ ಕಾರಣಗಳಿಂದಾಗಿ ನಿಗಮಗಳ ಕಾರ್ಯಾಚರಣೆಗೆ ಅತ್ಯಗತ್ಯವಾದ ಸಿಬ್ಬಂದಿಗಳ ನಿವ್ವಳ ಜಿ.ಎಸ್.ಟಿ, ಪಿಂಚಣಿ, ಸಾಲ ವೇತನ, ಇಂಧನ ವೆಚ್ಚ ಶಾಸನ ಬದ್ಧ ಪಾವತಿಗಳಾದ ಮರುಪಾವತಿ ಹಾಗೂ ಇತರೆ ಅತ್ಯಗತ್ಯ ವೆಚ್ಚಗಳನ್ನು ಮಾತ್ರ ಪಾವತಿ ಮಾಡಲಾಗುತ್ತಿದ್ದು, ಭವಿಷ್ಯ ನಿಧಿ ವಂತಿಕೆ, ನಿವೃತ್ತ ನೌಕರರ ಉಪಧನ ಹಾಗೂ ಇತರೆ ಬಾಬು ಮೊತ್ತವನ್ನು ನಗದು ಕೊರತೆಯಿಂದಾಗಿ ಪಾವತಿ ಮಾಡಲು ಸಾದ್ಯವಾಗದೇ, ಬಾಕಿ ಹೊಣೆಗಾರಿಕೆಯಾಗಿ ಉಳಿಸಿಕೊಳ್ಳಲಾಗುತ್ತಿದೆ.

ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು, ಭವಿಷ್ಯ ನಿಧಿ ನ್ಯಾಸ ಮಂಡಳಿಯ 2022-23ನೇ ಸಾಲಿನ ಸಾರಿಗೆ ನಿಗಮಗಳು ನೌಕರರಿಂದ ಅನುಪಾಲನಾ ಲೆಕ್ಕಪರಿಶೋಧನೆ ಕೈಗೊಂಡಿದ್ದು, ಕಡಿತಗೊಳಿಸಲಾದ ಭವಿಷ್ಯ ನಿಧಿ ಮೊತ್ತವನ್ನು ಆಯಾ ತಿಂಗಳು ನ್ಯಾಸ ಮಂಡಳಿಗೆ ಜಮಾ ಮಾಡದೇ ಬಾಕಿ ಉಳಿಸಿಕೊಂಡಿರುವ ಬಗ್ಗೆ ಗಂಭೀರವಾಗಿ ಆಕ್ಷೇಪಿಸಿದ್ದು ಈ ಬಗ್ಗೆ ಕಾರಣ ಕೇಳುವ ಸೂಚನಾ ಪತ್ರವನ್ನು ಜಾರಿ ಮಾಡಿ, ಸೂಕ್ತ ವಿವರಣೆ/ ಸಮಜಾಯಿಷಿ ನೀಡುವಂತೆ ತಿಳಿಸಿರುತ್ತಾರೆ. ಆದಾಗ್ಯೂ, ಸದರಿ ವಿಷಯಕ್ಕೆ ಸಂಬಂಧಿಸಿದಂತೆ, ಭವಿಷ್ಯ ನಿಧಿ ಕಾಯ್ದೆ 1952ರ ಪ್ರಕಾರ ನಿಯಮಾವಳಿ ಉಲ್ಲಂಘನೆಯಾಗಿರುವುದರಿಂದ ಕೇಂದ್ರೀಯ ಭವಿಷ್ಯ ನಿಧಿ ಆಯುಕ್ತರ ಕಛೇರಿಯಿಂದ ಹೊರಡಿಸಿರುವ ಪ್ರಮಾಣಿತ ಕಾರ್ಯಚರಣೆ ವಿಧಾನಗಳ (Standard Operating Procedure) ಪ್ರಕಾರ ಸಾರಿಗೆ ನಿಗಮಗಳಿಗೆ ಮಂಜೂರಾಗಿರುವ ಭ.ನಿ ವಿನಾಯಿತಿಯನ್ನು ರದ್ದುಪಡಿಸುವ ಪ್ರಕ್ರಿಯೆ ಆರಂಭಿಸುವುದಾಗಿ ತಿಳಿಸಿರುತ್ತಾರೆ.

ಪ್ರಸ್ತುತ ಆಕರಿಸುತ್ತಿರುವ ಪ್ರಯಾಣಿಕರ ದರದಲ್ಲಿ ಕ್ರೋಡೀಕೃತ ಹೊಣೆಗಾರಿಕೆಯನ್ನು ಪಾವತಿಸಲು ಅವಕಾಶವಿರುವುದಿಲ್ಲ ಹಾಗೂ ನಿಗಮಗಳಲ್ಲಿ ಬೇರೆ ಯಾವುದೇ ಸಂಪನ್ಮೂಲಗಳೂ ಲಭ್ಯವಿಲ್ಲದೇ ಇರುವುದರಿಂದ ನವೆಂಬರ್ ಅಂತ್ಯಕ್ಕೆ ಬಾಕಿ ಇರುವ ಎಲ್ಲಾ ಹೊಣೆಗಾರಿಕೆಯನ್ನು ಸಂಪೂರ್ಣವಾಗಿ ಪಾವತಿ ಮಾಡಲು ಒಟ್ಟು ರೂ. 5527.46 ಕೋಟಿಗಳ ಅವಶ್ಯಕತೆಯಿದ್ದು, ಮುಖ್ಯವಾಗಿ ಭವಿಷ್ಯ ನಿಧಿ ಬಾಕಿ ಮೊತ್ತ ರೂ. 2901.53 ಕೋಟಿ ಹಾಗೂ ಇಂಧನದ ಬಾಕಿ ಮೊತ್ತ ರೂ. 827.37 ಕೋಟಿ ಹೀಗೆ ಒಟ್ಟು 3728.90 ಕೋಟಿಗಳ ಸಾಲದ ಅವಶ್ಯಕತೆ ಇರುತ್ತದೆ.

ಸರ್ಕಾರದ ಬೆಂಬಲಿತ ಸಾಲವನ್ನು ಪಡೆಯಲು ಮಂಡಳಿ ನಿರ್ದೇಶಕರ ಅನುಮೋದನೆಯನ್ನು ಮುಂಬರುವ ಮಂಡಳಿ ಸಭೆಯಲ್ಲಿ ಅನುಮೋದನೆ ಪಡೆದು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸುತ್ತಾ, ನಿಗಮಗಳು ಪಸ್ತುತ ಎದುರಿಸುತ್ತಿರುವ ಆರ್ಥಿಕ ಸಂಕಷ್ಟದಿಂದ ಹೊರಬರಲು ಹಾಗೂ ಶಾಸನಬದ್ಧ ಪಾವತಿಯಾದ ಭವಿಷ್ಯ ನಿಧಿ ಹಾಗೂ ಇಂಧನದ ಬಾಕಿ ಮೊತ್ತ ಪಾವತಿಸಲು ರೂ. 3728.90 ಕೋಟಿ ಸಾಲದ ಅವಶ್ಯಕತೆ ಇದ್ದು, ಸದರಿ ಸಾಲದ ಮರುಪಾವತಿಗೆ ತಗಲುವ ಅಸಲು ಮತ್ತು ಬಡ್ಡಿ ಮೊತ್ತವನ್ನು ಸರ್ಕಾರವು ಭರಿಸಲು ಕೋರಿ, ಸಂಸ್ಥೆಗಳಿಗೆ ಸರ್ಕಾರದ ಸರ್ವೀಸ್ ಲೋನ್ (Government Service Loan) ಅನ್ನು ಪಡೆಯಲು ಅನುಮತಿ ನೀಡುವಂತೆ ಪ್ರಸ್ತಾವನೆಯಲ್ಲಿ ಕೋರಲಾಗಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+