200 ಯುನಿಟ್ ವಿದ್ಯುತ್ ಫ್ರೀ; ಕರೆಂಟ್ ಬಿಲ್ ಸರಾಸರಿ ಲೆಕ್ಕಾಚಾರ ಮಾಡುವುದು ಹೇಗೆ? ಇಲ್ಲಿದೆ ತಿಳಿಯಿರಿ
ಬೆಂಗಳೂರು, ಜೂನ್ 02: ಕರ್ನಾಟಕ ವಿಧಾನಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದರೇ ನಮ್ಮ ಗ್ಯಾರಂಟಿ ಘೋಷಣೆಗಳನ್ನ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಭರವಸೆಯನ್ನ ನೀಡಿದ್ದು, ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಪಂಚ ಗ್ಯಾರಂಟಿಗಳಿಗೆ ರಾಜ್ಯ ಸರ್ಕಾರ ಅಸ್ತು ಎಂದಿದೆ.
ಮೊದಲ ಗ್ಯಾರಂಟಿ ಯೋಜನೆಯಾದ ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್‌ವರೆಗೂ ಉಚಿತ ವಿದ್ಯುತ್ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಆದರೆ, ಉಚಿತ ವಿದ್ಯುತ್ ನೀಡಲು ಒಂದಿಷ್ಟು ಷರತ್ತುಗಳನ್ನು ರಾಜ್ಯ ಸರ್ಕಾರ ವಿಧಿಸಿದೆ. ಉಚಿತ ವಿದ್ಯುತ್ ನೀಡಲು ವಾರ್ಷಿಕ ಸರಾಸರಿ ವಿದ್ಯುತ್ ಬಳಕೆಯನ್ನು ಆಧಾರವಾಗಿ ತೆಗೆದುಕೊಳ್ಳಲಾಗುವುದು ಎಂದು ಸಚಿವ ಸಂಪುಟ ಸಭೆಯ ಬಳಿಕ ನಡೆದ ಸುದ್ದಿಗೋಷ್ಟಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಹೌದು, ಉಚಿತ ವಿದ್ಯುತ್ ಯೋಜನೆಯೂ ಆಗಸ್ಟ್ ತಿಂಗಳಿನಿಂದ ಜಾರಿಗೆ ಬರಲಿದೆ. ಜುಲೈ ತಿಂಗಳ ವಿದ್ಯುತ್ ಬಿಲ್ ಅನ್ನು ಜನರು ಪಾವತಿಸುವಂತಿಲ್ಲ. ಆದರೆ, ಜುಲೈನಲ್ಲಿ ಬರುವ ಜೂನ್ ತಿಂಗಳ ವಿದ್ಯುತ್ ಬಿಲ್ ಅನ್ನು ಜನರು ಪಾವತಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಉಚಿತ ಕರೆಂಟ್ ಬಿಲ್ ಲೆಕ್ಕಾಚಾರ ಮಾಡಲಾಗುವುದು ಹೇಗೆ?
ಕಳೆದ 12 ತಿಂಗಳ ಸರಾಸರಿ ವಿದ್ಯುತ್ ಬಳಕೆಯನ್ನು ತೆಗೆದುಕೊಂಡು ಅದರ ಮೇಲೆ ಶೇ.10ರಷ್ಟು ಉಚಿತ ಇರುವಂತೆ ವಿದ್ಯುತ್ ಅನ್ನು ನೀಡುವುದಾಗಿ ಘೋಷಿಸಲಾಗಿದೆ. ಇನ್ನೂ ಉಚಿತ ವಿದ್ಯುತ್ ಯೋಜನೆ ನೀಡುವ ವೇಳೆ ಸರ್ಕಾರ ಕೆಲವು ಮಾನದಂಡಗಳನ್ನು ಅನುಸರಿಸುವುದಾಗಿ ಹೇಳಿದೆ.
ಇನ್ನೂ ಸರ್ಕಾರ 200 ಯುನಿಟ್ ಉಚಿತ ವಿದ್ಯುತ್ ಯೋಜನೆಯ ದುರ್ಬಳಕೆಯನ್ನು ತಡೆಯುವುದಕ್ಕೆ ಕಳೆದ 12 ತಿಂಗಳ ವಾರ್ಷಿಕ ವಿದ್ಯುತ್ ಬಳಕೆಯ ಸರಾಸರಿಯನ್ನು ತೆಗೆದುಕೊಂಡು ಅದರ ಮೇಲೆ ಶೇ.10ರಷ್ಟು ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಒಂದು ವೇಳೆ ವರ್ಷಕ್ಕೆ ನೀವು ಸರಾಸರಿ 120 ಯೂನಿಟ್ ವಿದ್ಯುತ್ ಬಳಸಿದ್ದರೆ ನಿಮಗೆ ಮುಂದೆ 132 ಯೂನಿಟ್‌ವರೆಗೂ ಉಚಿತ ವಿದ್ಯುತ್ ಅನ್ನು ಸರ್ಕಾರ ನೀಡಲಿದೆ. ಕಳೆದ 12 ತಿಂಗಳಲ್ಲಿ ನೀವು ಎಷ್ಟೇ ವಿದ್ಯುತ್ ಬಳಸಿದ್ದರೂ ಅದರ ಒಟ್ಟು ಸರಾಸರಿಯನ್ನು ತೆಗೆದುಕೊಂಡು ಅದರ ಸರಾಸರಿ ಆಧಾರದ ಮೇಲೆ ಲೆಕ್ಕಾಚಾರವನ್ನ ಹಾಕಿಕೊಳ್ಳಲಿದೆ. ಒಟ್ನಲಿ ನೀವು ಎಷ್ಟೇ ಯೂನಿಟ್ ವಿದ್ಯುತ್ ಬಳಸಿದ್ದರೂ, ಅದರ ಸರಾಸರಿ + ಶೇ.10ರಷ್ಟು ಯೂನಿಟ್ ಅನ್ನು ಮಾತ್ರ ಸರ್ಕಾರ ಉಚಿತವಾಗಿ ನೀಡುತ್ತದೆ.
ಉದಾಹರಣೆಗೆ ಹೇಳುವುದಾದರೇ ಕಳೆದ ಒಂದು ವರ್ಷದದಲ್ಲಿ ನೀವು ಪ್ರತಿ ತಿಂಗಳು 60+70+60+65+55+75+50+55+80+60+55+60 ಹೀಗೆ ಯೂನಿಟ್ ವಿದ್ಯುತ್ ಬಳಸಿರುತ್ತೀರಿ ಎಂದುಕೊಳ್ಳಿ. ಅಂದರೆ ಒಟ್ಟು 745 ಯೂನಿಟ್ ವಿದ್ಯುತ್ ಅನ್ನು ನೀವು ಒಂದು ವರ್ಷದಲ್ಲಿ ಬಳಸಿರುತ್ತೀರಿ. ಇದರ ಸರಾಸರಿ 62.08 ಯೂನಿಟ್ ವಿದ್ಯುತ್ ಆಗುತ್ತದೆ. ಅದರ ಮೇಲೆ ಶೇ. 10ರಷ್ಟು ಉಚಿತ ಎಂದರೆ ಗರಿಷ್ಠ 70 ಯೂನಿಟ್‌ವರೆಗೂ ಉಚಿತ ವಿದ್ಯುತ್ ಅನ್ನು ಸರ್ಕಾರ ನೀಡುತ್ತದೆ ಎಂದು ಹೇಳಿದ್ದು, ಉಚಿತ ವಿದ್ಯುತ್ ಎಂದು ಅನಗತ್ಯ ಕರೆಂಟ್ ಬಳಕೆಗೆ ಕಡಿವಾಣ ಹಾಕುವ ದೃಷ್ಟಿಯಿಂದ ಈ ಮಾನದಂಡವನ್ನ ಸರ್ಕಾರ ಹಾಕಿಕೊಂಡಿದೆ.












Click it and Unblock the Notifications