ಎಸ್‌ಸಿಎಸ್‌ಪಿ/ಟಿಎಸ್‌ಪಿ ಕ್ರಿಯಾಯೋಜನೆಗೆ 26 ಸಾವಿರ ಕೋಟಿ ರೂ ಅನುಮೋದನೆ
ಬೆಂಗಳೂರು, ಜುಲೈ 03: ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಪರಿಶಿಷ್ಟ ಪಂಗಡಗಳ ಉಪಯೋಜನೆ ಅಡಿಯಲ್ಲಿ 2021-22ನೇ ಸಾಲಿನ 26,005 ಕೋಟಿ ರೂ ವೆಚ್ಚದ ಕ್ರಿಯಾಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಅಭಿವೃದ್ಧಿ ಪರಿಷತ್ ಶುಕ್ರವಾರ ಅನುಮೋದನೆ ನೀಡಿದೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, "ಪ್ರಸಕ್ತ ವರ್ಷ ಎಸ್‌ಸಿಎಸ್‌ಪಿ ಅಡಿ 18,331,54 ಕೋಟಿ ರೂ ಹಾಗೂ ಎಸ್‌ಟಿಎಸ್‌ಪಿ ಅಡಿ 7,673,47 ಕೋಟಿ ರೂ ವೆಚ್ಚದ ಕ್ರಿಯಾಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ" ಎಂದು ತಿಳಿಸಿದರು.

2021-22ನೇ ಸಾಲಿನ 35 ಅಭಿವೃದ್ಧಿ ಇಲಾಖೆಗಳ ಮೂಲಕ ಅನುದಾನ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.
"ಕಳೆದ ಆರ್ಥಿಕ ವರ್ಷದಲ್ಲಿ ನೀಡಲಾಗಿದ್ದ ಯೋಜನೆಯ ಅನುದಾನವನ್ನು ಬಾಕಿ ಉಳಿಸಿಕೊಂಡಿಲ್ಲ. 2020-21ರ ವರ್ಷದಲ್ಲಿ ನೀಡಲಾದ ಅನುದಾನದ 95% ಅನ್ನು ಸರ್ಕಾರ ಸೂಕ್ತ ರೀತಿ ವಿನಿಯೋಗಿಸಿಕೊಂಡಿದೆ" ಎಂದು ಸ್ಪಷ್ಟಪಡಿಸಿದರು.
2017ರ ಎಸ್‌ಸಿಎಸ್‌ಪಿ/ಟಿಎಸ್‌ಪಿ ನಿಯಮದ ಅಡಿಯಲ್ಲಿ ಎಲ್ಲಾ ಇಲಾಖೆಗಳಿಗೆ ಮೊದಲ ತ್ರೈಮಾಸಿಕದಲ್ಲಿ ಕಂತು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಶೌಚಾಲಯ, ಸ್ನಾನ ಗೃಹಗಳ ನಿರ್ಮಾಣಕ್ಕಾಗಿ ಎಸ್‌ಸಿ ಎಸ್‌ಟಿ ಫಲಾನುಭವಿಗಳಿಗೆ ನೀಡಲಾಗುವ ಸಬ್ಸಿಡಿ ಮೊತ್ತವನ್ನು ತಲಾ 15 ಸಾವಿರ ರೂಪಾಯಿಯಿಂದ ತಲಾ 20,000 ರೂಪಾಯಿಗಳಿಗೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.












Click it and Unblock the Notifications