ಅಕ್ರಮ-ಸಕ್ರಮದ ಬಗ್ಗೆ ಗುಡ್‌ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ
ರಾಜ್ಯದಲ್ಲಿ ಬಗರ್ ಹುಕುಂ (ಅಕ್ರಮ ಸಕ್ರಮ) ಅರ್ಜಿ ವಿಲೇವಾರಿ ಕೆಲಸಗಳು ಶೀಘ್ರವಾಗಿ ಮುಗಿಸಬೇಕು. ಈ ವಿಚಾರದಲ್ಲಿ ಆಲಸ್ಯ ತೋರುವ ತಹಶೀಲ್ದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ ನೀಡಿದ್ದಾರೆ.
ಇಂದು ವಿಕಾಸಸೌಧದಲ್ಲಿ ರಾಜ್ಯದ ಎಲ್ಲಾ ತಹಶೀಲ್ದಾರ್‌ಗಳು ಹಾಗೂ ಉಪ ವಿಭಾಗಾಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸಭೆ ನಡೆಸಿದರು. ಬಗರ್ ಹುಕುಂ ಅರ್ಜಿಗಳ ವಿಲೇವಾರಿಗೆ ಅಧಿಕಾರಿಗಳು ಈಗಲೂ ನಿಧಾನ ಮಾಡುವುದು ಸರಿಯಲ್ಲ. ಹೀಗಾಗಿ ಎಲ್ಲ ತಹಶೀಲ್ದಾರರಿಗೆ ಅಕ್ಟೋಬರ್ ಹಾಗೂ ನವೆಂಬರ್ ಅಂತ್ಯದವರೆಗೆ ಎರಡು ತಿಂಗಳ ಗಡುವು ನೀಡುತ್ತಿದ್ದೇನೆ ಎಂದಿದ್ದಾರೆ.

ಈ ನಿಗದಿತ ಅವಧಿಯಲ್ಲೂ ಬಗರ್ ಹುಕುಂ ಅರ್ಜಿಗಳ ಸಮರ್ಪಕ ವಿಲೇವಾರಿ ಹಾಗೂ ಅರ್ಹ ರೈತರಿಗೆ ಭೂ ಮಂಜೂರು ಆಗದಿದ್ದರೆ, ತಹಶೀಲ್ದಾರರಿಗೆ ನೋಟೀಸ್ ಜಾರಿಗೊಳಿಸಿ ಸೂಕ್ತ ಕಾನೂನು ಕ್ರಮ ಜರುಗಿಸುತ್ತೇನೆ ಎಂದು ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ.
ಅರ್ಹ ಭೂರಹಿತರಿಗೆ ಜಮೀನು ಮಂಜೂರು ಮಾಡಬೇಕೆಂಬುದು ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ಇದೇ ಕಾರಣಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಅಕ್ರಮ ಸಕ್ರಮ ಯೋಜನೆಯಡಿ ಬಗರ್ ಹುಕುಂ ಅರ್ಜಿ ಆಹ್ವಾನಿಸಿತು. ಅಧಿಕಾರಿಗಳಿಗೂ ಬಗರ್ ಹುಕುಂ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡಲು ಸೂಚಿಸಿದ್ದೇನೆ. ಆದರೂ, ಬಡವರ, ರೈತರ ಪರ ಕೆಲಸ ಮಾಡಲು ಅಧಿಕಾರಿಗಳು ಅಸಡ್ಡೆ ತೋರುತ್ತಿದ್ದಾರೆ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.

ಬಗರ್ ಹುಕುಂ ಅರ್ಜಿ ವಿಲೇವಾರಿ ಸಂಬಂಧ ಒಂದು ವರ್ಷದ ನಂತರವೂ ಅಧಿಕಾರಿಗಳು ವಿಳಂಬ ಮಾಡುವುದರಲ್ಲಿ ಅರ್ಥವಿಲ್ಲ. ನಮೂನೆ 50, 53 ಮತ್ತು 57ರಡಿಯಲ್ಲಿ ಒಟ್ಟು 14 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ ಹೆಚ್ಚು ಅರ್ಜಿಗಳು ಅನರ್ಹವಾಗಿವೆ ಎಂದಿದ್ದಾರೆ.
ಅಧಿಕಾರಿಗಳು ಈ ಅನರ್ಹ ಅರ್ಜಿಗಳನ್ನು ಅನೂರ್ಜಿತಗೊಳಿಸಿ ಅರ್ಹರಿಗೆ ಶೀಘ್ರ ಜಮೀನು ಮಂಜೂರು ಮಾಡಬೇಕು. ಅಕ್ಟೋಬರ್-ನವೆಂಬರ್ ತಿಂಗಳೊಳಗೆ ಈ ಕೆಲಸಗಳು ಮುಗಿಯಬೇಕು. ಈ ಬಗ್ಗೆ ಮತ್ತೊಮ್ಮೆ ಸಭೆ ನಡೆಸಿ ಪ್ರಗತಿ ಪರಿಶೀಲನೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಅರ್ಹ ಫಲಾನುಭವಿಗಳಿಗೆ ಭೂಮಿ ಮಂಜೂರು ಮಾಡಲು ವಿಳಂಬ ಧೋರಣೆ ಸರಿಯಲ್ಲ. ಇಲ್ಲಿವರೆಗೆ ಎಷ್ಟು ಜನರ ಅರ್ಜಿಗಳು ಅರ್ಹ ಎಂದು ಅಧಿಕಾರಿಗಳು ಗುರುತಿಸಿದ್ದೀರೋ ಅವರೆಲ್ಲರಿಗೂ ಒಂದೆರಡು ವಾರದಲ್ಲಿ ಸಾಗುವಳಿ ಚೀಟಿ ನೀಡಬೇಕು. ಬಗರ್ ಹುಕುಂ ಕಮಿಟಿ ಸಭೆ ನಡೆಸಲು ಶಾಸಕರು ಸಮಯ ಕೊಡದಿದ್ದರೆ ನನಗೆ ತಿಳಿಸಿ, ನಾನು ಅವರೊಂದಿಗೆ ಮಾತನಾಡಿ ಸಮಯ ನಿಗದಿಪಡಿಸುವೆ ಎಂದಿದ್ದಾರೆ.
ಗ್ರಾಮ ಆಡಳಿತ ಅಧಿಕಾರಿಗಳಿಗೆ ಈಗಾಗಲೇ ಕೆಲಸದ ಒತ್ತಡ ಹೆಚ್ಚಾಗಿದ್ದು, ಅವರನ್ನು ಅನಗತ್ಯವಾಗಿ ಫೀಲ್ಡ್‌ಗೆ ಕಳುಹಿಸಬೇಡಿ ಎಂದು ತಹಶೀಲ್ದಾರರಿಗೆ ಸಚಿವ ಕೃಷ್ಣಬೈರೇಗೌಡ ಸಲಹೆ ನೀಡಿದ್ದಾರೆ. ಈಗಾಗಲೇ ಸಲ್ಲಿಕೆಯಾಗಿರುವ ಬಗರ್ ಹುಕುಂ ಅರ್ಜಿಗಳ ಪೈಕಿ ಅರ್ಹ ಅರ್ಜಿಗಳು ಯಾವುವು? ಅನರ್ಹ ಅರ್ಜಿಗಳು ಯಾವುದೆಂದು ತಹಶೀಲ್ದಾರ್‌ಗಳಿಗೆ ಮೊದಲ ಹಂತದಲ್ಲೇ ತಿಳಿಯುತ್ತೆ. ಹಾಗಾಗಿ ಈ ಕೆಲಸವನ್ನು ಅಧಿಕಾರಿಗಳು ಕಚೇರಿಯಲ್ಲೇ ಮುಗಿಸಿ. ಗ್ರಾಮ ಆಡಳಿತ ಅಧಿಕಾರಿಗಳಿಗೆ ಅನಗತ್ಯವಾಗಿ ಅರ್ಜಿಗಳ ಪರಿಶೀಲನೆಗಾಗಿ ಫೀಲ್ಡ್‌ಗೆ ಕಳುಹಿಸಬೇಡಿ ಎಂದು ಸೂಚನೆ ನೀಡಿದ್ದಾರೆ.












Click it and Unblock the Notifications