ಕರ್ನಾಟಕದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಬಂಪರ್ ಗುಡ್‌ನ್ಯೂಸ್
ಕರ್ನಾಟಕದ ಹಾಸ್ಟೆಲ್‌ಗಳಲ್ಲಿ ಅವಧಿ ಮೀರಿ ಹಾಗೂ ಅನಧಿಕೃತವಾಗಿ ವಾಸಿಸುತ್ತಿರುವವರು, ಹಳೆಯ ವಿದ್ಯಾರ್ಥಿಗಳ ಮೇಲೆ ರಾಜ್ಯ ಸರ್ಕಾರವು ಗಂಭೀರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಕರ್ನಾಟಕದಲ್ಲಿ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಅನಧಿಕೃತವಾಗಿ ವಾಸಿಸುತ್ತಿರುವವರಿಗೆ ರಾಜ್ಯ ಸರ್ಕಾರವು ಬಿಸಿ ಮುಟ್ಟಿಸಲು ಪ್ರಾರಂಭಿಸಿದೆ. ಸರ್ಕಾರವು ಅರ್ಹ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳಲ್ಲಿ ಅವಕಾಶ ಸಿಗುವಂತೆ ಮಾಡಬೇಕು ಎನ್ನುವ ಉದ್ದೇಶದಿಂದ ಈ ಕ್ರಮವನ್ನು ತೆಗೆದುಕೊಂಡಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಅನರ್ಹರು (ಈಗಾಗಲೇ ವಿದ್ಯಾಭ್ಯಾಸ ಪೂರೈಸಿರುವ ಹಳೆಯ ವಿದ್ಯಾರ್ಥಿಗಳು ಹಾಗೂ ಹೊರ ವಿದ್ಯಾರ್ಥಿಗಳು) ಸೇರಿದಂತೆ ಹಲವರು ನೆಲೆಸಿದ್ದಾರೆ. ಇದರಿಂದ ಅರ್ಹ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳಲ್ಲಿ ಅವಕಾಶ ಸಿಗುತ್ತಿಲ್ಲ. ಅರ್ಹ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎನ್ನುವ ಗಂಭೀರ ಆರೋಪಗಳು ಮೊದಲಿನಿಂದಲೂ ಕೇಳಿ ಬರುತ್ತಿದೆ. ಇದೀಗ ಕರ್ನಾಟಕ ಸರ್ಕಾರವು ಈ ನಿಟ್ಟಿನಲ್ಲಿ ಮಹತ್ವದ ಕ್ರಮವನ್ನು ತೆಗೆದುಕೊಂಡಿದೆ.

ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಸಚಿವ ಎಚ್.ಸಿ.ಮಹದೇವಪ್ಪ ಅವರು, ಹಾಸ್ಟೆಲ್‌ಗಳಲ್ಲಿ ಅನಧಿಕೃತ ವಾಸವನ್ನು ತಡೆಯಲು ಕ್ರಮ ವಹಿಸಿರುವುದಾಗಿ ಹೇಳಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ ಯಾವುದೇ ಕಾಲೇಜುಗಳಲ್ಲಿ ಶಿಕ್ಷಣವನ್ನು ಪಡೆಯದೇ ವಿದ್ಯಾರ್ಥಿ ನಿಲಯಗಳಲ್ಲಿ ಅನಧಿಕೃತವಾಗಿ ವಾಸ ಮಾಡುತ್ತಿರುವ ಜನರನ್ನು ತೆರವು ಮಾಡಲಾಗಿದೆ.
ಈ ಮೂಲಕ ಶಿಕ್ಷಣ ಪಡೆಯುತ್ತಾ ವಿದ್ಯಾರ್ಥಿ ನಿಲಯಗಳಲ್ಲಿ ವಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಂಟಾಗುತ್ತಿದ್ದ ತೊಂದರೆಯನ್ನು ತಪ್ಪಿಸುವ ಕೆಲಸ ಮಾಡಲಾಗಿದ್ದು ಇದಕ್ಕಾಗಿ ನಾನು ಇಲಾಖೆಯ ಉನ್ನತ ಅಧಿಕಾರಿಗಳನ್ನು ಅಭಿನಂದಿಸುತ್ತೇನೆ. ಇನ್ನು ಮುಂದೆ ಕಾಲೇಜುಗಳಲ್ಲಿ ಶಿಕ್ಷಣ ಪಡೆಯದೇ ಸಮಾಜ ಕಲ್ಯಾಣ ಇಲಾಖೆಯಲ್ಲಿ ಅನಧಿಕೃತವಾಗಿ ವಾಸಿಸುವಂತಹ ವ್ಯಕ್ತಿಗಳ ಮೇಲೆ ಕಠಿಣ ಕ್ರಮ ವಹಿಸಲು ಸೂಚಿಸಲಾಗಿದ್ದು ಯಾವುದೇ ವಿದ್ಯಾರ್ಥಿ ನಿಲಯದಲ್ಲಿ ಈ ರೀತಿಯ ಅನಧಿಕೃತ ಪ್ರವೇಶ ಆಗಿದ್ದರೆ ಈ ಬಗ್ಗೆ ಹಾಸ್ಟೆಲ್‌ನ ವಿದ್ಯಾರ್ಥಿಗಳು ಅಧಿಕಾರಿಗಳ ಗಮನಕ್ಕೆ ತರಬೇಕು, ಅಥವಾ ತಾವುಗಳು ನಮ್ಮ ಸಮಾಜ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ +91 94823 00400ಕ್ಕೆ ಸಹ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಅವರು ಹೇಳಿದ್ದಾರೆ.
ಸರ್ಕಾರದ ಈ ಕ್ರಮಕ್ಕೆ ಹಲವು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೇ ಕರ್ನಾಟಕದ ವಿವಿಧ ಭಾಗದ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಈ ಸಮಸ್ಯೆ ಇದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಪ್ರತಿ ಹಾಸ್ಟೆಲ್‌ನಲ್ಲಿಯೂ ಹಳೆಯ ವಿದ್ಯಾರ್ಥಿಗಳು ಮತ್ತು ಅನಧಿಕೃತ ವ್ಯಕ್ತಿಗಳಿಂದ ತುಂಬಿ ತುಳುಕುತ್ತಿವೆ. ಅಲ್ಲಿನ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಆದಷ್ಟು ಬೇಗ ಎಲ್ಲ ಹಾಸ್ಟೆಲ್‌ಗಳಲ್ಲಿ ಖಾಲಿ ಮಾಡಿಸಿ ಎಂದು ಸ್ಥಳೀಯ ವಿದ್ಯಾರ್ಥಿಗಳು ಹೇಳಿದ್ದಾರೆ.
ಸಂಧ್ಯಾ ಎನ್ನುವವರು, ಇದು ಇಲಾಖೆಯು ತೆಗೆದುಕೊಂಡ ದಿಟ್ಟ ಹೆಜ್ಜೆಗಳಲ್ಲಿ ಒಂದಾಗಿದೆ. ಇದು ಅರ್ಹ ವಿದ್ಯಾರ್ಥಿಗಳು ಸೌಲಭ್ಯವನ್ನು ಪಡೆಯಲು ಸಹಾಯ ಮಾಡುತ್ತದೆ. ಇನ್ನು ಯತೀಶ್ ಎನ್ನುವವರು, ಈ ದಿಟ್ಟ ಕ್ರಮದಿಂದ ವಿದ್ಯಾರ್ಥಿ ನಿಲಯಗಳ ಸೌಲಭ್ಯ ನಿಜವಾದ ಅರ್ಹರಿಗೆ ತಲುಪಲು ಸಾಧ್ಯವಾಗುತ್ತದೆ. ಅಕ್ರಮ ಎಸಗುವವರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ಅತ್ಯಗತ್ಯ. ವಿದ್ಯಾರ್ಥಿಗಳು ಮಾಹಿತಿ ನೀಡಲು ಸಹಾಯವಾಣಿ ಸಂಖ್ಯೆ (+91 94823 00400) ನೀಡಿರುವುದು ಉತ್ತಮ ಬೆಳವಣಿಗೆ. ಈ ಕಾರ್ಯಾಚರಣೆಗೆ ಅಭಿನಂದನೆಗಳು ಎಂದಿದ್ದಾರೆ. ಒಟ್ಟಾರೆ ಸಮಾಜ ಕಲ್ಯಾಣ ಇಲಾಖೆಯ ಕಾರ್ಯವೈಖರಿಗೆ ಅಭಿನಂದನೆ ವ್ಯಕ್ತವಾಗಿದೆ.












Click it and Unblock the Notifications